Sunday, September 3, 2017

ನಾನು ನಿನ್ನೆ ನೆನಪು

ಭೋರ್ಗರೆವ ನದಿಯ ನೊರೆಗಾವ ಸೋಪು
ನೆನಪುಗಳ ಓಘಿಗೂ ಅದೇ ನುಣುಪು
ನೊರೆ ಬದುಕ ಗಲ್ಲಕ್ಕೆ ನೆನಪಿನ ನೆರೆ

ಮಾಸಿದ ದಿನಗಳವು ಮೋಡ ಕಟ್ಟಿವೆ
ಕಾಲ ಬಿರುಕಿನೊಳಗೆ ನೋವ ಸೆಲೆ
ಹನಿಯಬಾರದೆ ದಿನಗಳು ಕರಗಬಾರದೆ

ಚಪ್ಪರದಡಿ ಕುಳಿತ ಜೀವ ಚಡಪಡಿಸುತಿದೆ
ಮಲ್ಲಿಗೆಯ ಕಂಪದು ಮನಕೆ ತಂಪು
ಹೊಯ್ದಾಡುತಿದೆ ಒಳಗಿನ ಬೆಂಕಿ ಬೆದರಿ

ಒಂಟಿಕೊಂಬಿನ ಕಲ್ಲು ಸುತ್ತುತಿದೆ ಒಂದೇ ಸಮ
ಅಡಿಗೆ ಸಿಕ್ಕ ದಿನಗಳಿಗೆಲ್ಲ ಈಗ ಒಂದೇ ಆಕಾರ
ನೋವೂ ನಲಿವೂ ಕಲೆತು ಕುದ್ದು ಒಂದೇ ಪಾಕ

ನೆನಪುಗಳ ಕಣಜಕ್ಕೀಗ ಹೆರಿಗೆ ನೋವು
ಎಸರಿಟ್ಟು ಅಟ್ಟುಣ್ಣಲೆ ಇಲ್ಲ ಗಾಳಿಗೆ ತೂರಲೆ
ಉಂಡರೆ ಉಬ್ಬಸ ತೂರಿದರೆ ಕಣ್ಣಾರಸ

ತೀವ್ರತೆಯ ಅಭಾವ ಆಗುತಿರೆ ಸ್ವಭಾವ
ಅದು ವೈರಾಗ್ಯವೊ ಸ್ಥಿತಪ್ರಜ್ಞೆಯೊ
ಅಯೋಮಯ ಮನಸು ಕನಸು

- ಜಯಲಕ್ಷ್ಮೀ ಪಾಟೀಲ್
27 August 2017

2 comments:

sunaath said...

ನೆನಪುಗಳ ಉಬ್ಬಸವು ಹೇಗೇ ಇರಲಿ, ಆ ಪಾಡನ್ನು ನಿಮ್ಮಲ್ಲಿಯೇ ಇಟ್ಟುಕೊಂಡು, ಅದರ ಹಾಡನ್ನಷ್ಟೇ ನಮಗೆ ನೀಡುತ್ತಿದ್ದೀರಲ್ಲ! ಧನ್ಯವಾದಗಳು.

Jayalaxmi said...

ಧನ್ಯವಾದಗಳು ರೀ ಕಾಕಾ. _/\_