Tuesday, October 25, 2016

ತೋಂತನನ ಧಿರಿನ...



ಇದು ನಾನು ಬರೆಯುತ್ತಿರುವ ಕತೆಯ ಭಾಗ. ಕತೇನ ಮುಂದುವರೆಸೋದಾ? ಬೇಡ್ವಾ? ಹೇಳಿ.

ತೋಂತನನ ಧಿರಿನ...
------------------------

“ಐ ಲವ್ ಯೂ”

“ನಾನೂ”

“ನಾನೂ ಅಂದ್ರೆ ಏನು ನಾನೂ?? ನನಗರ್ಥವಾಗಲಿಲ್ಲ, ಹಾಗಂದ್ರೆ ಏನು ಹೇಳಿ?” ಹೀಗೆ ಕೇಳುವಾಗ ತುಂಟ ನಗೆಯೊಂದು ಅವನ ಮುಖದಲ್ಲಿ ಮೂಡಿರುವುದನ್ನು ಅವನ ದನಿಯಿಂದಲೇ ಗುರುತಿಸಬಲ್ಲಳು ಅವಳು. ಅದು ಅವಳನ್ನು ಇನ್ನೂ ನಾಚಿಕೊಳ್ಳುವಂತೆ ಮಾಡಿಬಿಡುತ್ತದೆ.

’ಏನಿಲ್ಲ” ಎಂದು ಬಿಡುತ್ತಾಳೆ ಪಟಕ್ಕಂತ.

“ರೀ ಬೇಗ, ಫೋನ್ ಬಿಲ್ ಹೆಚ್ಚಾಗುತ್ತೆ”

“ಊಂಹೂಂ ನನ್ ಕೈಲಾಗಲ್ಲ ಹೋಗ್ರಿ”

“ಕೈಲೆ ಅಲ್ಲ್ರೀ ಬಾಯಿಲೆ ನೀವು ಹೇಳಬೇಕಾಗಿದ್ದು, ಪ್ಲೀಸ್ ಪ್ಲೀಸ್ ಪ್ಲೀಸ್”

“ರೀ....”

“ಏನ್ರೀ..?”

“ರೀ....” ಸತಾಯಿಸಬೇಡಿ ದಮ್ಮಯ್ಯ ಅನ್ನುವ ಕೋರಿಕೆ ದನಿಯಲ್ಲಿ.

“ಹೇಳ್ರೀ ಬೇಗ”

“ಊಂಹೂಂ”

"ನಾನ್ ಹೇಳಲ್ವಾ? ನಿಮ್ ಥರಾ ಆಡ್ತೀನಾ? ಇವತ್ತಿಗೆ ಆರ್ ತಿಂಗಳಾಯ್ತು, ನಾನು ದಿನಾಲೂ ತಪ್ಪದೇ ಅಷ್ಟಷ್ಟು ಸಲ ಹೇಳ್ತೀನಿ, ನೀವು ಮಾತ್ರ... ಇವತ್ತು ನೀವು ಹೇಳಿಲ್ಲಾಂದ್ರೆ ಅಂದ್ರೆ ನಾನಿನ್ಮುಂದೆ ಮಾತೇ ಆಡಲ್ಲ ಹೋಗಿ. ನಿಜ್ಜ ಹೇಳ್ತಿದೀನಿ!"

“ ರೀ ಪ್ಲೀssಸ್...”

“ಸರಿ ಹಾಗಿದ್ರೆ ಹೇಳಿ ಮತ್ತೆ. ಬೇಗ”

“ಅದು... ಅದು... ಅ.. ಅ..ಅ...” ಅವಳು ಫೋನ್ ಹಿಡಿದ ಅಂಗೈ ಪೂರ್ತಿ ಬೆವರಿ, ಸಣ್ಣಗೆ ಕಂಪಿಸುತ್ತಿರುವ ಹೃದಯ, ಅದರುತ್ತಿರುವ ತುಟಿ, ಮೈಯ ಇಡೀ ರಕ್ತ ಮುಖಕ್ಕೇ ನುಗ್ಗಿತೇನೋ ಎಂಬಂತೆ ಬಿಸಿಯಾದ ಮುಖ, ಲಜ್ಜೆಯಿಂದ ಬಾಗಿದ ಕಣ್ಣುಗಳು...

“ಹೂಂ....”

“...........”

“ಮಗೂ, ಪ್ಲೀಸ್ ಒಂದೇ ಒಂದ್ಸಲ...ಅದೇನ್ ಅಷ್ಟು ಕಷ್ಟದ್ದಾ? ಸೋ ಸಿಂಪಲ್, ನಾನ್ ಹೇಳೊಲ್ವಾ?”

ಸಹನೆಗೆಡದ ಅವನು ಪುಸಲಾಯಿಸುತ್ತಲೇ ಇದ್ದ. ಅವಳು ಅ... ಅ... ಐ.... ತಡವರಿಸುತ್ತಲೇ ಇದ್ದಳು. ಕೊನೆಗೊಮ್ಮೆ ಅವಳ ಕಣಕಣದಲ್ಲೂ ಹರಿದಾಡುತ್ತಿದ್ದ ಭಾವ ತುಟಿ ಬಿರಿದು ಉಕ್ಕಿದ್ದೂ ಆಯ್ತು! ಆ ಕಡೆಯಿಂದ ಮುತ್ತಿನ ಸುರಿಮಳೆ. ಈ ಕಡೆ ಇವಳು ಸಂಭ್ರಮಕ್ಕೆ ನಡುಗುತ್ತಿರುವ ಕಾಲುಗಳನ್ನು ಗಟ್ಟಿ ನೆಲಕ್ಕೂರುತ್ತಾ ಗೋಡೆಗಾನಿಸಿ ನಿಧಾನಕ್ಕೆ ಕುಳಿತುಕೊಂಡಳು. ಕೆಲ ಕ್ಷಣಗಳ ನಂತರ ಆ ಕಡೆಯಿಂದ ಅವನು ಮೃದುವಾದ ದನಿಯಲ್ಲಿ,
“ಫೋನ್ ಇಡ್ಲಾ...?’
ಇವಳು ಹೇಳಿದಳೋ ಇಲ್ಲವೋ ಅನ್ನುವಷ್ಟು ಮೆಲುದನಿಯಲ್ಲಿ, “ಊಂಹೂಂ......” ಫೋನ್ ಡಿಸ್ಕನೆಕ್ಟ್ ಮಾಡದೆ, ಮಾತೂ ಆಡದೆ ಮೌನವಾಗಿದ್ದುಕೊಂಡೇ ಎಷ್ಟೋ ಹೊತ್ತಿನ ತನಕ ಇಬ್ಬರೂ ಜೊತೆಗಿದ್ದರು, ತಂತಾನೇ ನಿಸ್ತಂತು ನಿಸ್ತೇಜವಾಗುವ ತನಕ....

ಏನೀ ಮಹಾನಂದವೇ, ಓ ಭಾಮಿನಿ, ಏನೀ ಸಂಭ್ರಮದಂದವೇ, ಬಲು ಚಂದವೆ...

ತನ್ನನ್ನು ತಾನು ಪ್ರೀತಿಸುವುದಕ್ಕಿಂತಲೂ ಅವನನ್ನು ಪ್ರೀತಿಸುವ ಅವಳ ನಡುವಳಿಕೆಯಲ್ಲಿ, ಮಾತಿನ ಹಿನ್ನೆಲೆಯಲ್ಲಿ ಡಿಫಾಲ್ಟ್ ಎಂಬಂತೆ ಅವನ ಪ್ರತಿ ಹೊಮ್ಮುತ್ತಿದ್ದ ಪ್ರೀತಿ, ಮಾತಾಗಿ ಬರಲು ಮಾತ್ರ ಯಾವಾಗಲೂ ಲಜ್ಜೆಯಿಂದಾಗಿ ತಡವರಿಸುತ್ತಿತ್ತು. ಅದನ್ನವ ಚೆನ್ನಾಗಿ ಬಲ್ಲವನಾಗಿದ್ದರಿಂದಲೇ ಅವಳಿಂದ ಐ ಲವ್ ಯೂ ಹೇಳಿಸಿಕೊಳ್ಳೋದು ಅವನಿಗೆ ಮುದ. ಸತಾಯಿಸಿ ಸತಾಯಿಸಿ ಅವಳಿಂದ ಹೇಳಿಸಿಯೇ ಸೈ. ಕೆಲವೊಮ್ಮೆ ಹೇಳಲೂ ಆಗದೆ, ಹೇಳದಿರಲೂ ಆಗದೆ, ಅವನು ಐ ಲವ್ ಯೂ ಅಂದಾಗಲೆಲ್ಲ “ನಾನೂss...” ಅಂದು ಬಿಡುವಳು. ಮತ್ತೆ ಅವನ ತುಂಟತನ ಶುರು, “ನಾನೂ ಅಂದ್ರೆ ಏನು ನಾನೂ?? ನನಗರ್ಥವಾಗಲಿಲ್ಲ, ಹಾಗಂದ್ರೆ ಏನು ಹೇಳಿ?”

***

ಸಾಹಿತ್ಯ ಸಮಾರಂಭವೊಂದರಲ್ಲಿ ಅವರಿಬ್ಬರ ಪರಿಚಯವಾಗಿ ವರ್ಷದ ಮೇಲಾಗಿತ್ತು. ಯಾವುದಾದರೂ ಸಭೆ ಸಮಾರಂಭಗಳಲ್ಲಿ ಆಗಾಗ ಭೇಟಿಯಾದಾಗಲೆಲ್ಲ, ‘ಚೆನ್ನಾಗಿದೀರಾ?’ ‘ಚೆನ್ನಾಗಿದೀನಿ’. ‘ನೀವೂ” “ನಾನೂ’. ಎನ್ನುವುದರ ಜೊತೆಗೆ ಇನ್ನೊಂದೆರೆಡು ಮಾತುಗಳನ್ನು ಬಿಟ್ಟರೆ, ಹೆಚ್ಚು ಮಾತಿಲ್ಲದ್ದವರು ಅವರಿಬ್ಬರೂ. ಅದೊಂದು ದಿನ ಬಾಂದ್ರಾ ರೇಲ್ವೆ ಸ್ಟೇಷನ್ನಿನಲ್ಲಿ ಇವರಿಬ್ಬರ ಅಚಾನಕ್ ಭೇಟಿಯಾಗಿ, ಇಬ್ಬರೂ ಒಂದೇ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಗೊತ್ತಾಗಿ ಜೊತೆಗೂಡಿ ಸ್ಟೆಷನ್ನಿನ ಒಳಗೆ ಬರುವಷ್ಟರಲ್ಲಿ ಲೋಕಲ್ ಟ್ರೇನ್ ಬಂದು ನಿಂತಾಗಿತ್ತು. ಲೇಡೀಸ್ ಕಂಪಾರ್ಟ್ಮೆಂಟ್ ದೂರವಿದ್ದ ಕಾರಣ ತನ್ನ ಜೊತೆಗೇ ಬರಲು ಹೇಳಿದವನ ಮಾತನ್ನು ಒಪ್ಪಿದ ಅವಳು ಟ್ರೇನ್ ಹತ್ತಿದ್ದಳು. ಎಂದಿನಂತೆ ವಿಪರೀತ್ ರಶ್. ಜನರನ್ನು ತಳ್ಳಿಕೊಂಡು ಜಾಗ ಮಾಡಿಕೊಳ್ಳುತ್ತಾ, ಬಾಗಿಲಿಗೆ ತುಸು ದೂರವಾಗಿ ಬೆನ್ನಾಸರೆಗೆ ಜಾಗ ಸಿಕ್ಕಲ್ಲಿ ಬಂದು ನಿಂತವಳು ನುಗ್ಗುವ ಜನರ ಒತ್ತಡಕ್ಕೆ ಕದಲಲೂ ಆಗದೆ ನಿಲ್ಲಲೂ ಆಗದೆ ಒದ್ದಾಡುತ್ತಿರುವಷ್ಟರಲ್ಲಿ, ಅವಳನ್ನು ಮುಂದು ಮಾಡಿಕೊಂಡು ಏರಿದ್ದ ಅವನು ಅವಳ ಎದುರು ನಿಂತು, ಅವಳು ಆಸರೆಯಾಗಿ ನಿಂತ ಆ ಕಬ್ಬಿಣದ ಗೋಡೆಯ ಮೇಲೆ ತನ್ನೆರೆಡೂ ಕೈಗಳನ್ನೂರಿ ಅವಳಿಗೆ ಭದ್ರ ಕೋಟೆಯಾಗಿ ನಿಂತ. ಉಸಿರಾಡಲು ತುಸು ಗಾಳಿ ಸಿಕ್ಕಂತಾಗಿ ಅವಳು ಸಾವರಿಸಿಕೊಂಡು ತಲೆ ಎತ್ತಿ ನೋಡಿದರೆ ನಾಲ್ಕು ಬೆರಳಿನಂತರದಲ್ಲಿ ನಿಂತಿದ್ದ ಅವನು! ಥ್ಯಾಂಕ್ಸ್ ಹೇಳಲು ಬಾಯ್ದೆರದವಳನ್ನು ಸುಮ್ಮನಾಗಿಸಿ ಅರಿವಿಲ್ಲದೆಯೇ ಲಜ್ಜೆಯಿಂದ ನೆಲ ನೋಡುವಂತೆ ಮಾಡಿದ್ದು ಅವನ ಕಣ್ಣುಗಳು! ಆ ಒಂದು ಕ್ಷಣದಲ್ಲಿ ಅದೆಷ್ಟೆಲ್ಲ ಮಾತನಾಡಿದ್ದವು ಮಿತಿಭಾಷಿಯ ಕಣ್ಣುಗಳು! ಉಸಿರಾಡಲು ಸಿಕ್ಕ ತುಸು ಗಾಳಿಗೀಗ ಮಧುರ ಕಂಪೊಂದು ಬೆರೆತು ನಸುಕಂಪನ ಅವಳ ಒಡಲಲ್ಲಿ...

ಯಾವುದೀ ಹೊಸ ಸಂಚು, ಎದೆಯಂಚಿನಲಿ ಮಿಂಚಿ.... ಮನಸು ಕನಸುಗಳನ್ನು ಕಲಿತಿರುವುದು.. ಗಿರಿ ಕಮರಿಯಾಳದಲಿ ತೆವಳಿಟ್ಟ ಭಾವಗಳ, ಮುಗಿಲ ಮಂಚದಲ್ಲಿಟ್ಟು ತೂಗುತಿಹುದು...

- ಜಯಲಕ್ಷ್ಮೀ ಪಾಟೀಲ್

4 comments:

ಸುಪ್ತದೀಪ್ತಿ suptadeepti said...

ಜಯಕ್ಕಾ, ಖಂಡಿತಾ ಮುಂದುವರಿಸಿ.
ಅಷ್ಟೂ ನವಿರುಭಾವಗಳು ಬೆನ್ನಹುರಿಯುದ್ದಕ್ಕೂ ನವಿಲುಗರಿಯಾಡಿಸಿದಂತೆ ಕಚಗುಳಿಯ ತಕಧಿಮಿ ಶುರುವಾಗಿದೆ.
ಒಂಭತ್ತನೇ ಮೋಡಹಂದರದ ಕದ ತೋರಿದ್ದೀರಿ. ಏಣಿಯ ಒಂದೊಂದೇ ಮೆಟ್ಟಲು ಹತ್ತಲು ತಯಾರಾಗಿ ನಿಂತಿದ್ದೇನೆ.

ಮಹಿಮಾ said...

ಕಥೆಯ ಅಂತ್ಯ ಖಂಡಿತಾ ಕಾಡುತ್ತದೆ, ಮುಂದುವರೆಸಿ, ಅದು ಅಂತ್ಯವಾಗುವ ತನಕ

Jayalaxmi said...

ಜ್ಯೋತಿ, ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. :) ಬರೆವೆ.

Jayalaxmi said...

ಮಾಹಿ, ಅಂತ್ಯವನ್ನ ಆಗಲೇ ಊಹಿಸಿದಂತಿದೆ ನೀನು! :) ಥ್ಯಾಂಕ್ಸು. ಬರೆವೆ.