ನಮ್ಮೆಲ್ಲರ ಮೆಚ್ಚಿನ ಬರಹಗಾರ್ತಿ, ಪತ್ರಕರ್ತೆ ಚೇತನಾ ತೀರ್ಥಹಳ್ಳಿಯವರ,‘ಅಮ್ಮನ ಜೀವನ ಶ್ರದ್ಧೆ ಮತ್ತು ಶ್ರಾದ್ಧ’ ಎನ್ನುವ ಲೇಖನ ವಿಜಯ ಕರ್ನಾಟಕದಲ್ಲಿ ಬಂದಾಗ, ಅದನ್ನು ಓದಿ ನಮ್ಮನೆಯ ಈ ವಿಷಯವನ್ನು ಅವರೊಂದಿಗೆ ಅಂತಃಪುರದಲ್ಲಿ ಹಂಚಿಕೊಂಡಿದ್ದೆ. ಅದನ್ನು ಈಗ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.
ನಮ್ಮನೇಲೂ ಇದರ ಮೇನಿಯಾ ಜೋರೀಗ! ಈಗ ತಿಂಗಳ ಹಿಂದೆ ನನ್ನ ಮೂರನೇ ಸೋದರ ಮಾವ (ನಾಲ್ಕು ಜನ ಸೋದರ ಮಾವಂದಿರು ನನಗೆ) ನನಗೆ ಫೋನ್ ಮಾಡಿ, ಸತ್ತ ನಂತರ ಹೇಗೆ ಮತ್ತು ಎಲ್ಲಿ ದೇಹ ದಾನ ಮಾಡಬೇಕು ವಿವರ ಹೇಳು ಅಂದ. ನಾನು ಹೇಳಿದ ನಂತರ, ಹೋಗಿ ಫಾರ್ಮ್ ತಂದು ಮತ್ತೆ ಫೋನ್ ಮಾಡಿದ. ಸಹಿಗಾಗಿ ನನ್ನಮ್ಮನ ಹತ್ತಿರ ಹೋಗುವುದಿತ್ತು ಅವನಿಗೆ. ಆದರೆ ಆಕೆ ಹೆದರಿಕೊಂಡಾಳು ಅನ್ನೋ ಆತಂಕ, ಸೊ ತಾನೇ ನಿಧಾನವಾಗಿ ನನ್ನಮ್ಮನಿಗೆ ಅಂದರೆ ತನ್ನಕ್ಕನಿಗೆ ವಿಷಯ ತಿಳಿಸಿ, ಪುಸಲಾಯಿಸಿ ಅವಳಿಂದ ಸಹಿ ತೆಗೆದುಕೊಳ್ಳುವುದು ಅವನ ಇರಾದೆ. ಅವನು ಹೀಗೆ ಹೇಳಿದ್ದಕ್ಕೆ ಹಂಗೇನಾಗೊಲ್ಲ ಎಂದು ನಾನು ನಕ್ಕೆ. ನಮ್ಮಕ್ಕನ ಸ್ವಭಾವ ನನಗೊತ್ತು ಅಂದ, ತನಗೆ ನನಗಿಂತ ಆಕೆ ಚೆನ್ನಾಗಿ ಗೊತ್ತು ಎನ್ನುವ ಗತ್ತಿನಲ್ಲಿ. ನಾನು, "ನಿನಗ ಅಕ್ಕ ಆದ್ರ ನನಗಕಿ ನಮ್ಮವ್ವ" ಅಂದೆ. ಸಿಟ್ಟು ಮಾಡಿಕೊಂಡು ಫೋನ್ ಕುಕ್ಕಿದ. ನಾವಿಬ್ಬರೂ ಅಮ್ಮ ನಮಗೆಷ್ಟು ಆಪ್ತ ಎನ್ನುವುದನ್ನು, ನಮ್ಮ ನಮ್ಮ ಪ್ರೀತಿಯನ್ನು ತೋರಿಸಿಕೊಟ್ಟ ರೀತಿಯಿದು. ನಾನು ಅಮ್ಮನ ಹತ್ತಿರ ಈ ವಿಷಯವನ್ನು ಹೇಳದೆ ಸುಮ್ಮನಾದೆ.
ಅಮ್ಮನ ಹತ್ತಿರ ಹೋದ ನನ್ನ ಮಾವ, ಅಳಕುತ್ತಾ, "ಇದನ್ನ ನೋಡಬೇ" ಎಂದು ಅಮ್ಮನ ಎದುರು ಫಾರ್ಮ್ ಹಿಡಿದಿದ್ದಾನೆ. ಕನ್ನಡಕ ಹಾಕಿಲ್ಲದ ಅಮ್ಮನಿಗೆ ಅದು ಯಾವುದೋ ಫಾರ್ಮ್ ಅನ್ನುವುದು ಮಾತ್ರ ಕಂಡಿದೆ. ಆದರೂ ಅಮ್ಮನ ಬಾಯಿಂದ ಹೊರಟ ಮಾತು, "Body donate ಮಾಡಾಕತ್ತೀ ಏನೋ? ಭಾರಿ ಬೆಸ್ಟ್ ಕೆಲ್ಸಾ ಮಾಡಾಕತ್ತಿ ನೋಡ್"... ಅಮ್ಮನಿಗಾಗುತ್ತೆ ಅಂದುಕೊಂಡ ಶಾಕ್ ಮಾಮಾಗೀಗ! ಹೂಂ ಅನ್ನುತ್ತಾ ತಟ್ಟನೆ ಅಮ್ಮನ ಕಾಲು ನಮಸ್ಕಾರ ಮಾಡಿದನಂತೆ ನನ್ನ ಮಾಮಾ.
ಅಮ್ಮಂಗೆ ಇವತ್ತಿಗೂ ಅಚ್ಚರಿಯೇ, ಯಾವ ಫಾರ್ಮ್ ಅನ್ನೋದೂ ಗೊತ್ತಿಲ್ಲದೆ ತಾನು ಯಾಕೆ ಹಾಗ್ ಮಾತಾಡಿದೆ ಅಂತ! ಸರಿ, ಅಮ್ಮ ಸಹಿ ಮಾಡುವ ಮೊದಲು ಒಮ್ಮೆ ಎಲ್ಲರಿಗೂ ವಿಷಯ ತಿಳಿಸುವುದೊಳಿತು ಎಂದುಕೊಂಡು ನನ್ನ ದೊಡ್ಡ ಮಾವನಿಗೆ ಈ ಮಾವ ಫೋನ್ ಮಾಡಿದ್ರೆ ಅವನು ಹೇಳಿದ್ದು, "ಎಂಥಾ ಬಂಗಾರದಂಥಾ ಕೆಲ್ಸಾ ಮಾಡಕತ್ತೀಯೋ ಈರಣ್ಣ, ನಮಗ ಚೊಲೋ ಹಾದಿ ಹಾಕ್ಕೊಟ್ಟಿ ಬಿಡು. ನಾಳೆ ಸತ್ ಮ್ಯಾಲೆ, ಯಾವ್ದೋ ಸುಡಗಾಡದಾಗ ಹುಗದು, ಮುಂದೊಂದಿನ ಅದ ಜಾಗಾದಾಗ ನಮ್ಮ್ ಎಲುಬೆಲ್ಲಾ ಆರ್ಸಿ ದಾರಿಗ್ ಒಗದು, ಇನ್ನ್ಯಾರ್ನೋ ಅಲ್ಲಿ ಹೂಳಿ, ಇಲ್ಲಾ ಮನಿ ಕಟ್ಟಿ.... ಯಾರಿಗ್ ಬೇಕಪಾ ಸತ್ ಮ್ಯಾಲೂ ದಿಕ್ಕೇಡ್ ಆಗೂದು! ನಾನೂ ಬಾಡಿ ಡೊನೇಟ್ ಮಾಡ್ತೀನಿ. ನಿನ್ನ ಫಾರ್ಮಿಗೆ ಸೈನ್ ಮಾಡ್ತೀನಿ, ನಾನ ಅಲ್ಲಿ ಬರ್ಬೇಕೋ, ಇಲ್ಲಿಂದಾನ ಮಾಡಿ ಕಳಿಸಿದ್ರ ನಡೀತೈತೋ?" ಅಂದನಂತೆ. ಅಮ್ಮ ಮತ್ತು ಈರಣ್ಣ ಮಾಮಾ ಫುಲ್ ಖುಷ್!
ಮುಂದೆ ನನ್ನ ಎರಡನೆಯ ಮಾಮಾಗೆ ಫೋನು. ಅವ್ನು, " ಎಂಥಾ ಐಡಿಯಾ ಕೊಟ್ಟೆಪಾ ನೀ, ನಾ ನಾಳೇ ಹೋಗಿ ಫಾರ್ಮ್ ತರ್ತೀನಿ." ಅಂದನಂತೆ.
ನನ್ನ ದೊಡ್ಡ ಚಿಕ್ಕಮ್ಮ ವಿಷಯ ತಿಳಿದು, "ಇಗಾ, ನಾ ನಿನ್ನ್ಯರೇ ಇದನ್ನs ಅನ್ಕೋಳಾಕತ್ತಿದ್ದೆ ನೋಡು. ಒಬ್ಬರ ಮಣ್ಣಿಗ್ ಹೋಗಿದ್ದೆ, ಝ್ಹಳಾ ಝ್ಹಳಾ ಬಿಸಲೀಗೆ ಸುಸ್ತಾದ ಸೇರಿದ್ ಮಂದಿ, ಯಾವಾಗರೇ ಮಣ್ಣಾಕ್ಕೈತೋ ಅಂತ ಬೈಕೋತ ಹೆಣದ್ ಹಿಂದ್ ಹೊಂಟಿದ್ದ್ರು. ಅದನ್ನ ನೋಡಿ, ನಾಳೆ ನಾ ಸತ್ರೂ ಮಂದಿ ಹಿಂಗs ಅಂದ್ರ... ಅಂತನಿಸಿ, ಹಿಂಗ್ ಅನಸ್ಕೊಳ್ಳೊ ಬದಲು, ಯಾವ್ದರ ದವಾಖಾನಿಗೆ ಕೊಟ್ಟ ಬಿಡ್ರಿ ನನ್ನ ದೇಹಾನ ಅಂತ ಮಕ್ಕಳಿಗೆ ಹೇಳಬೇಕು ಅನ್ಕೊಂಡೆ. ಇವತ್ ನೋಡಿದ್ರ ನೀನೂ ಅದನ್ನ ಅಂತಿ. ಭಾರಿ ಚೊಲೊ ಕೆಲ್ಸಾ ಮಾಡಾಕತ್ತಿ, ಖುಷಿ ಆತ್ ನನಗ" ಅಂದ್ಲಂತೆ.
ಸಣ್ಣ ಚಿಕ್ಕಮ್ಮ, "ಏ ನನಗೂ ಒಂದು ಫಾರ್ಮ್ ತೊಗೊಂಡ್ ಬಾರೋಫಾ" ಅಂದ್ಲಂತೆ.
ಕೊನೆಯ ಅಂದರೆ ನನ್ನ ನಾಲ್ಕನೆಯ ಮಾವ ಮಾತ್ರ, "ಹೋಗೋ ಮಾರಾಯ, ಇನ್ನಾ ಮಕ್ಕಳ ಮದವಿ ಮಾಡಬೇಕೂ, ಮೊಮ್ಮಕ್ಕಳನ್ ನೋಡಬೇಕೂ, ಈಗ ಇದೇನ್ ಹಚ್ಚಿ ಹೋಗ್" ಅಂದ್ನಂತೆ.
ನಮ್ಮಮ್ಮ ಅಂತಿದ್ಳು, "ಅಂವಾ ಇನ್ನಾs ಸಣ್ಣಾಂವ್ ನೋಡು,ಅದಕ ಹಂಗಂತಾನ, ಮುಂದ್ ನೋಡ್ತಿರು ಬೇಕಾರ, ಅವ್ನೂ ಗ್ಯಾರಂಟಿ ಬಾಡಿ ಡೊನೇಟ್ ಮಾಡ್ತಾನ" ಅಂತ.
ಮುಗಲ್ ಮ್ಯಾಲಿ ಕುಂತ್ ಇದನ್ನೆಲ್ಲಾ ಕೇಳಿಸ್ಕೊಂಡ ಬಾದರದಿನ್ನಿ ಗೌರಕ್ಕ- ರುದ್ರಗೌಡ ದಂಪತಿ, ತಮ್ಮ ಮಕ್ಕಳ ಈ ನಿರ್ಧಾರ ಕಂಡು ಭಾಳ್ ದಿನದ ಮ್ಯಾಲೆ ಖುಷೀಲೇ ಕುಣದ್ಯಾಡಿರೂದ್ರಾಗ ಅನಮಾನನs ಇಲ್ಲ!!
ಮಧ್ಯದ ಸಾಲಲ್ಲಿ ಕುಳಿತವರು.
6 comments:
ನಿಮ್ಮಮ್ಮ ಹಾಗೆ ಅಂದಿರೋದ್ರಲ್ಲಿ ನನಗೆ ಏನೂ ಆಶ್ಚರ್ಯ ಇಲ್ಲ ಬಿಡಿ, ಅತ್ಯಂತ ’ಪ್ರಸ್ತುತ’ ಹೆಣ್ಣು ನಿಮ್ಮಮ್ಮ! ನಂಗೆ ತುಂಬಾ ಇಷ್ಟವಾದವರು!
ಜೀವನವನ್ನು ಸರಳವಾಗಿ ನೋಡಿದಾಗ ವಿರಳವಾದ ಸಂಗತಿಗಳೆಲ್ಲ ಎಷ್ಟು ನಾಜೂಕಾಗಿ ಹೊರಬರುತ್ತವೆ..ಸುಂದರ ಲೇಖನ..ಮತ್ತಷ್ಟು ಖುಷಿಯಾದ ವಿಚಾರ ದೊಡ್ಡ ಸುಂದರ ಕುಟುಂಬ...
ಸಂಧ್ಯಾ, :)ನಿಮಗೆ ಎಷ್ಟು ಬೇಗ ನನ್ನವ್ವ ಅರ್ಥ ಆಗಿಬಿಟ್ಟಳು!! :)
ಶ್ರೀಕಾಂತ್ : :) ಈ ಫೋಟೋದಲ್ಲಿರೋದು ಅರ್ಧಕ್ಕೂ ಕಡಿಮೆ ಜನ! :)
ಮಾತು ಹೊರಡುತ್ತಿಲ್ಲ ನನಗೆ..ಈ ಶ್ರಾದ್ಧ, ಪಕ್ಷ ಗಳಲ್ಲಿ ನಂಬಿಕಿ ಇಲ್ಲ ನಂಗ..
ಆದ್ರ ನಿಮ್ಮಅವ್ವ ಅಂದ ಮಾತು ನೋಡಿ ಖುಷಿ ಆತು ಹಿರಿಯರು ಹೊಸವಿಚಾರಕ್ಕ
ತೆರೆದುಕೊಳ್ಳೋದು ಅಪರೂಪ..ಖುಷಿಆತು..
ದೇಸಾಯಿ ಸರ್, ನಮ್ಮವ್ವ ಹಂಗs ಅದಾರ್ರಿ. ಹಿಂಗಾಗೇ ನನಗ ದೇವರ ಮ್ಯಾಲೆ ನಂಬಿಕಿದ್ರೂ ಮೂಢನಂಬಿಕಿಲ್ಲ. :)
Post a Comment