Saturday, February 11, 2017

ಶ್ರೀರಂಗರ ಎರಡು ಕಾದಂಬರಿಗಳಲ್ಲಿನ ಸ್ತ್ರೀಯರು

 ಶ್ರೀರಂಗರ ಕಾದಂಬರಿಗಳಲ್ಲಿಯ ಸ್ತ್ರೀಯರು.

ಶ್ರೀರಂಗರು ಬರೆದ ನಾಟಕಗಳನ್ನು ನೋಡಿ, ಓದಿ ಗೊತ್ತಿದ್ದ ನನಗೆ, ಶ್ರೀರಂಗರು ಹನ್ನೊಂದು ಕಾದಂಬರಿಗಳನ್ನು ಬರೆದಿರುವರೆಂದು ಗೊತ್ತಿರಲಿಲ್ಲ. ಅವರ ಯಾವ ಕಾದಂಬರಿಯನ್ನೂ ಓದಿರಲಿಲ್ಲ ನಾನು. ಡಾ.ವಿಜಯಾ ಅವರು ಫೋನ್ ಮಾಡಿ, ’’ವೆಂಕಟಸುಬ್ಬಯ್ಯವರಿಗಾಗಿ ಶ್ರೀರಂಗರ ಕಾದಂಬರಿಯಲ್ಲಿಯ ಸ್ತ್ರೀ ಪಾತ್ರಗಳ ಕುರಿತು ಬರೆದು ಕೊಡಲು ಸಾಧ್ಯವೇ” ಎಂದಾಗ ನಾಟಕಕಾರರಾದ ಶ್ರೀರಂಗರು ಒಂದೆರೆಡು ಕಾದಂಬರಿಗಳಿಗಿಂತ ಹೆಚ್ಚಿಗೆ ಬರೆದಿರಲಾರರು ಎಂದೆಣಿಸಿ ಸಂತೋಷದಿಂದ ಒಪ್ಪಿಕೊಂಡೆ. ನಂತರ ನೋಡಿದರೆ ಹನ್ನೊಂದು ಕಾದಂಬರಿಗಳು!! ನಿಗದಿತ ಒಂದು ತಿಂಗಳ ಗಡುವಿನಲ್ಲಿ ಅಷ್ಟನ್ನೂ ಓದಿ ಬರೆಯುವುದು ನನ್ನಿಂದಾಗದು ಎಂದರಿವಾಯಿತು. ಕೊನೆಗೆ ಬರಹಕ್ಕಾಗಿ ‘ಅನಾದಿ-ಅನಂತ’ ಮತ್ತು ‘ಗೌತಮನ ಶಾಪ’ ಎಂಬ ಎರಡು ಕಾದಂಬರಿಗಳನ್ನು ಆಯ್ದುಕೊಂಡೆ. ಒಂದು ತಿಂಗಳ ಅವಧಿಯನ್ನು ಕೆಲಸಗಳ ಒತ್ತಡದ ಕಾರಣದಿಂದಾಗಿ ಮೂರು ತಿಂಗಳುಗಳಿಗೆ ವಿಸ್ತರಿಸಿಕೊಂಡಿದ್ದಕ್ಕೆ ಹಿರಿಯರಾದ ವೆಂಕಟಸುಬ್ಬಯ್ಯನವರಲ್ಲಿ ಕ್ಷಮೆ ಕೋರುತ್ತೇನೆ.



ಕಾದಂಬರಿ - ‘ಅನಾದಿ-ಅನಂತ’


ತನ್ನ ಹೆಂಡತಿ ಸರಲೆಯನ್ನು ಗಾಢವಾಗಿ ಪ್ರೀತಿಸುವ ರಾಮಣ್ಣನೆಂಬ ಸೃಜನಶೀಲ ಬರಹಗಾರ, ಅವರ ಮನೆಯಲ್ಲಿ ತನ್ನ ಅಬಚಿಯ (ಚಿಕ್ಕಮ್ಮನ) ಮಗಳೆಂದು ಸರಲೆ ಕರೆತಂದಿಟ್ಟುಕೊಂಡ ಹುಡುಗಿ ಕುಮುದ. ಈ ಮೂರು ಪಾತ್ರಗಳು ಈ ಕಾದಂಬರಿಯ ಮುಖ್ಯ ಪಾತ್ರಗಳು.

ಗಂಡು ಹೆಣ್ಣಿನ ನಡುವಣ ಪ್ರೀತಿ, ಆಕರ್ಷಣೆ, ದೈಹಿಕ ವಾಂಛೆ, ಸ್ವೀಕಾರ, ನಿರಾಕಾರಣ, ಅನಿವಾರ್ಯತೆ ಈ ಕಾದಂಬರಿಯ ವಸ್ತು. ವರ್ಷಾನುಗಟ್ಟಲೆ ಖಾಯಿಲೆ ಮಲಗಿರುವ ಹೆಂಡತಿಯನ್ನು ರಾಮಣ್ಣ ಅಪಾರವಾಗಿ ಪ್ರೀತಿಸುತಿದ್ದರೂ, ಕುಮುದೆಯೊಡನೆ ದೈಹಿಕ ಸಂಪರ್ಕ ಬೆಳೆಸುತ್ತಾನೆ. ಆಗಷ್ಟೇ ಹರೆಯಕ್ಕೆ ಕಾಲಿಟ್ಟ ಕುಮುದಳ ಮನಸು ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗದೆ, ತನಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವನಾದ ರಾಮಣ್ಣನೆಡೆಗೆ ಬೆಳೆಸಿಕೊಳ್ಳುವ ಪ್ರೀತಿ, ಸರಲೆಯೆಡೆಗೆ ಸಣ್ಣಗಿನ ಮತ್ಸರಕ್ಕೆ ದಾರಿಯಾಗುತ್ತದಾದರೂ, ತನಗೆ ಆಶ್ರಯ ನೀಡಿದವಳು ಎನ್ನುವ ಒಳಎಚ್ಚರಿಕೆ ಅದನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗುತ್ತದೆ. ಸರಲಳ ಸಾವಿನ ನಂತರ ಕುಮುದಳ ಸಹವಾಸ ಅಸಹನೀಯವೆನಿಸಿ ರಾಮಣ್ಣ ಅವಳನ್ನು ಮನೆಯಿಂದ ಆಚೆ ಹಾಕಬೇಕು ಎಂದುಕೊಳ್ಳುತ್ತಿರುವಾಗಲೇ ಕುಮುದ ತಾನು ಬಸುರಿ ಎನ್ನುವುದನ್ನು ರಾಮಣ್ಣನಿಗೆ ತಿಳಿಸುತ್ತಾಳೆ. ರಾಮಣ್ಣ ಕುಮುದಳನ್ನು ಮದುವೆಯಾಗುತ್ತಾನೆ. ಮದುವೆಯಾದರೂ ಅಂತರದ ದಾಂಪತ್ಯ ಅವರದಾಗುತ್ತದೆ. ಇದು ಈ ಕಾದಂಬರಿಯ ಸಾರಾಂಶ.

ಈ ಕಾದಂಬರಿಯಲ್ಲಿ ಬರುವ ಸ್ತ್ರೀ ಪಾತ್ರಗಳೆಂದರೆ ಸರಲೆ, ಕುಮುದ ಮತ್ತು ಕುಮುದಳು ಅತ್ತೆ ಎಂದು ಕರೆಯುವ ಅವಳ ದೂರದ ಸಂಬಂಧಿ. ರಾಮಣ್ಣನ ಸ್ನೇಹಿತನ ಹೆಂಡತಿ ಎನ್ನುವ ಪಾತ್ರವೂ ಈ ಕಾದಂಬರಿಯಲ್ಲಿದೆಯಾದರೂ ಹೀಗೆ ಬಂದು ಹಾಗೆ ಹೋಗುವ ಪಾತ್ರ ಅದಾದ್ದರಿಂದ ಆ ಪಾತ್ರ ವಿವರಣೆಗೆ ಸಿಕ್ಕುವುದೇ ಇಲ್ಲ.

ಈ ಕಾದಂಬರಿಯಲ್ಲಿನ ಸ್ತ್ರೀ ಪಾತ್ರಗಳು ವ್ಯವಹಾರಿಕವಾಗಿ ಮನೆಯಲ್ಲಿಯೇ ಇದ್ದು ಮನೆ, ಗಂಡ, ಮಕ್ಕಳು ಮತ್ತು ಅವರುಗಳ ಬೇಕು ಬೇಡಗಳನ್ನು ನೋಡುಕೊಳ್ಳುವಲ್ಲಿಗೇ ಸೀಮಿತಗೊಂಡಂಥವು. ಮನೆಯ ಹೊರಗೆ ಕೆಲಸ ಮಾಡುವುದಂತೂ ದೂರ, ಆ ನಿಟ್ಟಿನಲ್ಲಿ ಯೋಚಿಸಿಯೂ ಗೊತ್ತಿಲ್ಲದಂಥವು. ಆದರೆ ಸರಲೆ ಮತ್ತು ಕುಮುದ ಪಾತ್ರಗಳು ವೈಚಾರಿಕ ನೆಲೆಗಟ್ಟಿನಲ್ಲಿ ಯೋಚಿಸುವಂಥ ಸ್ತ್ರೀ ಪಾತ್ರಗಳು ಎನ್ನುವುದು ವಿಶೇಷ. ಈ ಕಾದಂಬರಿಯ ಹೂರಣ ಮಾನಸಿಕ ಸಂಘರ್ಷ.




ಸರಲೆ.

ರಾಮಣ್ಣನ ಮಡದಿ. ಸುಶೀಲೆ ಮತ್ತು ಸುಗುಣೆ. ಹನ್ನೆರಡು ವರ್ಷದ ತನ್ನ ಚಿಕ್ಕಮ್ಮನ ಅನಾಥ ಮಗಳನ್ನು ತನ್ನೊಡನೆ ಕರೆದುಕೊಂಡು ಬಂದು, ಮನೆಯಲ್ಲಿಟ್ಟುಕೊಂಡು ಪ್ರೀತಿಯಿಂದ ನೋಡಿಕೊಳ್ಳುವಂಥ ಮಾತೃಹೃದಯಿ. ಬರಹಗಾರ ಪತಿಯ ಸ್ಪೂರ್ತಿಯ ಸೆಲೆಯಾದವಳು. ಅವನಿಗನುಕೂಲವಾದವಳು. ಅವನ ಬರಹಗಳ ಮೊದಲ ಓದುಗಳು ಮತ್ತು ವಿಮರ್ಶಕಳೂ ಸಹ! ಎಲ್ಲರೂ ಬಯಸುವಂಥ ಸುಂದರ ದಾಂಪತ್ಯ ರಾಮಣ್ಣ-ಸರಲೆಯರದ್ದಾಗಿರುತ್ತದೆ. ಗಂಡನ ಲೋಪಗಳನ್ನೂ ವಿಶೇಷಣಗಳನ್ನಾಗಿಸಿ, ಸಹಿಸಿಯೂ ಸಹಿಸಿದ್ದನ್ನು ತೋರಿಸಿಕೊಳ್ಳದ ಸರಲೆಯಂಥ ಪತ್ನಿ ತಮಗಿರಬೇಕು ಎಂದು, ಅಂದು ಬಹುಶಃ ಇಂದೂ ಗಂಡಸರು ಅಂದುಕೊಳ್ಳುವರೇನೋ ಎಂದು ನನ್ನನಿಸಿಕೆ. ಅಲ್ಲದೇ ಆ ಕಾಲಮಾನದ ಕತೆ ಕಾದಂಬರಿಗಳಲ್ಲಿ ಇಂಥ ಆದರ್ಶಮಯ ವ್ಯಕ್ತಿಚಿತ್ರಣ ಸಾಮಾನ್ಯವಾಗಿತ್ತು ಮತ್ತು ಆಪ್ಯವಾಗಿತ್ತು. ಇಂದಿನ ಸಾಹಿತ್ಯದಲ್ಲಿ ಯಾರಾದರೂ ಇಂಥ ಪಾತ್ರಗಳನ್ನು ಸೃಷ್ಟಿಸಿದ್ದೇ ಆದರೆ ಬಹುಶಃ ಇಂದಿನ ಪೀಳಿಗೆ ಅದನ್ನು ವಾಸ್ತವಕ್ಕೆ ಬಲು ದೂರ ಎನ್ನುವ ಕಾರಣ ಕೊಟ್ಟು ಸ್ವೀಕರಿಸಲು ಹಿಂಜರಿಯಬಹುದೇನೋ…

ಗಂಡ ರಾಮಣ್ಣನಿಗೋಸ್ಕರ, ಅವನಿಗನುಕೂಲವಾಗಿ ಬದುಕುವುದೇ ತನ್ನ ಜೀವನದ ಸಾರ್ಥಕತೆ ಎಂದು ಭಾವಿಸಿ ಜೀವಿಸುತ್ತಿದ್ದ ಸರಲೆ, ಕುಮುದ ಮನೆಗೆ ಬಂದ ಎರಡು ಮೂರು ವರ್ಷಕ್ಕೆಲ್ಲ ದೀರ್ಘ ಖಾಯಿಲೆಯಿಂದ ಹಾಸಿಗೆ ಹಿಡಿಯುತ್ತಾಳೆ. ಮನೆಯ ಕೆಲಸವೆಲ್ಲ ಹದಿನೈದು-ಹದಿನಾರರ ಹರೆಯದ ಕುಮುದಳ ಮೇಲೆ ಬೀಳುವುದನ್ನು ಕಂಡು ತನ್ನ ಅಸಹಾಯಕ ಸ್ಥಿತಿಗೆ ಕೊರಗುತ್ತಾಳೆ. ಕುಮುದಳ ಬಳಲಿಕೆ ನೀಗಲೆಂದು ಗಂಡ ರಾಮಣ್ಣನಿಗೆ ಅವಳನ್ನು ಸಿನಿಮಾಗೆ ಕರೆದುಕೊಂಡು ಹೋಗಲು ಬಲವಂತಪಡಿಸಿ ಅವರಿಬ್ಬರನ್ನು ಸಿನಿಮಾಗೆ ಕಳುಹಿಸಿಕೊಡುತ್ತಾಳೆ. ಮೂರೂ ಪಾತ್ರಗಳು ಅವುಗಳ ಸ್ವಸ್ಥಾನದಲ್ಲಿರುವವರೆಗೆ ಎಲ್ಲವೂ ಸರಿಯಾಗಿರುತ್ತದೆ. ಆದರೆ ರಾಮಣ್ಣ ಮತ್ತು ಕುಮುದಳ ನಡುವೆ ಸಂಬಂಧವೇರ್ಪಟ್ಟ ಮೇಲೆ ಮೇಲ್ನೋಟಕ್ಕೆ ಯಾವ ಬದಲಾವಣೆ ಕಾಣಿಸದಿದ್ದರೂ ಮೂರೂ ಅಂತರಂಗಗಳು ಅಲ್ಲೋಲ ಕಲ್ಲೋಲಗೊಳ್ಳುತ್ತವೆ. ಹಾಸಿಗೆ ಹಿಡಿದ ಸರಲೆಯ ಸಹನೆಯ ಕುರಿತು ಅಚ್ಚರಿಯಾಗುವುದು ಈ ಹೊತ್ತಿನಲ್ಲೆ! ರಾಮಣ್ಣ ಮತ್ತು ಕುಮುದರ ಸಂಬಂಧ ಶುರುವಾದ ನಂತರ, ಅವರಿಬ್ಬರೂ ಸರಲೆಯ ಎದಿರು ನಡುವಳಿಕೆಯಲ್ಲಿ ಮೊದಲಿನಂತೆಯೇ ಇದ್ದರೂ ಸರಲೆಯ ಸೂಕ್ಷ್ಮ ಮನಸಿಗೆ ಅವರಿಬ್ಬರ ಸಂಬಂಧದ ಸುಳಿವು ಸಿಕ್ಕುಬಿಡುತ್ತದೆ. ಆದರೆ ತಪ್ಪಿಯೂ ತನಗದು ಗೊತ್ತಾಗಿದೆ ಎಂದು ಸರಲೆ ತೋರಗೊಡುವುದಿಲ್ಲ. ಆದರೂ ಇದು ಓದುಗರಿಗೆ ಗ್ರಹಿಕೆಯಾಗುವುದು ಎರಡು ಪ್ರಸಂಗದಲ್ಲಿ, ಒಮ್ಮೆ ಕುಮುದಳೊಡನೆ ಮತ್ತೊಮ್ಮೆ ರಾಮಣ್ಣನೊಡನೆ ಮಾತಾನಾಡುವಾಗ ತನ್ನ ಸಹನೆ ಉಳಿಸಿಕೊಳ್ಳಲು ಮಲಗಿದಲ್ಲಿಯೇ ಸರಲೆ ಮುಖ ತಿರುಗಿಸಿ ಏನೊಂದೂ ಮಾತನಾಡದೆ ಮೌನವಹಿಸುವಾಗ. ನೋವು, ಅಸಹನೆಯನ್ನು ಮೀರಿದ, ವಾಸ್ತವಪ್ರಜ್ಞೆ ಸರಲೆಯನ್ನು ಈ ವಿಷಯದಲ್ಲಿ ಮೌನವಹಿಸುವಂತೆ ಮಾಡುತ್ತದೆಯೇ? ಇನ್ನೊಬ್ಬರ ಆಸರೆಯಿಲ್ಲದೆ ಬದುಕಲಾಗದ ಅಸಹಾಯಕ ಸ್ಥಿತಿಯಲ್ಲಿ, ಅದೂ ರಾಮಣ್ಣ ಮತ್ತು ಕುಮುದಳ ಮೇಲೆಯೇ ತಾನು ಅವಲಂಬಿತಳಾಗಿರುವುದೂ ಮತ್ತು ಖಾಯಿಲೆಯ ನಿಃಶ್ಯಕ್ತಿಯ ಕಾರಣದಿಂದಾಗಿ ರಾಮಣ್ಣನಿಗೆ ಸುಖ ಕೊಡಲಾಗದ ಅನಿವಾರ್ಯತೆಯೂ ಸೇರಿ ಅವರಿಬ್ಬರ ಸಂಬಂಧ ಗೊತ್ತಾಗಿಯೂ, ರಾಮಣ್ಣನ ಮೇಲಿನ ಪ್ರೀತಿಯಿಂದಾಗಿ ಸರಲೆ ಈ ಕುರಿತ ತನ್ನೊಳಗಿನ ನೋವನ್ನು ತೋರಗೊಡುವುದಿಲ್ಲವೇ ಎಂಬ ಅನಿಸಿಕೆ ಮೂಡುತ್ತದೆ. ಆದರೆ ಸರಲೆಯ ನೋವು ಪ್ರಕಟಗೊಳ್ಳುವುದು ಇನ್ನೊಂದು ರೀತಿಯಲ್ಲಿ. ಅದು ತಾನಿನ್ನು ಹೆಚ್ಚು ದಿನ ಬದುಕುವುದಿಲ್ಲವಾದ್ದರಿಂದ ರಾಮಣ್ಣ ತಾನು ಬದುಕಿರುವಾಗಲೇ ಇನ್ನೊಂದು ಮದುವೆಯಾಗಬೇಕೆಂದು ಆಗಾಗ ಅವನಿಗೆ ಬಲವಂತಪಡಿಸುವುದರ ಮೂಲಕ. ಮೊದಮೊದಲು ರಾಮಣ್ಣನಿಗೆ ’ಇನ್ನೊಂದು ಮದುವೆಯಾಗಿ’ ಎನ್ನುವ ಸರಲೆ ನಂತರ ನೇರವಾಗಿ ಕುಮುದಳನ್ನೇ ಮದುವೆಯಾಗಲು ಸೂಚಿಸುತ್ತಾಳೆ. ರಾಮಣ್ಣ ಸತತವಾಗಿ ಸರಲೆಯ ಮಾತನ್ನು ನಿರಾಕರಿಸುತ್ತಾ ಬರುತ್ತಾನೆ. ಕೊನೆಗೊಮ್ಮೆ ‘ಆಯ್ತು ಅದರ ಬಗ್ಗೆ (ಕುಮುದಳನ್ನು ಮದುವೆಯಾಗುವುದರ ಬಗ್ಗೆ) ವಿಚಾರ ಮಾಡ್ತೀನಿ’ ಎನ್ನುತ್ತಾನೆ ರಾಮಣ್ಣ. ಅಂದೇ ಸರಲೆ ಸಾಯುತ್ತಾಳೆ. ರಾಮಣ್ಣ ಮದುವೆಯ ಕುರಿತು ಯೋಚಿಸುತ್ತೇನೆ ಎನ್ನುವವರೆಗೂ ಅವನ ನಿರಾಕರಣೆಯ ಹಿಂದಿನ ತನ್ನ ಮೇಲಿನ ಪ್ರೀತಿ ಅಷ್ಟುದಿನ ಸರಲೆಯನ್ನು ಜೀವದಿಂದಿರುವಂತೆ ನೋಡಿಕೊಂಡಿತ್ತು ಎನಿಸುತ್ತದೆ ನನಗೆ.




ಕುಮುದ.

ಮಾನಸಿಕ ಸಂಘರ್ಷದ ಅದ್ಭುತ ಚಿತ್ರಣ ಕುಮುದ ಪಾತ್ರದ್ದು. ಬಹುಶಃ ಕನ್ನಡದಲ್ಲಿ ಇಷ್ಟು ವಿಶದವಾಗಿ ಮಾನಸಿಕ ಒಳತೋಟಿಯನ್ನು ತೆರೆದಿಟ್ಟ ಇನ್ನೊಂದು ಕಾದಂಬರಿ ಇರಲಾರದೇನೋ…

ಸರಲೆಯ ಅಬಚಿ(ಚಿಕ್ಕಮ್ಮ)ಯ ಮಗಳು ಕುಮುದ. ಹನ್ನೆರೆಡು ವರ್ಷದವಳಿದ್ದಗಲೇ ಸರಲೆಯೊಂದಿಗೆ ಆಕೆಯ ಗಂಡನ ಮನೆಗೆ ಬಂದು, ಸರಲೆ ಮತ್ತು ರಾಮಣ್ಣನ ಸಹೃದಯತೆಯಿಂದಾಗಿ ಯಾವ ಕೊರತೆಯೂ ಬಾರದಂತೆ ಬೆಳೆದವಳು. ಕುಮುದ ಹರೆಯಕ್ಕೆ ಕಾಲಿಡುವ ಹೊತ್ತಿಗೆ ಸರಲೆ ಖಾಯಿಲೆಯಿಂದ ಹಾಸಿಗೆ ಹಿಡಿಯುತ್ತಾಳೆ. ಈ ಮನೆಗೆ ಬಂದ ಮೊದಲ ದಿನದಿಂದಲೇ ಕುಮುದೆಗೆ ಅದೇನು ಅಂತ ಅರ್ಥವಾಗದ ಆಕರ್ಷಣೆ ರಾಮಣ್ಣನ ಬಗ್ಗೆ. ಮುಂದೆ ಸರಲೆ ಹಾಸಿಗೆ ಹಿಡಿದು ಮೂರ್ನಾಲ್ಕು ವರ್ಷಗಳ ನಂತರ ಆಕಸ್ಮಿಕವಾಗಿ ರಾಮಣ್ಣನ ಕೈ ಸೋಕಿದ್ದೇ ನೆಪವಾಗಿ ರಾಮಣ್ಣ ಮತ್ತು ಕುಮುದಳ ನಡುವೆ ದೈಹಿಕ ಸಂಪರ್ಕವೇರ್ಪಡುತ್ತದೆ. ತಾನು ತನ್ನ ಹೆಂಡತಿಯನ್ನು ಅಪಾರವಾಗಿ ಪ್ರೀತಿಸುತ್ತೇನೆ ಎನ್ನುವ ರಾಮಣ್ಣನ ಪಾಲಿಗೆ ಕುಮುದ ದಾಹ ನೀಗಿಸಿಕೊಳ್ಳುವ ಒಂದು ಸಾಧನವಾದರೆ, ಕುಮುದ ನಿಜವಾಗಿಯೂ ರಾಮಣ್ಣನನ್ನು ಪ್ರೀತಿಸತೊಡಗುತ್ತಾಳೆ. ಹಗಲು ಹೆಂಡತಿಯೊಂದಿಗೆ ಆಪ್ತವಾಗಿ ಮಾತಾಡುವ, ರಾತ್ರಿ ತನ್ನೊಡನೆ ಸ್ವಲ್ಪ ಕಾಲ ಕಳೆಯುವ ರಾಮಣ್ಣ ಕುಮುದಳ ಪಾಲಿಗೆ ಒಗಟಾಗುತ್ತಾನೆ. ಅವನು ನಿಜವಾಗಿ ಪ್ರೀತಿಸುವುದು ಯಾರನ್ನು ಎನ್ನುವ ಗೊಂದಲ ಕುಮುದಳನ್ನು ಅಸ್ವಸ್ಥಳನ್ನಾಗಿಸುತ್ತದೆ. ತನ್ನನ್ನೇ ಅವನು ಪ್ರೀತಿಸಬೇಕು ಎನ್ನುವ ಪ್ರೀತಿಸುವ ಜೀವದ ಸಹಜ ಹಂಬಲ. ಜೊತೆಗೇ ತಾನು ಸರಲೆಗೆ ಮೋಸ ಮಾಡುತ್ತಿರುವೆ ಎನ್ನುವ ಪಾಪಪ್ರಜ್ಞೆ, ಸರಲೆಗೆ ತಮ್ಮಿಬ್ಬರ ವಿಷಯ ಗೊತ್ತಾದರೆ, ತಮ್ಮಿಬ್ಬರನ್ನೂ ಅಪಾರವಾಗಿ ಪ್ರೀತಿಸುವ ಅವಳಿಗಾಗುವ ಆಘಾತ ನೆನೆದು ಒಂದೆರೆಡು ಸಲ ಕಂಗಾಲಾಗುತ್ತಾಳೆ. ಅಕ್ಕನಿಗೆ ನೋವಾಗದಂತೆ ಇರಬೇಕೆಂದುಕೊಂಡರೂ ರಾಮಣ್ಣನೆಡೆಗಿನ ಸೆಳೆತ ಅದನ್ನು ಸಾಧ್ಯವಾಗಿಸುವುದಿಲ್ಲ.

ಆದರೆ ಹಗಲು ಹೊತ್ತಲ್ಲಿ ತನ್ನೆಡೆಗಿನ ರಾಮಣ್ಣನ ನಿರ್ಲಿಪ್ತತೆ, ರಾತ್ರಿಯೂ ಸಹ ಬಂದ ಕೆಲಸ ಮುಗಿಸಿಕೊಂಡು ಹೋಗುವವನಂತಿರುವ ರಾಮಣ್ಣನ ವರ್ತನೆ, ಮೊದಮೊದಲು ಪ್ರೀತಿಯ ಆವೇಶದಲ್ಲಿದ್ದ ಕುಮುದಳ ಗಮನಕ್ಕೆ ಅಷ್ಟಾಗಿ ಬರದೆ, ದಿನಗಳು ಕಳೆದಂತೆ, ವಾಸ್ತವದ ಅರಿವಾಗುತ್ತಿದ್ದಂತೆ, ಅವಳ ಮನಸಿನ ಮೇಲೆ ನೋವಿನ, ಅವಮಾನದ ಗಾಯಗಳಾಗಲು ಕಾರಣವಾಗುತ್ತದೆ. ಕುಮುದ ಅದೆಷ್ಟರ ಮಟ್ಟಿಗೆ ರಾಮಣ್ಣನನ್ನು ಪ್ರೀತಿಸುತ್ತಿರುತ್ತಾಳೆ ಅಂದರೆ ಅವನ ಮನೆಯಾಚೆಯ ಕೆಲವು ಚಟುವಟಿಕೆಗಳು, ಅವನು ಇವಳಿಗೆ ಹೇಳಿರದಿದ್ದರೂ ಇವಳ ಅನುಭೂತಿಗೆ ಬರುವಷ್ಟು! ಅದೂ ಸರಲೆಯ ಗಮನಕ್ಕೂ ಬರುತ್ತದೆ. ಮುಂದೆ ಸರಲೆಯ ಸಾವಿನ ನಂತರ ರಾಮಣ್ಣನಿಂದಾಗಿ ರಾಮಣ್ಣ ಮತ್ತು ಕುಮುದಳ ನಡುವೆ ಅಸಹನೆ ಹೆಚ್ಚುತ್ತಾ ಹೋಗುತ್ತದೆ. ಹೆಂಡತಿಯ ಸಾವಿನ ನಂತರ ರಾಮಣ್ಣನಿಗೆ ಕುಮುದ ಬೇಡವಾಗತೊಡಗುತ್ತಾಳೆ. ಅವಳನ್ನು ಮನೆಯಿಂದ ಆಚೆ ಅಟ್ಟಲು ಯೋಚಿಸುತ್ತಾನೆ. ತನ್ನೆಡೆಗಿನ ರಾಮಣ್ಣನ ನಿರ್ಲಿಪ್ತತೆ ಮತ್ತು ಅಸಹನೆ ಕುಮುದಳನ್ನು ಕಂಗಾಲಾಗಿಸುತ್ತದೆ. ತನ್ನ ಪ್ರೀತಿಗೆ, ಸ್ವಾಭಿಮಾನಕ್ಕೆ ಪದೇ ಪದೇ ಬೀಳುವ ಏಟು ಅವಳನ್ನು ಅಪಾರವಾಗಿ ನೋಯಿಸುತ್ತದೆ, ಹಗಲೂ ರಾತ್ರಿ ಮರುಗಿಸುತ್ತದೆ, ಅದೇ ಅವಳನ್ನು ಪೆಡಸಾಗಿಸುತ್ತದೆ. ಕೊನೆಗೊಮ್ಮೆ ರಾಮಣ್ಣನ ಮನೆಯಿಂದ ತೆರಳಲು ನಿರ್ಧರಿಸಿದ ಕುಮುದೆಗೆ ತನ್ನ ತಿಂಗಳ ಹಿಂದೆಯೇ ಮುಟ್ಟಿನ ದಿನ ಮುಂದೆ ಹೋಗಿರುವುದು ಗಮನಕ್ಕೆ ಬರುತ್ತದೆ. ಮಕ್ಕಳಿಗಾಗಿ ಹಂಬಲಿಸುತಿದ್ದ ಸರಲೆಯನ್ನು ಕುಮುದ ಆ ಹೊತ್ತಲ್ಲಿ ನೆನೆದು ಆರ್ದ್ರವಾದರೂ, ರಾಮಣ್ಣನನ್ನು ನೆನೆದು ತಿರಸ್ಕಾರದ ನಗೆ ಮೂಡುತ್ತದೆ ಅವಳ ಮೊಗದಲ್ಲಿ. ತನ್ನಿಂದ ಮಕ್ಕಳಾಗುವುದು ಸಾಧ್ಯವಿಲ್ಲದಿದ್ದರೂ, ಮಕ್ಕಳು ಮನೆಯಲ್ಲಿ ಓಡಾಡುವುದನ್ನು ಕಣ್ತುಂಬಾ ಕಾಣಬೇಕು ಎಂದು ಬಯಸಿದ್ದ ಸರಲೆ, ಆ ಕಾರಣದಿಂದಾಗಿ ತನ್ನನ್ನು ಮದುವೆಯಾಗಲು ಬಲವಂತ ಪಡಿಸಿದಾಗಲೂ ಒಪ್ಪದಿದ್ದ ರಾಮಣ್ಣನಿಗೆ (ರಾತ್ರಿ ತನ್ನೊಂದಿಗೆ ಕಳೆಯಲು ಅಭ್ಯಂತರವಿಲ್ಲದಿದ್ದವನಿಗೆ ಮದುವೆಯಾಗಲು ಮಾತ್ರ ಅಭ್ಯಂತರ!) ಈಗ ತನ್ನ ಬಸಿರಿನ ವಿಷಯ ತಿಳಿಸಿ ಅವನು ವ್ಯಥೆ ಪಡುವುದನ್ನು ನೋಡಿ ಹೊಟ್ಟೆತುಂಬಾ ನಗಬೇಕು ಎಂದು ಕುಮುದಳ ನೊಂದ ಮನಸು ಬಯಸುತ್ತದೆ.

ಇತ್ತ ರಾಮಣ್ಣನ ಮನಸು ಕುಮುದಳನ್ನು ಮನೆಯಾಚೆ ಹಾಕಲು ನಿರ್ಧರಿಸುತ್ತಿದ್ದಂತೆ, ಅದನ್ನರಿಯದ ಕುಮುದ ರಾಮಣ್ಣನ ಕೋಣೆಗೆ ಬಂದು, ತನ್ನ ಒಡಲಲ್ಲಿ ಅವನ ಚಿಗುರು ಮೂಡಿದ್ದನ್ನು ತಿಳಿಸುತ್ತಾಳೆ. ಅಷ್ಟೊತ್ತು ಕುಮುದಳನ್ನು ಹೊರಹಾಕುವ ಬಗ್ಗೆ ಯೋಚಿಸಿ ನಿರ್ಧರಿಸಿದವನು ಕುಮುದಳ ಮಾತು ಕೇಳುತ್ತಲೇ ಮದುವೆಯಾಗೋಣ ಎನ್ನುತ್ತಾನೆ! ರಾಮಣ್ಣನ ಮನೆಯಿಂದ ಹೊರನಡೆಯಬೇಕು ಎಂದುಕೊಂಡಿದ್ದ ಕುಮುದಳೂ ಸಮ್ಮತಿಸಿಬಿಡುತ್ತಾಳೆ!! ತಾಳಮೇಳವಿಲ್ಲದ ಎರಡು ಜೀವಗಳು ಅನಿವಾರ್ಯವೆಂಬಂತೆ ಮದುವೆಯ ಬಂಧನಕ್ಕೊಳಪಡುತ್ತವೆ!

ಮದುವೆಯಾದರೂ ಘಾಸಿಗೊಂಡ ಕುಮುದಳ ಮನಸು ರಾಮಣ್ಣನನ್ನು ಹತ್ತಿರ ಬರಲು ಬಿಡುವುದೇ ಇಲ್ಲ. ಸ್ವಲ್ಪವಾದರೂ ಸ್ವಾಭಿಮಾನವಿರುವ ಯಾರಿಗೇ ಆಗಲಿ, ‘ತಾನು ಬಳಕೆಯಾದೆ, ಉಪಯೋಗಿಸಲ್ಪಟ್ಟೆ’ ಎನ್ನುವುದು ಮನದಟ್ಟಾದಾಗ ಆಗುವ ಆ ನೋವು, ಅವಮಾನ ಅಳಿಸಲಾಗದಂಥದ್ದು. ಕುಮುದಳೊಡನೆ ಆಗುವುದೂ ಅದೇ. ರಾಮಣ್ಣನನ್ನು ಪ್ರೀತಿಸುತ್ತಿದ್ದರೂ ಅವಳದನ್ನು ಕೃತಿಯಲ್ಲಿ ಪ್ರಕಟಪಡಿಸುವುದೇ ಇಲ್ಲ! ನಿರ್ಲಿಪ್ತ ವಿರಾಗಿಣಿಯಂತೆ ಬದುಕುತ್ತಾಳೆ. ಅವಳ ಮನಸಿಗಾದ ನೋವನ್ನು, ಅವಮಾನವನ್ನು ವಿವರಿಸಲು, ಮದುವೆಯಾಗಿ, ಮಗುವಾದ ನಂತರ ಒಮ್ಮೆ, ರಾಮಣ್ಣನಿಗೆ ತನ್ನಿಲ್ಲಿ ಇನ್ನೂ ಕುಮುದಳಿಗೆ ಪ್ರೇಮವಿದೆ, ಆದರೆ ಆಕೆ ಅದನ್ನು ತೋರಗೊಡುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ, ಅದರಿಂದ ಅವನು ಉತ್ಸುಕನಾಗಿ ಅವಳನ್ನು ಹೊಂದಲು ಅವಳೆಡೆ ಬರುವ ಈ ಒಂದು ಪ್ರಸಂಗ ಸಾಕು. (ಶ್ರೀರಂಗ ಸಾರಸತ್ವ /ಸಂಪುಟ-೨/ ಪುಟ: ೧೫೧-೧೫೨)

“ಕುಮುದ”

ತನ್ನನ್ನು ಒಮ್ಮೆ ಚಕಿತಳಾಗಿ ನೋಡಿ ಆಕೆ ಒಮ್ಮೆಲೆ ಮುಗುಳ್ನಗೆ ನಕ್ಕಿದ್ದಳು. ಆಗಲೇ ತಿಳಿಯಬೇಕಾಗಿತ್ತು ತನಗೆ. ಆ ಮುಗುಳ್ನಗೆಯಿಂದ ಮುಖ ಸೌಮ್ಯವಾಗಿ ಕಂಡಿರಲಿಲ್ಲ.

“ಕುಮುದ”

“ಒಳಗೆ ಬನ್ನಿ”

“ಕುಮುದಾ, ಕುಮುದಾ, ಆದದ್ದನ್ನು ನೀನು ಮರೆಯುವೆ ಎಂದು ನನಗನಿಸಿತ್ತು. ಹಾಂಗ ಕೇಳಿದರೆ ನನ್ದೇ ತಪ್ಪು, ನಾನು ಒಪ್ಕೋತೀನಿ.”

“ನಿಮ್ಮಂಥ ಪ್ರಗತಿಶೀಲರು ಇದನ್ನು ತಪ್ಪು ಎಂದು ತಿಳಿಯಬೇಕೆ?”

“ಆಂ? ಏನೆಂದೆ?”

“ಅಲ್ಲ-ಹಳೇ ವಿಚಾರದವರು ಹಾಂಗ ಅನ್ನಬಹುದು, ಆದರೆ ನೀವು…”

“ಯಾವುದು? ಏನು? ಯಾವ ವಿಷಯ ನೀನು ಮಾತಾಡ್ತಾ ಇರೋದು?”

“ಸೂಳೇರನ್ನ ಮದುವೆಯಾಗೋದು.”

“ಕುಮುದಾ!” ಚಾವಟಿಯ ಹೊಡೆತಕ್ಕೆ ಆಕ್ರೋಶಿಸುವವನಂತೆ ಕೂಗಿದ.

“ಪ್ರೀತಿಸದೇ ಇದ್ದ ಹೆಂಗಸಿನ ಸಹವಾಸ ಅಂದ್ರ, ಸೂಳೆಯ ಸಹವಾಸ ಅಂತ ನೀವೇ…”

“ಕುಮುದಾ, ಕುಮುದಾ, ಯಾಕ ದಂಡಸ್ತಿ ನನ್ನ ಇಂಥಾ ಮಾತಿನಿಂದ? ನಿನ್ನನ್ನ ಪ್ರೀತಿಸದೇ ಇದ್ದರೆ ನಿನ್ನ ಮದುವೆಯಾಗುತ್ತಿದ್ದೆನೆ ನಾ? ಯಾಕ ಇಲ್ಲದ ವಿಚಾರ ತಲೆವಳ್ಗ ತುಂಬಿಕೊಂಡು…”

“ನನಗೇ ಮಗು ಬೇಕಾಗಿತ್ತು. ಅದಕ್ಕ ನಿಮ್ಮನ್ನ ನಾ ಜವಾಬ್ದಾರ ಅಂತ ಹಿಡಿಯೂದಿಲ್ಲ. ಈಗಾದ್ರೂ ಸಮಾಧಾನ ಆಯ್ತೊ?”

“ಕುಮುದಾ, ಕುಮುದಾ, ಯಾವುದೋ ತಪ್ಪು ಕಲ್ಪನೆಯಿಂದ ನೀನು ಏನೇನೊ ಕಲ್ಪಿಸ್ಕೊಂಡೀದಿ…”

“ನನ್ನ ಕಲ್ಪನೆ ತಪ್ಪೋದಿಲ್ಲ. ಈಗ ನೀವು ಇಲ್ಲಿ ಯಾಕ ಬಂದೀರಿ ಅನ್ನೊ ಕಲ್ಪನೆ ನನಗಿದೆ. ಅದನ್ನ ತಪ್ಪು ಅಂತೀರಾ? ಆದರೆ ಒಂದು ಮಾತು. ನಿಮ್ಮ ತೃಪ್ತಿಗೆ ನಾನು ಅಡ್ಡ ಬರೋದಿಲ್ಲ. ಒಂದ್ಮಾತು ಮೊದ್ಲು ನನಗ ತಿಳುಹಿಸಿಕೊಡಿರಿ. ಈಗ ನೀವು ಇಲ್ಲಿ ಬಂದಿದ್ದು, ನಾ ನಿಮ್ಮ ಮದುವೇ ಹೆಂಡತಿ ಅನ್ನೋ ಅಧಿಕಾರದಿಂದಲೊ, ಇಲ್ಲಾ ನಾನು ಅಂದ್ರೆ ನಿಮಗೆ ಮೋಹಿತಳಾದ ಒಬ್ಬ ಸ್ವೇಚ್ಛಾಚಾರಿಣಿ ಅಂತಲೊ? ಯಾವುದನ್ನ ನೀವು ಹೇಳ್ತೀರಿ, ಆ ಪಾತ್ರ ಅಭಿನಯಿಸಲಿಕ್ಕೆ ನಾ ಸಿದ್ಧ.”


ಕುಮುದಳನ್ನು ಮದುವೆಯಾದ ಹತ್ತು ವರ್ಷಗಳಲ್ಲಿ ರಾಮಣ್ಣನಿಗೆ ತನ್ನಿಂದಾದ ತಪ್ಪು ಅರಿವಾಗಿ ಕುಮುದಳೆಡೆಗೆ ನಿಧಾನವಾಗಿ ಪ್ರೀತಿ ಮೂಡಿದರೂ, ಇದೇ ಕಾರಣದಿಂದಾಗಿ ಕುಮುದ ತನ್ನನ್ನು ದೂರವಿಟ್ಟಿದ್ದರಿಂದಾಗಿ, ಹೇಳಲು ಧೈರ್ಯ ಸಾಲದಾಗುತ್ತದೆ. ರಾಮಣ್ಣನಿಗಾಗಿ ಏರ್ಪಟ್ಟ ದೊಡ್ಡ ಸತ್ಕಾರ ಸಮಾರಂಭದ ಒಂದು ದಿನ, ಕುಮುದಳ ಮನಸಿನಲ್ಲಿ ರಾಮಣ್ಣನೆಡೆಗಿದ್ದ ಪ್ರೀತಿ-ದ್ವೇಷಗಳಲ್ಲಿ ಪ್ರೀತಿಯೇ ಗೆದ್ದಿತು ಅನ್ನುವಷ್ಟರಲ್ಲಿ ಅಂದೇ ಆಗುವ ಅವರಿಬ್ಬರ ಮಗ ಮೋಹನನ ಆಕಸ್ಮಿಕ ಸಾವಿನೊಂದಿಗೆ ಕಾದಂಬರಿ ಅಂತ್ಯ ಕಾಣುತ್ತದೆ.

ಮಗ ಮೋಹನ ಹೋಲಿಕೆಯಲ್ಲಿ, ವಿಶೇಷವಾಗಿ ಮೋಹನನ ಕಣ್ಣುಗಳು, ನೋಟ ಸರಲೆಯನ್ನೇ ಹೋಲುತ್ತಿರುತ್ತವೆ ಎನ್ನುವುದು ಎರಡು ಮೂರು ಕಡೆಗಳಲ್ಲಿ ಈ ಕಾದಂಬರಿಯಲ್ಲಿ ಓದಲು ಸಿಗುತ್ತದೆ. ಅದನ್ನು ಆಧಾರವಾಗಿಟ್ಟುಕೊಂಡು ಯೋಚಿಸುವುದಾದರೆ ಮೋಹನನ ಸಾವು, ರಾಮಣ್ಣನ ಮನಸಿನೊಳಗಿನ ಸರಲೆಯ ಸಾವನ್ನು ಸೂಚಿಸುತ್ತದೆಯೇ ಎನ್ನುವ ಅನುಮಾನ ನನ್ನದು…




ಕುಮುದಳ ಅತ್ತೆ.

ಈ ಪಾತ್ರ ಪಕ್ಕಾ ಹೆಣ್ಣು ಮನಸಿನ ಕಾಂಪ್ರಾಮೈಜಿಂಗ್ ಗುಣವುಳ್ಳದ್ದು. ಗಂಡನಿಗೆ ಹೊರಗಿನದೊಂದು ಸಂಬಂಧವಿದೆಯಂದು ಗೊತ್ತಾದಾಗಲೂ, ಅದರ ಬಗ್ಗೆ ಎಷ್ಟೇ ಅಸಮಾಧಾನವಿದ್ದರೂ, ಕೊನೆಗೆ ಆಡಿ ಸೋತ ಮಗು ಮನೆಗೇ ಬರುವಂತೆ ತನ್ನ ಗಂಡ ತನ್ನಲ್ಲಿಗೇ ಬರುತ್ತಾನೆ ಎಂಬ ಸುಳ್ಳು ಸಮಾಧಾನವನ್ನು ತಂದುಕೊಂಡು, ಜೀವನದಲ್ಲಿ ಸಿಕ್ಕ ಸಣ್ಣಪುಟ್ಟ ಸಂತೋಷಗಳನ್ನೇ ಬದುಕಿಡೀ ಮೆಲುಕು ಹಾಕುತ್ತಾ ಬದುಕನ್ನು ಸಹ್ಯವಾಗಿಸಿಕೊಂಡು ಆಯಸ್ಸು ಸವೆಸಿದ ಜೀವ. ಕುಮುದ ತನ್ನಲ್ಲಿ ಬಂದಾಗಲೆಲ್ಲ ತನ್ನ ಬದುಕನ್ನು ಇಷ್ಟಿಷ್ಟೇ ಅವಳೆದುರು ತೆರೆದುಕೊಳ್ಳುತ್ತಾಳೆ.



****************************************************************************





ಕಾದಂಬರಿ - ‘ಗೌತಮನ ಶಾಪ’

ಗುಂಡಾಚಾರಿ ಈ ಕಾದಂಬರಿಯ ಮುಖ್ಯ ಪಾತ್ರ. ಆಸೆಗಳಿರುವ ಆದರೆ ಮಹತ್ವಾಕಾಂಕ್ಷಿಯಲ್ಲದ, ದುಷ್ಟನಲ್ಲದ, ಗಾಳಿ ಬಂದತ್ತ ತೂರಿಕೊಳ್ಳುತ್ತಾ, ಆಸರೆ ಸಿಕ್ಕಲ್ಲೆಲ್ಲ ಅನುಕೂಲ ಮಾಡಿಕೊಳ್ಳುತ್ತಾ, ಮದುವೆಗೆ ಮುಂಚೆ ಹೆಂಗಸರ ಸಹವಾಸ ಮಾಡಿ ಗೌತಮನ ಶಾಪ ಹೊತ್ತ ಇಂದ್ರನಂತಾದವನು. ಆದರೆ ಅದರ ಶಿಕ್ಷೆ ಮಾತ್ರ ಎಂಟು ಮಕ್ಕಳನ್ನು ಹೆತ್ತರೂ ಒಂದೇ ಮಗುವನ್ನು ಉಳಿಸಿಕೊಳ್ಳಲಾಗುವ ಅವನ ಹೆಂಡತಿ ಸುಂದರಕ್ಕನಿಗೆ. ಆ ಒಂದು ಮಗು ಸಹ ಬದುಕುಳಿಯುವುದು ಗುಂಡಾಚಾರಿ ತಾನು ವೈದ್ಯರಲ್ಲಿ ಚಿಕಿತ್ಸೆ ತೊಗೊಂಡ ಕಾರಣದಿಂದಾಗಿ.

ಈ ಕಾದಂಬರಿಯಲ್ಲಿ ಹಲವಾರು ಸ್ತ್ರೀ ಪಾತ್ರಗಳು ಬರುತ್ತವೆ. ಇಲ್ಲಿ ಬರುವ ಸ್ತ್ರೀ ಪಾತ್ರಗಳ್ಯಾವೂ ಹೆಚ್ಚು ಶಿಕ್ಷಣ ಪಡದವುಗಳಲ್ಲ. ಭಾಗಶಃ ಎಲ್ಲ ಸ್ವಭಾವದ ಸ್ತ್ರೀಯರೂ ಈ ಕಾದಂಬರಿಯಲ್ಲಿರುವುದೊಂದು ವಿಶೇಷ. ಜೊತೆಗೆ ಮನೆ ಹೊರಗೂ ದುಡಿಯುವ ಹೆಣ್ಣು ಪಾತ್ರಗಳೂ ಇವೆ. ‘ಅನಂತ-ಅನಾದಿ’ಯಲ್ಲಿಯ ಸ್ತ್ರೀ ಪಾತ್ರಗಳಂತೆ ಕೇವಲ ಮನೆಗೆ ಸೀಮಿತಗೊಂಡ ಪಾತ್ರಗಳಲ್ಲ ಇಲ್ಲಿನವು.



ಗುಂಡಾಚಾರಿಯ ತಾಯಿ.


ಈಕೆಗೊಂದು ಹೆಸರು ಕೊಡದೇ ಗುಂಡಾಚಾರಿಯ ತಾಯಿ ಎಂದೇ ಪ್ರಾಸ್ತಾವಿಸುತ್ತಾ ಹೋಗುತ್ತಾರೆ ಶ್ರೀರಂಗರು. ಲೋಲುಪ, ಫಟಿಂಗ ಗಂಡನನ್ನು ಅನ್ನಲೂ ಆಗದೇ ಆಡಲೂ ಆಗದೇ, ಮಾನಸಿಕವಾಗಿ ನೋವು ಅನುಭವಿಸುತ್ತಲೇ ಮಗನ ಭವಿಷ್ಯವನ್ನು ಚಿಂತಿಸುವ, ಅವನ ವಿದ್ಯೆಯತ್ತ, ಏಳಿಗೆಯತ್ತ ಗಮನ ಹರಿಸುವ ಜೀವ ಗುಂಡಾಚಾರಿಯ ತಾಯಿ. ಮಗನನ್ನು ಶಾಲೆಗೆ ಸೇರಿಸಲು ಆಸಕ್ತಿ ತೋರದ ಗಂಡನಿಗೆ ಹೇಳಿ ಸಾಕಾಗಿ ತಾನೇ ಶಾಲೆಗೆ ಕಳುಹಿಸುತ್ತಾಳೆ. ರಾತ್ರಿ ಮಲಗುವಾಗ ಮಗನಿಗೆ ರಾಮಾಯಣದ ಕತೆಯನ್ನು ಹೇಳುತ್ತಿರುತ್ತಾಳೆ. ಶಾಲೆಯಲ್ಲಿ ದೊಡ್ಡ ಹುಡುಗರ ಸಹವಾಸದಿಂದ ‘ಪ್ರೇಮ’ದ ಬಗ್ಗೆ ಕುತೂಹಲಗೊಂಡು, ಅದನ್ನು ತಿಳಿಯಲು ಉತ್ಸುಕನಾಗಿ, ಕೊನೆಗೊಮ್ಮೆ ತನ್ನ ತಂದೆಯದು ಇನ್ನ್ಯಾರೋ ಹೆಣ್ಣಿನ ಜೊತೆ ಪ್ರೇಮವಿದೆ ಮತ್ತು ಪ್ರೇಮವೆಂದರೆ ಏನು ಎಂದು ತಿಳಿದುಕೊಳ್ಳುತ್ತಾನೆ. ಅವನ ಅಮ್ಮ ಎಂದಿನಂತೆ ರಾತ್ರಿ ರಾಮಾಯಣದ ಕತೆ ಹೇಳುವಾಗ, “ದಶರಥನಿಗೆ ಹಿರಿ ಮಗನ ಮ್ಯಾಲೆ ಭಾಳ ಪ್ರೇಮ” ಎಂದಿದ್ದು ಕೇಳಿ, ತನಗೀಗ ಪ್ರೇಮವೆಂದರೇನು ಎಂದು ಅರ್ಥವಾಗಿದೆ ಎನ್ನುತ್ತಾ, ತನಗೆ ಗೆಳೆಯನಿಂದ ಗೊತ್ತಾದ ಪ್ರೇಮದ ಕುರಿತು ಹೇಳುತ್ತಾನೆ. ತಾಯಿ ಅವಕ್ಕಾಗುತ್ತಾಳೆ.

ಇದೇ ವಿಷಯದಲ್ಲಿ ತಂದೆ ತಾಯಿಯ ನಡುವೆ ಜಗಳವಾಗಿ, ತಂದೆ ತಾಯಿಯ ಮೇಲೆ ಕೈ ಎತ್ತಲು ಹೋದಾಗ ನಡುವೆ ಹೋಗಿ ಅಪ್ಪನಿಂದ ಪೆಟ್ಟು ತಿಂದು, ಮುಂದಿನ ಪೆಟ್ಟುಗಳಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿದ ಗುಂಡಾಚಾರಿ ಮತ್ತೆ ಮನೆಗೆ ಮರಳುವುದೇ ಇಲ್ಲ! ಮಗನ ಅಭ್ಯುದಯವನ್ನೇ ಜೀವನದ ಉದ್ದೇಶವಾಗಿಸಿಕೊಂಡಿದ್ದ ಗುಂಡಾಚಾರಿಯ ತಾಯಿಯ ಪಾತ್ರ ಇಲ್ಲಿಗೆ ಕೊನೆಗೊಳ್ಳುತ್ತದೆ.



ತುಳಸಾಬಾಯಿ.

ದೊಡ್ಡೂರ ದೇಶಪಾಂಡೆಯವರ ಹೆಂಡತಿ ತುಳಸಾಬಾಯಿ. ಮನೆಬಿಟ್ಟು ಓಡಿ ಬಂದ ಗುಂಡಾಚಾರಿಗೆ, ತಮ್ಮ ಎತ್ತಿನ ಗಾಡಿಯಿಂದ ಅಕಸ್ಮಾತ್ತಾಗಿ ಕೆಳಗೆ ಬಿದ್ದಿದ್ದ ಆಭರಣದ ಪೆಟ್ಟಿಗೆಯನ್ನು ತಂದು ಕೊಟ್ಟ, ತಾನು ಅನಾಥ ಎಂದು ಹೇಳಿಕೊಂಡ ಹುಡುಗ ಗುಂಡಾಚಾರಿಯನ್ನು ಮನೆಯಲ್ಲಿಟ್ಟುಕೊಂಡು ಸಾಕಲು ಗಂಡನೆದುರು ಇಲ್ಲವೆನ್ನಲಾಗದೇ ಒತ್ತಾಯದಿಂದ ಒಪ್ಪಿಕೊಂಡಾಕೆ. ಮಾತು ಬಲ್ಲಾಕೆ. ಅಷ್ಟೇನು ವಾತ್ಸಲ್ಯಮಯಿ ಅಲ್ಲದ ಈಕೆ ಇರಲು ಮಾತ್ರ ಜಾಗ ಕೊಡೋಣ, ಊಟಕ್ಕಾದರೆ ಅವನು ನಾಲ್ಕಾರು ಮನೆ ‘ಮಧುಕರಿ’ಗೆ, ‘ವಾರದನ್ನ’ಕ್ಕೆ ಹೋಗಲಿ ಎನ್ನುತ್ತಾಳೆ. ಆದರೆ ಇರಲು ಆಶ್ರಯ ಕೊಟ್ಟಿದ್ದಕ್ಕೆ ಪ್ರತಿಯಾಗಿ ಗುಂಡಾಚಾರಿಯಿಂದ ಮನೆಗೆಲಸಗಳನ್ನು ಮಾಡಿಸಿಕೊಳ್ಳುತ್ತಿರುತ್ತಾಳೆ. ತಾವು ಗುಂಡಾಚಾರಿಗೆ ತೋರುತ್ತಿರುವ ಔದಾರ್ಯವನ್ನು ಊರ ಹೆಣ್ಣುಮಕ್ಕಳ ಮುಂದೆಲ್ಲ ಬಣ್ಣಿಸಿ ಹೇಳಿಕೊಳ್ಳುವ ತುಳಸಾಬಾಯಿ ದೊಡ್ಡಸ್ಥಿಕೆಯ ಬಡಿವಾರದ ಹೆಣ್ಣು. ತಾನು ತನ್ನ ಸಂಸಾರ ಅಷ್ಟನ್ನೇ ಯೋಚಿಸುವವಳು. ಮಗಳು ಕಮಲೆಯ ವಿಷಯ ಬಂದಾಗ ಮಾತ್ರ ಪಕ್ಕಾ ಮಾತೃಹೃದಯ. ಗಂಡಸರು ವಿದ್ಯೆ ಕಲಿಯುವುದೇ ಹೆಚ್ಚಿನ ವಿಷಯವಾಗಿದ್ದ ಆ ಕಾಲದಲ್ಲಿ, ಮಗಳ ವಿದ್ಯೆಗಾಗಿ ಮನೆ ಪಾಠಕ್ಕೆ ಮೇಷ್ಟ್ರನ್ನು ನಿಯಮಿಸಲು ಸಮ್ಮತಿಸುವಂಥಾಕೆ. ಮನೆಯಲ್ಲಿರುವ ಮಗಳ ಓರಿಗೆಯ ಗುಂಡಾಚಾರಿಯ ಜೊತೆ ಮಗಳು ಹೆಚ್ಚು ಸಲುಗೆ ಬೆಳಸಿದರೆ ವಯೋಸಹಜವಾಗಿ ಅವರಿಬ್ಬರ ನಡುವೆ ಎಲ್ಲಿ ಪ್ರೀತಿ ಮೂಡಿಬಿಡುವಿದೋ, ಏನಾದರೂ ಎಡವಟ್ಟಾಗುವುದೋ ಎಂದು ಮಾತೃಸಹಜ ಎಚ್ಚರಿಕೆಯಲ್ಲಿರುವಂಥ ಹೆಣ್ಣು ಪಾತ್ರ ತುಳಸಾಬಾಯಿಯದು.



ಕಮಲೆ.

ಮನೆ ಬಿಟ್ಟು ಓಡಿ ಬಂದ ಗುಂಡಾಚಾರಿಗೆ ಶುರುವಿನಲ್ಲಿ ಆಶ್ರಯವಿತ್ತ ದೊಡ್ಡೂರ ದೇಶಪಾಂಡೆ ದಂಪತಿಗಳ ಮಗಳು ಕಮಲಾ. ವಿದ್ಯೆ ಬುದ್ದಿಯಲ್ಲಿ ಚುರುಕಾದ, ವಾತ್ಸಲ್ಯಮಯಿ ಹುಡುಗಿ. ತಮ್ಮ ಮನೆಯಲ್ಲಿದ್ದುಕೊಂಡು ಓದುತ್ತಿರುವ ಗುಂಡಣ್ಣನ ಜೊತೆಗೆ ವಿನೋದವಾಗಿ, ಕೀಟಲೆ ಮಾಡಿಕೊಂಡು ಸ್ನೇಹದಿಂದ ಇದ್ದರೂ ಸ್ನೇಹ ಕೆಡದಂತೆ ನಡೆದುಕೊಳ್ಳುವ ಹುಡುಗಿ. ಗುಂಡಣ್ಣನೂ ಅಷ್ಟೇ, ಮಿತಿಮೀರಿ ಎಂದೂ ಆಕೆಯ ಜೊತೆ ನಡೆದುಕೊಳ್ಳುವುದಿಲ್ಲ. ಓದಿನಲ್ಲಿ ಚುರುಕಾಗಿದ್ದ, ಬೆಳ್ಳಗೆ ನೋಡಲು ಲಕ್ಷಣವಾಗಿದ್ದ ಗುಂಡಾಚಾರಿಗೇ ಕಮಲೆಯನ್ನು ದೇಶಪಾಂಡೆಯವರು ಮದುವೆ ಮಾಡಿಕೊಡಬಹುದು, ತುಂಬಾ ಯೋಗ್ಯವಾದ ಜೋಡಿ ಎಂದು ಊರ ಜನ ಊಹೆ ಮಾಡಿಕೊಳ್ಳುತ್ತಾರೆ. ಆದರೆ ಹಾಗಾಗುವುದಿಲ್ಲ.



‘ವಾರದ ಮನೆ’ಯ ಯಜಮಾನಿ.

ಗುಂಡಣ್ಣ (ಗುಂಡಾಚಾರಿ)ನಿಗೆ ವಾರದನ್ನ ಬಡಿಸುವ ಮನೆಗಳಲ್ಲಿ ಈಕೆಯ ಮನೆಯೂ ಒಂದು. ಮಕ್ಕಳಿಲ್ಲದಾಕೆ. ಒಮ್ಮೆ ಗುಂಡಣ್ಣನ್ನು ವಿಶೇಷವಾಗಿ ಸಂಜೆ ಹೊತ್ತಲ್ಲಿ ಊಟಕ್ಕೆ ಕರೆಯುತ್ತಾಳೆ. ಗುಂಡಣ್ಣನಿಗೆ ಆಶ್ಚರ್ಯವಾದರೂ ಮಕ್ಕಳಿಲ್ಲದವರು ಅನ್ಯ ಮಕ್ಕಳಿಗೆ ವಿಶೇಷ ಪ್ರೀತಿಯಿಂದ ಊಟ ಬಡಿಸಿದರೆ ಮಕ್ಕಳಾಗುತ್ತವೆ ಅನ್ನುವ ನಂಬಿಕೆ ಹಳ್ಳಿಯಲ್ಲಿರುವುದರಿಂದ ತನ್ನನ್ನು ಆಕೆ ಸಂಜೆ ಹೊತ್ತಲ್ಲಿ ಊಟಕ್ಕೆ ಕರೆದಿರಬಹುದು ಎಂದುಕೊಂಡು ಅವಳ ಮನೆಗೆ ಹೋಗುತ್ತಾನೆ. ಅಲ್ಲಿ ಹೋದ ಮೇಲೆ, ಅವಳ ಗಂಡನ ಗೈರು ಹಾಜರಿಯಲ್ಲಿ ಸುಗ್ರಾಸ ಭೋಜನವೂ ವಿಶೇಷ ಪ್ರೀತಿಯಿಂದಲೇ ಬಡಿಸಲ್ಪಡುತ್ತದೆ. ನಂತರ ಮಾತ್ರ ಗುಂಡಣ್ಣನನ್ನು ಮನೆಯಾಚೆ ಹೋಗಗೊಡದೇ, ತಪ್ಪಿಸಿಕೊಂಡು ಹೋಗಲು ನೋಡಿದರೆ ಕೂಗಿ ಗಲಾಟೆ ಮಾಡುವುದಾಗಿ ಹೆದರಿಸಿ, ಹದಿನಾಲ್ಕರ ಹರೆಯದ ಗುಂಡಣ್ಣನ ಮೇಲೆ ಅತ್ಯಾಚಾರವೆಸಗುತ್ತಾಳೆ ಆ ‘ವಾರದ ಮನೆ’ಯ ಯಜಮಾನಿ. ಇದನ್ನು ಓದಿದಾಗ ಆ ಹೆಣ್ಣಿನ ಬಗ್ಗೆ ಅದೆಂಥ ತಿರಸ್ಕಾರ ಮೂಡುತ್ತದೆಂದರೆ, ಹೆಣ್ಣೆಂದರೆ ವಾತ್ಸಲ್ಯಮಯಿ, ಮಾತೃಹೃದಯಿ, ಘಟವಾಣಿ, ಕೆಟ್ಟ ಸ್ವಭಾವದ ಅತ್ತೆ, ಕೆಟ್ಟ ಸ್ವಭಾವದ ಸೊಸೆ, ಎಂದಷ್ಟೇ ಕೇಳಿ ಕೇಳಿ ಓದಿ ಅಭ್ಯಾಸವಾದ ಮನಸಲ್ಲಿ ಹೊಲಸು ತುಳಿದಂಥ ಹೇಸಿಗೆ, ತಿರಸ್ಕಾರ ಮೂಡುತ್ತದೆ. ಇಂಥ ಹೆಂಗಸರೂ ಇರುತ್ತಾರೆ ಎನ್ನುವುದೂ ಅಲ್ಲಗಳೆಯಲಾಗದ ವಾಸ್ತವದ ಒಂದು ಮುಖ. ಇದರಿಂದ ಆಘಾತಗೊಂಡ ಗುಂಡಣ್ಣ ಆಶ್ರಯ ಕೊಟ್ಟ ದೇಶಪಾಂಡೆಯವರ ಮನೆಗೂ ಹೋಗದೆ, ಆ ಊರನ್ನೇ ತೊರೆಯುತ್ತಾನೆ.



ಬ್ರಾಹ್ಮಣತಿ.

ವಾರದ ಮನೆಯ ಯಜಮಾನಿಯ ಮನೆಯಿಂದ ಓಡುತ್ತಲೇ ಊರು ಬಿಟ್ಟ ಗುಂಡಣ್ಣ ಮುಂದೊಂದೂರಲ್ಲಿ ಆಯಾಸವಾಗಿ ಎಚ್ಚರತಪ್ಪಿ ಬೀಳುತ್ತಾನೆ. ಎಚ್ಚರಗೊಂಡ ಮೇಲೆ ವಿಪರೀತ ಬಾಯಾರಿದ ಗುಂಡಣ್ಣನ್ನು ಮನೆಯೊಳಗೆ ಕರೆದು ಉಪಚರಿಸುವವಳೇ ಈ ಬ್ರಾಹ್ಮಣತಿ. ಭಾರತದ ಧ್ಯೇಯವಾಕ್ಯವಾದ ‘ಅತಿಥಿ ದೇವೋಭವ’ವನ್ನು ಅಕ್ಷರಶಃ ಪಾಲಿಸುವ, ಮಕ್ಕಳಿಲ್ಲದ ಬಡ ವೈದ್ಯ ಬ್ರಾಹ್ಮಣ ದಂಪತಿಗಳು. ಪರಿಚಿತನಲ್ಲದ, ನೆಂಟರವನಲ್ಲದ ಗುಂಡಣ್ಣನನ್ನು ತಮ್ಮ ಮನೆಯಲ್ಲಿರುವ ತನಕ ತಿಂಗಳುಗಟ್ಟಲೆ ಮಗನಂತೇ ನೋಡಿಕೊಂಡ ನಿಸ್ವಾರ್ಥ ಮಮತಾಮಯಿ ಈಕೆ. ತಾನಾಗಿಯೇ ಹೊರಡುವೆನೆಂದು ಗುಂಡಾಚಾರಿ ಹೇಳುವ ತನಕ ಅದನ್ನು ಕೇಳುವ ಗೋಜಿಗೇ ಹೋಗದಂಥ ವಿಶಾಲ ಮನಸಿನವರು ಈ ದಂಪತಿಗಳು. ಇಲ್ಲಿ ಮಾತ್ರ ಗಂಡನನ್ನು ಹೊರತುಪಡಿಸಿ ಬರೀ ಹೆಂಡತಿಯ ಕುರಿತು ಹೇಳಲು ನನಗೆ ಸಾಧ್ಯವಾಗುತ್ತಲೇ ಇಲ್ಲ! ಜೀವನದಲ್ಲಿ ಹಾಸುಕೊಕ್ಕಾಗಿಸಿಕೊಂಡ ಆದರ್ಶದ ಅಷ್ಟೊಂದು ಸಾಮ್ಯತೆ ಇಬ್ಬರಲ್ಲೂ ಕಾಣುವುದು ಇದಕ್ಕೆ ಕಾರಣವಾಗಿರಬಹುದು. ಇವರಿಬ್ಬರಲ್ಲಿ ತಂದೆ ತಾಯಿಯನ್ನು ಕಾಣುವ ಗುಂಡಾಚಾರಿ ಇವರಿಬ್ಬರ ವಾತ್ಸಲ್ಯವನ್ನು ದುರುಪಯೋಗಪಡಿಸಿಕೊಳ್ಳಲು ಮನಸು ಮಾಡದೇ, ಅವರಿಗೆ ಇನ್ನು ಹೆಚ್ಚು ದಿನ ಹೊರೆಯಾಗುವುದು ಸರಿಯಲ್ಲ ಎನಿಸಿ ಅಲ್ಲಿಂದ ಹೊರಟು ನಿಲ್ಲುತ್ತಾನೆ. ವೈದ್ಯ ಬ್ರಾಹ್ಮಣ ತಾನೇ ತೆಗೆದ ನೂಲಿನಿಂದ ಮಾಡಿದ, ಅಗಲವಾದ ಜೋಡು ಪಂಚೆಗಳನ್ನು ಉಡುಗೊರೆಯಾಗಿ, ದಕ್ಷಿಣೆಯಾಗಿ ಎಂಟಾಣೆಯನ್ನು ಗುಂಡಾಚಾರಿಗೆ ನೀಡಿದರೆ, ಆ ತಾಯಿ ದಾರಿಗೆ ಬುತ್ತಿ ತಯಾರಿಸಿ, ದಾರಿ ಮದ್ಯದಲ್ಲಿ ಬಾಯಾರಿಕೆಗೆ ಆಸರೆಯಾಗಲೆಂದು, ಹಸನಾಗಿ ಬೆಳಗಿದ ಹಿತ್ತಾಳೆ ತಿರುಗುಣಿ ತಂಬಿಗೆಯಲ್ಲಿ ನೀರು ತುಂಬಿಕೊಡುತ್ತಾಳೆ. ಮುಂದೆ ಯುದ್ಧದ ನಂತರ ಎಲ್ಲೆಡೆ ಹರಡಿದ ಇನ್‍ಫ್ಲೂಯೆಂಜಾ ಈ ಸಾದ್ವಿಯನ್ನು ಬಲಿ ತೆಗೆದುಕೊಳ್ಳುತ್ತದೆ…

ಈ ದಂಪತಿಗಳ ಬಗ್ಗೆ ಓದುವಾಗ ಮನಸಲಿ ಅದೆಂಥಾ ಧನ್ಯತೆ ತುಂಬಿಕೊಳ್ಳುತ್ತದೆಂದರೆ, ಇಂಥವರ ಸಂತತಿ ಸಾವಿರವಾಗಲಿ ಎಂದು ಮನತುಂಬಿ ಹಾರೈಸುವಷ್ಟು!



ಚಾಹಾದ ಅಂಗಡಿಯವನ ಹೆಂಡತಿ.

ಜಂಭದ ಹೆಂಗಸು. ತನ್ನ ಕೈಕೆಳಗೆ ಕೆಲಸ ಮಾಡುವ ಹುಡುಗರನ್ನು ಮುಲಾಜಿಲ್ಲದೆ ಹೊಡೆದು ಬಡೆದು ಮಾಡುವ ಕಟು ಹೆಂಗಸು. ವೈದ್ಯ ಬ್ರಾಹ್ಮಣರಿಂದ ಬೀಳ್ಕೊಂಡು, ಪೇಟೆಯೂರಿಗೆ ಬರುವ ಗುಂಡಾಚಾರಿ, ಊಟಕ್ಕೆಂದು ಸಣ್ಣ ಚಹಾದ ಅಂಗಡಿ ಹೊಕ್ಕವನು, ಊಟದ ಸಂಪೂರ್ಣ ಹಣವನ್ನು ನೀಡಲಾಗದೆ ಅಲ್ಲಿಯೇ ಕೆಲಸ ಮಾಡುತ್ತಾ ಚಹಾದ ಅಂಗಡಿಯ ಸಾವ್ಕಾರನ ನಂಬಿಕೆ ಗಳಿಸಿಕೊಂಡವನು, ಮುಂದೆ ಸಾವ್ಕಾರ ಈ ಹೆಣ್ಣನ್ನು ಮದುವೆಯಾಗಿ ಕರೆತಂದು, ಅವಳನ್ನು ಹೋಟೆಲ್ಲಿನ ಅಡುಗೆ ಮನೆಯನ್ನು ನೋಡಿಕೊಳ್ಳಲು ಬಿಡುತ್ತಾನೆ. ಇವಳ ದೌರ್ಜನ್ಯಕ್ಕೆ ಉಪಾಯವೆಂಬಂತೆ ಗುಂಡಾಚಾರಿ ಇವಳನ್ನು ಒಲಿಸಿಕೊಂಡುಬಿಡುತ್ತಾನೆ! ಕಾಲಾನಂತರ ಸಾವ್ಕಾರನಿಗೆ ವಿಷಯ ತಿಳಿದು ಗುಂಡಾಚಾರಿಯನ್ನು ಕೆಲಸದಿಂದ ತೆಗೆದು ಹಾಕುತ್ತಾನೆ.



ಸುಗುಣಾಬಾಯಿ.

ಈಕೆ ಖಾನಾವಳಿಯೊಂದರ ಒಡತಿ. ಒಂಟಿ ಹೆಂಗಸು. ಗಂಡಸರ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು, ಕೊರಳಲ್ಲಿ ತಾಳಿ ಧರಿಸಿ, ತನ್ನ ಗಂಡ ಸೈನ್ಯದಲ್ಲಿದ್ದಾನೆ, ಸಮುದ್ರದಾಚೆ ಯುದ್ಧಕ್ಕೆ ಹೋಗಿದ್ದಾನೆ, ಅವನು ಮರಳಿ ಬರುವವರೆಗೂ ತಾನು ಹೊತ್ತು ಕಳೆಯಲು ಖಾನಾವಳಿ ತೆರೆದು, ಸೈನ್ಯಕ್ಕೆ ಸೇರುವವರಿಗೆ ಈ ಮೂಲಕ ಸಹಾಯ ಮಾಡುವ ಸತ್ಕಾರ್ಯವನ್ನು ಮಾಡುತ್ತಿರುವೆಂದು ತನ್ನ ಖಾನಾವಳಿಗೆ ಊಟಕ್ಕೆ ಬರುವ ಪ್ರತಿಯೊಬ್ಬ ಗಿರಾಕಿಯ ಬಳಿಯೂ ಹೇಳಿಕೊಳ್ಳುತ್ತಿರುತ್ತಾಳೆ. ನಮ್ಮ ಸಮಾಜದಲ್ಲಿ ಹೆಣ್ಣು ಒಂಟಿಯಾಗಿ ಬದುಕಬೇಕೆಂದರೆ ಎಷ್ಟೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎನ್ನುವುದಕ್ಕೆ ಸುಗುಣಾಬಾಯಿಯ ಈ ತಂತ್ರವೇ ಸಾಕ್ಷಿ.

ಚಹಾದ ಅಂಗಡಿಯ ಕೆಲಸ ಕೆಲಸ ಕಳೆದುಕೊಂಡು ಕೆಲಸ ಅರಸುತ್ತಾ ಬರುವ ಗುಂಡಾಚಾರಿಗೆ ಸುಗುಣಾಬಾಯಿಯ ಖಾನಾವಳಿ ಕಣ್ಣಿಗೆ ಬೀಳುತ್ತದೆ. ಗುಂಡಾಚಾರಿ ಗಂಡಸೆಂಬ ಕಾರಣಕ್ಕೆ ಕೆಲಸ ಕೊಡಲು ನಿರಾಕರಿಸುವ ಸುಗುಣಾಬಾಯಿಯನ್ನು ಗುಂಡಾಚಾರಿ ಇನ್ನಿಲ್ಲದಂತೆ ಬೇಡಿಕೊಂಡು ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ನಿಯತ್ತಾಗಿ ಕೆಲಸ ಮಾಡಿ ಅವಳ ನಂಬಿಕೆ ಗಳಿಸುತ್ತಾನೆ. ಮುಂದೆ ಅವರಿಬ್ಬರ ಸಖ್ಯವೂ ಬೆಳೆಯುತ್ತದೆ. ನಿಜವಾಗಿಯೂ ಆಕೆಗೊಬ್ಬ ಗಂಡ ಇದ್ದಾನೋ ಇಲ್ಲವೋ ಎನ್ನುವುದು ಯಾರಿಗೂ ತಿಳಿಯುದೇ ಇಲ್ಲ. ಯುದ್ಧದ ನಂತರ ಎಲ್ಲೆಡೆ ಹರಡಿದ ಇನ್‍ಫ್ಲೂಯೆಂಜಾ ರೋಗ ಸುಗುಣಾಬಾಯಿಯನ್ನು ಬಲಿ ತೆಗೆದುಕೊಳ್ಳುತ್ತದೆ. ಸಾಯುವ ಮೊದಲು, ತನ್ನೆಲ್ಲ ಆಸ್ತಿ ಗುಂಡಾಚಾರಿಗೆ ಸೇರಬೇಕು ಎಂದು ಸ್ವಸಂತೋಷದಿಂದ ಬರೆದಿರುವುದಾಗಿ ಸಂದೇಶಪತ್ರ ಬಿಟ್ಟಿರುತ್ತಾಳೆ. ಅದರಿಂದಾಗಿ ಗಂಡನ ಕುರಿತು ಆಕೆ ಕತೆ ಕಟ್ಟಿದ್ದು ಗೊತ್ತಾಗುತ್ತದೆ.




ಸುಂದರಕ್ಕ.

ಗುಂಡಾಚಾರಿಯನ್ನು ಮನೆಯಲ್ಲಿಟ್ಟುಕೊಂಡು ಉಪಚರಿಸಿ, ಉಪಕರಿಸಿದ್ದ ವೈದ್ಯ ದಂಪತಿಯ ಸಂಬಂಧಿ. ಆ ಬ್ರಾಹ್ಮಣತಿಯ ತಂಗಿಯ ಮಗಳು. ಸುಂದರಕ್ಕ ಏಳೆಂಟು ವರ್ಷದವಳಾಗಿದ್ದಾಗಲೇ ಅವಳ ತಾಯಿ ಖಾಯಿಲೆಯಿಂದಾಗಿ ತೀರಿಕೊಂಡು, ತಂದೆ ಇನ್ನೊಂದು ಮದುವೆ ಮಾಡಿಕೊಳ್ಳುತ್ತಾನೆ. ಆಕೆ ಸುಂದರಕ್ಕನನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ತಾಯ ಮಮತೆಯ ಹಂಬಲದ ಸುಂದರಕ್ಕನಿಗೆ, ತನ್ನ ಮದುವೆಯಾದ ಮೇಲೆ ತನ್ನ ಮಕ್ಕಳನ್ನು ತುಂಬಾ ಅಕ್ಕರೆಯಿಂದ ಬೆಳೆಸಬೇಕು ಎಂಬ ಆಕಾಂಕ್ಷೆ ಬಲವಾಗುತ್ತದೆ. ಈ ಮಗುವಿನ ಕಷ್ಟ ನೋಡಲಾಗದೆ ವೈದ್ಯ ದಂಪತಿಗಳು ತಮ್ಮ ಮನೆಯಲ್ಲಿ ತಂದಿಟ್ಟುಕೊಳ್ಳುತ್ತಾರೆ. ಸುಂದರಕ್ಕನ ದೊಡ್ಡಮ್ಮನೂ ತೀರಿಕೊಂಡ ಮೇಲೆ, ಹತ್ತು ವರುಷದ ಸುಂದರಕ್ಕನನ್ನು ಕರೆದುಕೊಂಡು ಊರು ತೊರೆದ ವೈದ್ಯ ಬ್ರಾಹ್ಮಣ ಪೇಟೆಯೂರಿಗೆ ಬರುತ್ತಾನೆ. ಅಲ್ಲಿ ಗುಂಡಾಚಾರಿ ಸಿಕ್ಕು, ಎಲ್ಲ ವಿಚಾರವೂ ತಿಳಿದ ನಂತರ, ವೈದ್ಯ ದಂಪತಿಗಳ ಋಣ ತೀರಿಸಲು ಇದೊಂದು ಅವಕಾಶವೆಂದು ಭಾವಿಸಿದ ಗುಂಡಾಚಾರಿ, ಸುಂದರಕ್ಕನನ್ನು ಮದುವೆಯಾಗುವುದಾಗಿ ಹೇಳುತ್ತಾನೆ. ಗುಂಡಾಚಾರಿಯ ಬಗ್ಗೆ ಸದಭಿಪ್ರಾಯವಿದ್ದ ವೈದ್ಯ, ಗುಂಡಾಚಾರಿ ಮತ್ತು ಸುಂದರಕ್ಕನ ನಡುವೆ ವಯಸ್ಸಿನ ಅಂತರವಿದ್ದರೂ ಸಂತೋಷದಿಂದ ಧಾರೆ ಎರೆದುಕೊಡುತ್ತಾನೆ.

ಮದುವೆಯಾದರೂ ಗಂಡನ ದೃಷಿಯಲ್ಲಿ ಸುಂದರಕ್ಕ ಇನ್ನೂ ಆಟವಾಡಿಕೊಂಡಿರಬೇಕಾದ ಮಗು. ಅವಳನ್ನು ಹಾಗೆಯೇ ನೋಡಿಕೊಳ್ಳುತ್ತಾನೆ. ತನ್ನ ಬಾಲ್ಯವನ್ನು ಮತ್ತೆ ಸಂಭ್ರಮಿಸುತ್ತಾಳೆ ಸುಂದರಕ್ಕ. ಹರೆಯಕ್ಕೆ ಕಾಲಿಡುತ್ತಿರುವಂತೆಯೆ, ಸುಂದರಕ್ಕನ ಮಕ್ಕಳಿಗೆ ಅಕ್ಕರೆ ಉಣಬಡಿಸುವ ಕನಸು ಮತ್ತಷ್ಟು ಚಿಗುರೊಡೆಯುತ್ತದೆ. ಬಾಲಕಿ ಸುಂದರಕ್ಕ ಗೃಹಿಣಿಯಾಗುತ್ತಾಳೆ. ಆದರೆ ವಿಧಿ ಇಲ್ಲೂ ಅವಳ ಜೊತೆ ಆಟವಾಡುತ್ತದೆ. ಒಡಲಲ್ಲಿ ಮೂಡುವ ಮಕ್ಕಳ್ಯಾವೂ ಮುದ್ದಿಸಲು ದಕ್ಕುವುದೇ ಇಲ್ಲ! ಸುಂದರಕ್ಕನಿಗೆ ಚಿಕಿತ್ಸೆ ಕೊಡಿಸಲೆಂದು ಡಾಕ್ಟರಲ್ಲಿಗೆ ಕರೆದುಕೊಂಡು ಹೋದ ಗುಂಡಾಚಾರಿ ಅವಳಲ್ಲಿ ಯಾವ ದೋಷವೂ ಇಲ್ಲವೆಂದು ತಿಳಿದ ಮೇಲೆ ತಾನು ತಪಾಸಣೆಗೊಳಪಡಲು ಮುಂದಾಗುತ್ತಾನೆ. ತಪಾಸಣೆಯಿಂದ ತನಗೆ ಗುಪ್ತ ಖಾಯಿಲೆ ಇರುವುದು ಗೊತ್ತಾಗಿ, ಅದಕ್ಕೆ ಚಿಕಿತ್ಸೆ ಪಡೆದುಕೊಂಡ ಮೇಲೆ, ಸುಂದರಕ್ಕನ ಆಗಿನ ಮಗು ದುರ್ಬಲವಾಗಿದ್ದರೂ ಬದುಕುಳಿಯುತ್ತದೆ. ಎಂಟು ಮಕ್ಕಳಲ್ಲಿ ಉಳಿದ ಈ ಒಬ್ಬ ಮಗನ ಮೇಲೆ ತನ್ನೆಲ್ಲ ಅಕ್ಕರೆಯನ್ನು ಸುರಿದುಬಿಡುತ್ತಾಳೆ. ಸಾಮರಸ್ಯದ ದಾಂಪತ್ಯ ಹೊಂದಿದ ಸಂತೃಪ್ತ ಹೆಣ್ಣು ಸುಂದರಕ್ಕ.


- ಜಯಲಕ್ಷ್ಮೀ ಪಾಟೀಲ್.
*******************************************************************************

(* ೨೦೧೩ರಲ್ಲಿ ಬರೆದ ಲೇಖನವಿದು. ಏನೇನೋ ಕಾರಣಗಳಿಂದಾಗಿ ವೆಂಕಟಸುಬ್ಬಯ್ಯನವರಿಗೆ ಪುಸ್ತಕವನ್ನು ಇನ್ನೂ  ಹೊರತರಲಾಗಿಲ್ಲ. ಇದನ್ನು ಮತ್ತೆ ಓದಿದಾಗ ಅರೆ, ಹೀಗಲ್ಲದೆ ನಾನು ಬೇರೆ ರೀತಿಯಲ್ಲಿ ಬರೆಯಬಹುದಿತ್ತು ಅನಿಸಿ ಆ ಕಾದಂಬರಿಗಳ ಸಂಕಲನವನ್ನು ಕಳುಹಿಸಿ ಕೊಡುವಂತೆ ವೆಂಕಟಸುಬ್ಬಯ್ಯನವರಲ್ಲಿ ಕೋರಿಕೊಂಡೆ. ಅವರೂ ಒಪ್ಪಿಕೊಂಡರಾದರೂ ಅವರದೇ ಆದ ಅನಿವಾರ್ಯತೆಗಳು, ಅನಾರೋಗ್ಯದಿಂದಾಗಿ ಪುಸ್ತಕವನ್ನು ನನಗೆ ಕಳುಹಿಸಿ ಕೊಡಲಾಗಲಿಲ್ಲ...  ಹೀಗಾಗಿ ಹುಂಬತನದಿಂದ ಅಂದಾಜಿನಲ್ಲಿ ಈ ಬರಹವನ್ನು ಬದಲಾಯಿಸುವ ಬದಲಿಗೆ ಸುಮ್ಮನಿರುವುದು ಲೇಸು ಅನಿಸಿತು. ಅಕಸ್ಮಾತ್ ಮುಂದೊಮ್ಮೆ ನನ್ನ ಕೈಗೆ ಆ ಸಂಕಲನ ಅಥವಾ ಈ ಎರಡು ಕಾದಂಬರಿಗಳು ಸಿಕ್ಕಿದ್ದೇ ಆದರೆ ಖಂಡಿತ ಈ ಲೇಖನವನ್ನು ತಿದ್ದುವ ಆಸೆ ಇದೆ ನನಗೆ. 
ಈ ಮೂಲಕ ಶ್ರೀರಂಗರ ಕಾದಂಬರಿಗಳ ಓದಿಗೆ ಕಾರಣರಾದ ಡಾ. ವಿಜಯಾ (ವಿಜಯಮ್ಮ) ಅವರಿಗೆ ನನ್ನ ಮನದಾಳದ ಕೃತಜ್ಞತೆಗಳು.)

2 comments:

sunaath said...

ಕಥಾಸಾರವನ್ನು ಹಾಗು ಸ್ತ್ರೀಪಾತ್ರಗಳ ವಿಶ್ಲೇಷಣೆಯನ್ನು ಲಲಿತವಾಗಿ ಮೂಡಿಸಿದ್ದೀರಿ. ಅಭಿನಂದನೆಗಳು.

Jayalaxmi said...

ನಿಮ್ಮ ಮೆಚ್ಚುಗೆಯ ನುಡಿ ಕೇಳಿ ಮನಸಿಗೆ ಸಮಾಧಾನ ಮತ್ತು ನೆಮ್ಮದಿಯಾಯ್ತು ಕಾಕಾರ. ಧನ್ಯವಾದಗಳು.