Tuesday, July 9, 2013

ಅಷ್ಟು ಸುಲಭವಲ್ಲ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ನಮ್ಮವರೆಂದುಕೊಂಡವರೊಡನೆಯೇ ಹೋರಾಡುವುದು.

*  ದೇವರ ಕೋಣೆಯಲ್ಲಿ ನಮ್ಮೆಲ್ಲರ ಗುಸುಗುಸು ಪಿಸುಪಿಸು ನಡೆದಿತ್ತು.`ಏನಾಗಂಗಿಲ್ಲ ಹೋಗು’,

*  `ಏ ಬ್ಯಾಡ ಬ್ಯಾಡ, ಆಯಿ ನೋಡಿದ್ಲಂದ್ರ ಅಷ್ಟ’,

*  `ನಾ ಒಲ್ಯವ್ವಾ, ಇದೇನೂ ಬ್ಯಾಡ ತಗೀರತ್ತಾಗ, ನಾನೂ ಎಲ್ಲಾರ್ ಹಂಗs ಇದ್ದಬಿಡ್ತೀನಿ, ಇಲ್ಲದ ರಗಳ್ಯಾಕ ಆಯಿ (ನನ್ನ ತಂದೆಯ ತಾಯಿ) ನೋಡಿದ್ಲಂದ್ರ ನನ್ನ ಹಂಪಹರೀತಾಳ, ಮಂದೀನೂ ಬಾಯಿಗ್ ಬಂಧಂಗ ಮಾತಾಡ್ಕೋತಾರ ಹಿಂದ, ಏನೂ ಬ್ಯಾಡ ನನ್ನ ಹಣ್ಯಾಗ ಇದೆಲ್ಲಾ ಬರ್ದಿಲ್ಲ, ಎಲ್ಲಾನೂ ತಗದಬಿಡ್ತೀನಿ.’

*  `ಹೌದೌದು ಮಂದಿ ಸುಮ್ನ ಬಾಯಿಗ್ ಬಂಧಂಗ್ ಮಾತಾಡ್ತಾರ ಬ್ಯಾಡಬಿಡು’

ಕೊನೆಗೆ ಯಾಕೊ ಎಲ್ಲವೂ ಎಡವಟ್ಟಾಗುತ್ತಿದೆ ಎನಿಸಿ ನಾನು,

*  `ಹಂಗೇನಾಗಂಗಿಲ್ಲ ಸುಮ್ಮಿರ್ರಿ, ನೀ ನಡಿ, ನಿನ್ ಜೊತಿ ನಾನೂ ಬರ್ತೀನಿ, ಆಯಿ ಏನರ ಅಂದ್ರ ನಾ ಮಾತಾಡ್ತೀನಿ ಆಯಿ ಜೋಡಿ’ ಅವಳನ್ನು ಬಲಂತವಾಗಿ ಪಡಸಾಲಿಗೆ ಕರೆದುತಂದೆ.

    ಆಯಿ, ಸೋಫಾದ ಮೇಲೆ ಕುಳಿತಿದ್ದರು. ಬಂದು ನಿಂತವರನ್ನು ನೋಡಿ ನನ್ನ ತಂಗಿಗೆ, 

*  `ಒಂದಿಷ್ಟ್ ತಗದಿಟ್ಟು ಎಷ್ಟು ಬೇಕೋ ಅಷ್ಟ ಮುಡ್ಕೋ’ ಅಂದ್ರು. ಹೂಂ ಆಯಿ ಎಂದವಳೇ ತಂಗಿ ಒಳಗೋಡಿದಳು, ಕಣ್ಣುಬಾಯಿ ಬಿಟ್ಟುಕೊಂಡ ನಾನು ಅವಳ ಹಿಂದೆ ಹೋದೆ. ಸ್ವಲ್ಪ ಹೊತ್ತು ನಾವ್ಯಾರೂ ಮಾತನಾಡಲೇ ಇಲ್ಲ!

ಅಸಾಧ್ಯವಾದುದು ಘಟಿಸಿಬಿಟ್ಟಿತ್ತು ನಮ್ಮ ಮನೆಯಲ್ಲಿ! ಒಂಥರಾ ನಮಗೆಲ್ಲಾ ಇದು ಶಾಕ್! ಆದರೆ ಸಿಹಿ ಶಾಕ್!

       ಆರು ತಿಂಗಳ ಹಿಂದೆ ಪತಿಯನ್ನು ಕಳಿದುಕೊಂಡಿದ್ದ ೨೭ರ ಹರೆಯದ, ಪುಟ್ಟ ಮಗಳಿರುವ ನನ್ನ ತಂಗಿಗೆ(ಕಾಕಾನ ಮಗಳು) ಮೊದಲಿನಂತೆ ಅವಳು ಉಡುವುದು ತೊಡುವುದು ಮಾಡಲು ನಾವೆಲ್ಲ ಮನವೊಲಿಸುತ್ತಾ ಧೈರ್ಯ ತುಂಬಿ ಅವಳನ್ನು ರೆಡಿ ಮಾಡಿದ್ದೆವು. ಆದರೆ ಎಲ್ಲರಿಗೂ ಕಷ್ಟಕ್ಕೆ ಬಂದಿದ್ದು ಆಯಿಯನ್ನು ಒಪ್ಪಿಸುವ ವಿಷಯದಲ್ಲಿ. ಈಗ ನೋಡಿದರೆ ಎಲ್ಲಾ ಉಲ್ಟಾಪಲ್ಟಾ!! ಹಣೆಯ ಕೆಂಪು ಬಿಂದಿ, ಕತ್ತಲ್ಲಿನ ಎರಡೆಳೆ ಸರ, ಕಿವಿಯ ಝುಮುಕಿ, ಮುಡಿಯ ಮಲ್ಲಿಗೆ ಎಲ್ಲವನ್ನು ಗಮನಿಸಿಯೂ ಯಾವುದನ್ನೂ ನಿರಾಕರಿಸಲಿಲ್ಲ ಅವರು! ಆಯಿಯ ಆಧುನಿಕತೆಗೆ ಖುಷಿಯಿಂದ ನಾವೆಲ್ಲ ಮೂಕರಾಗಿದ್ದೆವು. ಆಯಿಯ ಬಗೆಗೆ ನೋವು ಬೆರೆತ ಹೆಮ್ಮೆ ನನ್ನವ್ವನ ಕಣ್ಣಲ್ಲಿ.

     ನಾನು ಚಿಕ್ಕವಳಿದ್ದಾಗ ರಜೆಗೆ ಊರಿಗೆ ಹೋದಾಗಲೆಲ್ಲ, ಸಂಜೆಯಾದರೆ ದೊಡ್ಡವರು ಹೂವು ಹರಿಯಲು ಬಿಡುವುದಿಲ್ಲ ಎಂದು ಗೊತ್ತಿದ್ದ ನಾವು ಹುಡುಗಿಯರೆಲ್ಲ, ಸಂಜೆಗೂ ಮುನ್ನವೇ ತೋಟದಲ್ಲಿನ ಮಲ್ಲಿಗೆಯ ಮೊಗ್ಗುಗಳನ್ನೆಲ್ಲಾ ಬಳ್ಳಿಯಿಂದ ಬಿಡಿಸಿಕೊಂಡು ಮಾಲೆ ಕಟ್ಟುತ್ತಿದ್ದೆವು. ಮನೆಯಲ್ಲಿ ಎಲ್ಲರೂ ಹೂವು ಮುಡಿದರೂ ಆಯಿ ಮಾತ್ರ ಮುಡಿದದ್ದನ್ನು ನಾನ್ಯಾವತ್ತಿಗೂ ನೋಡಲೇ ಇಲ್ಲ. ಮೊಳಕಾಲವರೆಗೆ ಉದ್ದವಿದ್ದ ತನ್ನ ಕೂದಲನ್ನು ಆಕೆ ಸ್ನಾನಕ್ಕೂ ಮುನ್ನ ಎಣ್ಣೆ ಹಚ್ಚಿ, ಬಾಚಿ ತುರುಬು ಕಟ್ಟಿದರೆ ಮುಗಿಯಿತು. ಹೂವುಗೀವು ಏನೂ ಇಲ್ಲ, ಹಣೆಗೆ ಕಾಸಿನಗಲ ಕುಂಕುಮವಿಟ್ಟುಕೊAಡು, ತಲೆತುಂಬಾ ಸೆರಗು ಹೊದ್ದಿರುತಿದ್ದರು. 

           ಒಮ್ಮೆ ಆಯಿ ಮುಡಿಯಲಿ ಎಂದು ಆಸೆಯಿಂದ ಒತ್ತೊತ್ತಾಗಿ ಮಲ್ಲಿಗೆ ಮೊಗ್ಗುಗಳನ್ನು ಕಟ್ಟಿ, ದಂಡೆಯನ್ನು ಆಯಿಗೆ ಮುಡಿಸಲು ಮುಂದಾದೆ. ಬೇಡವೆಂದರು. ಬಲವಂತ ಮಾಡಿದ್ದಕ್ಕೆ ಗದರಿದರು. ಅಷ್ಟಕ್ಕೂ ಬಿಡದ ನನ್ನನ್ನು ಅಸಹನೆಯಿಂದ ದೂಡಿ ಮುಖ ತಿರುಗಿಸಿಕೊಂಡರು. ಸಣ್ಣವಳಾದ ನನಗೆ ಆಯಿ ಇಷ್ಟೊಂದು ಒರಟಾಗಿ ವರ್ತಿಸಿದ್ದೇಕೆ ಎಂದು ಅರ್ಥವಾಗಿರಲೇ ಇಲ್ಲ ಆಗ. ಆದರೆ ನನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲಿಲ್ಲವೆಂದು ನೋವಾಗಿತ್ತು. 

        ಮತ್ತೊಮ್ಮೆ ಮನೆಯಲ್ಲಿ ಮದುವೆ ಸಮಾರಂಭ. ಆಯಿ ಎಂದಿನAತೆ ಎಲ್ಲರಿಗೂ ಕೆಲಸ ಹಂಚಿ ತಾವು ಮೇಲ್ವಿಚಾರಣೆ ಮಾಡುತ್ತಾ ನಿಂತಿದ್ದರು. ಆಕೆ ಯಾವತ್ತೂ ಯಾವ ಶುಭಕಾರ್ಯದಲ್ಲೂ ನೇರ ಭಾಗವಹಿಸಿದವರೇ ಅಲ್ಲ, ಯಾರಿಗಾದರೂ ಕುಂಕುಮವಿಟ್ಟಿದ್ದನ್ನೂ ಕಾಣೆ ನಾನು. ಅಂದೂ ಮತ್ತೊಮ್ಮೆ ಆಯಿ ಹೂವು ಮುಡಿಯಲಿ ಎಂಬ ಆಸೆಯಿಂದ ಮಾರುದ್ದ ಮಾಲೆಯನ್ನು ತೆಗೆದುಕೊಂಡು ಹೋಗಿ ಆಯಿಯ ಎದುರು ಹಿಡಿದೆ. ಹಿಂದಿನ ಸಲದ ಅನುಭವದಿಂದಾಗಿ ಒತ್ತಾಯಿಸುವ ಧೈರ್ಯವಿರಲಿಲ್ಲ. ಸೌಮ್ಯವಾಗಿ ನನ್ನನ್ನು ನೋಡಿ, `ನನಗ ಬ್ಯಾಡ, ನೀ ಮುಡ್ಕೊ, ಸಣ್ಣಮಕ್ಕಳು ಮುಡ್ಕೊಂಡ್ರನs ಛಂದ’ ಎಂದು ಹೇಳಿ ನನ್ನನ್ನು ಸಾಗಹಾಕಿದರು ಅಲ್ಲಿಂದ.

ಆಯಿಗೆ ನನ್ನ ಕಂಡರೆ ಪ್ರೀತಿಯಿಲ್ಲ ಅದಕ್ಕೇ ನನ್ನ ಕೈಯಿಂದ ಆಕೆ ಹೂವು ಸ್ವೀಕರಿಸುತ್ತಿಲ್ಲ ಎನ್ನುವ ಭಾವನೆಯಿಂದ ಅವ್ವನ ಹತ್ತಿರ ಆಯಿಯನ್ನು ದೂರಿದೆ.  

ಆಗ ಅವ್ವ,   *`ಬ್ಯಾಡ, ಆಯಿಗೆ ಇನ್ನೊಮ್ಮೆ ಹಂಗ ಹೂವ್ ಕೊಡಾಕ ಹೋಗಬ್ಯಾಡ, ಅವುö್ರ ಮುಡ್ಕೊಳ್ಳಾಂಗಿಲ್ಲ.’ ಅಂದ್ಳು.

*  `ಯಾಕ?’

*  `ಯಾಕಂದ್ರ ಉಡಕಿಯಾದವ್ರು ಹೂವು ಮುದಡ್ಕೋಬಾರ್ದಂತ, ಯಾವ್ದ ಕಾರ್ಯಾದಾಗೂ ಭಾಗವಹಿಸ್ಬಾರ್ದಂತ, ಅದಕ ನಿಮ್ಮ್ ಆಯಿ ಹೂವ್ ಮುಡ್ಕೊಳ್ಳಾಂಗಿಲ್ಲ, ಯಾರಿಗೂ ಕುಂಕುಮಾ ಹಚ್ಚಂಗಿಲ್ಲ, ಆರ್ತಿ ಮಾಡಾಂಗಿಲ್ಲ. ಅದಕೇನಾಕ್ಕತಿ ನೀವು ನನಗ ಕುಂಕುಮಾ ಹಚ್ಚಿ ಆರ್ತಿ ಮಾಡ್ರಿ ಅಂತ ನಾ ಒಮ್ಮಿ ಹೇಳಿದ್ದಕ್ಕ ನನಗ ಬೈದು ಸುಮ್ನಾಗಿಸಿದ್ರು.’ ಅಂದಳು ಅವ್ವ.

      ಉಡಕಿ ಅಂದರೆ ಮರುಮದುವೆ. ಆಯಿಗೆ ತೊಟ್ಟಿಲಲ್ಲೇ ಅಂದರೆ ಹಸುಗೂಸಾಗಿದ್ದಾಗಲೇ ತಾಳಿಕಟ್ಟಲಾಗಿತ್ತಂತೆ. ಹಾಗೆ ತಾಳಿದ ಕಟ್ಟಿದ ಹುಡುಗ ತನ್ನ ಏಳನೇ ವಯಸ್ಸಲ್ಲಿ ಯಾವುದೋ ಖಾಯಿಲೆ ಬಂದು ತೀರಿಕೊಂಡ. ಮುಂದೆ ಆಯಿ ಹನ್ನೊಂದು ವರ್ಷದವಳಿದ್ದಾಗ ಹೆಂಡತಿ ಸತ್ತ ಹದಿನಾರು ವರ್ಷದ ನಮ್ಮ ಮುತ್ತ್ಯಾ ಜೊತೆ ಮದುವೆಯಾಯಿತು. ಹೀಗೆ ಉಡುಕಿಯಾದ ಹೆಣ್ಣು ಹೂ ಮುಡಿಯುವುದು, ಶುಭಕಾರ್ಯದಲ್ಲಿ ಭಾಗವಹಿಸುವುದರ ಹೊರತಾಗಿ ಉಳಿದೆಲ್ಲರಂತೆ ಸಂಸಾರ ಮಾಡಬಹುದು ಎನ್ನುವುದು ಈ ಮದುವೆಯ ನಿಯಮವಂತೆ. 

ಹಾಗಾಗಿ ಮೊಳಕಾಲುದ್ದದ ಕೂದಲು ಅದಕ್ಕೂ ಮಿಗಿಲಾದ ಆಸೆಗಳಿದ್ದರೂ ಆಯಿ ಅದನ್ನೆಲ್ಲ ಹತ್ತಿಕ್ಕಿ ಬಿಗಿ ತುರುಬು ಕಟ್ಟಿ ಬದುಕಿದ್ದರು. ತನ್ನ ಕೈಯಲ್ಲಿ ಸಾಧ್ಯವಾಗದ್ದನ್ನು ಮೊಮ್ಮಗಳಿಂದ ಸಾಧ್ಯ ಮಾಡಿಸಿದರು, ಅವಳನ್ನು ಬೆಂಬಲಿಸುವುದರ ಮೂಲಕ ಕೆಟ್ಟ ಪರಂಪರೆಯೊಂದನ್ನು ನಮ್ಮನೆಯಿಂದ ಒದ್ದೋಡಿಸಿದರು. 


ಬದುಕನ್ನು ದಿಟ್ಟವಾಗಿ ಎದುರಿಸಿದ, ಅನೇಕ ಸಂದರ್ಭದಲ್ಲಿ ಊರಲ್ಲಿ ಮುಂದಾಳತ್ವ ವಹಿಸಿ, ಊರಿನ ಗಣ್ಯರಲ್ಲಿ ಒಬ್ಬರೆನಿಸಿಕೊಳ್ಳುವಷ್ಟು ಗಟ್ಟಿ ವ್ಯಕ್ತಿತ್ವವನ್ನು ಹೊಂದಿದ್ದ ನನ್ನ ಆಯಿ, ಇನಿತೂ ಪ್ರತಿಭಟಿಸದೇ, ತಮ್ಮ ಸಣ್ಣ ಸಣ್ಣ ಖುಷಿಗಳನ್ನೆಲ್ಲ ಸಂಪ್ರದಾಯದ ಅಗ್ನಿಕುಂಡಕ್ಕೆ ಅರ್ಪಿಸಿದ್ದು ನನ್ನಲ್ಲಿ ಬೆರಗು ಮೂಡಿಸುವುದಿಲ್ಲ. ಕಾರಣ ನಾ ಬಲ್ಲೆ ಬೇರೆಯವರಿಗಾಗಿ ಹೋರಾಡಿದಷ್ಟು ಸುಲಭವಲ್ಲ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ನಮ್ಮವರೆಂದುಕೊಂಡವರೊಡನೆಯೇ ಹೋರಾಡುವುದು.




  - ಜಯಲಕ್ಷ್ಮಿ ಪಾಟೀಲ್

           27th March 2013

13 comments:

ಮನಸು said...

ನಿಜ ನಿಮ್ಮ ಮಾತು ಬೇರೆಯವರಿಗೆ ಹೋರಾಡಿದಷ್ಟು ತಮ್ಮ ಜೀವನಕ್ಕೆ ಹೋರಾಡುವುದು ಕಷ್ಟ.

Anonymous said...

ಬೇರೆಯವರಿಗೆ ಹೋರಾಡಿದಷ್ಟು ಸುಲಭವಲ್ಲ..ನಮಗಾಗಿ,ನಮ್ಮವರಿಗಾಗಿ ಹೊರಾಡುವುದು..ಎಲ್ಲರ ಮನದ ಮಾತು ಜಯಲಕ್ಷ್ಮಿ .. ಏಕೆ ಹಾಗೆ? ಬೇರೆಯವರಿಗೆ ಉದ್ದೂದ್ದ .. ಭಾಷಣ ಕೊರೆಯುವ ನಾವು ,ನಮ್ಮ ಸಣ್ಣ ಪುಟ್ಟ ಸಮಸ್ಯೆಗಳಿಂದ ಬಿಡಿಸಿಕೊಳ್ಳಲು ಹಿಂಜರಿಯುತ್ತೇವೆ .ದೂರದ ಬೆಟ್ಟ ನುಣ್ಣಗೆ ಎನ್ನುವ ಹಾಗೆ ಬೇರೆಯವರ ಸಮಸ್ಸ್ಯೆ ,ಯಾವಾಗಲು ಸರಳ ಅನ್ನಿಸ ತೊಡಗುತ್ತದೆ .. ಯಾವಾಗಲೂ ಹೆಣ್ಣು ಮಕ್ಕಳ ಬಗ್ಗೆ ಕಳಕಳಿಯಿಂದ, ಜವಾಬ್ದಾರಿಯಿಂದ ಬರೆಯುವ ನಿಮ್ಮ ಲೇಖನ ಆತ್ಮೀಯವಾಗಿರುತ್ತದೆ.-ಅಪರ್ಣ ರಾವ್.

Swarna said...

ಅನ್ಯಾಯ ಮಾಡುತ್ತಿರುವ ನಮ್ಮವರಿಗೆ ಅದು ಅನ್ಯಾಯ ಎಂದು ಗೊತ್ತಾಗುವುದೇ ಕಡಿಮೆ ಮತ್ತು ಪ್ರತಿಭಟನೆಗೆ ಸಿಗುವ ಉತ್ತರ ಬಹುಬಾರಿ ಭಾವನಾತ್ಮಕವಾದ ನಿರಾಕರಣೆ, ಅದಕ್ಕೆ ಹೆದರೇ
ಧನಿ ಉಡುಗುತ್ತದೆನೋ ?

Ahalya said...

"ಬೇರೆಯವರಿಗಾಗಿ ಹೋರಾಡಿದಷ್ಟು ಸುಲಭವಲ್ಲ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ನಮ್ಮವರೆಂದುಕೊಂಡವರೊಡನೆಯೇ ಹೋರಾಡುವುದು" ಇದು ಒಂದು ಮುಖ. ಇನ್ನೊಂದು ಮುಖ ಅಂದ್ರೆ ಆ ಪೀಳಿಗೆಯ (ಮತ್ತು ಅದರ ನಂತರದ ಪೀಳಿಗೆಯ) ಅನೇಕರು ನನ್ನಿಂದ ರಾದ್ಧಾಂತ ಆಗೋದು ಬೇಡ.ಸಂಸಾರದಲ್ಲಿ ಶಾಂತಿ ನೆಮ್ಮದಿ ಇರಬೇಕು.ಯಾಕೆ ಸುಮ್ನೆ ಗಲಾಟೆ ಅಂತ ಭಾವಿಸ್ಕೊಂಡು ಎಲ್ಲದಕ್ಕೂ ರಾಜಿ ಮಾಡ್ಕೊಂಡುಬಿಡೋದು. ಅಷ್ಟೇ ಅಲ್ಲ,ಆ ರಾಜಿಯಲ್ಲೂ ಒಂದು ನೆಮ್ಮದಿ ಕಂಡುಕೊಳ್ಳೋದು.
ಅದೇ ಮಕ್ಕಳ,ಮೊಮ್ಮಕ್ಕಳ ವಿಷಯ ಬಂದಾಗ ಉದಾರರಾಗೋದು. ಪುರೋಗಾಮಿ ವಿಚಾರಗಳಿಗೆ ಪೂರ್ಣ ಸಮ್ಮತಿ ನೀಡದಿದ್ದರೂ ಅಸಮ್ಮತಿ ಸೂಚಿಸದೆ ಇರ್ತಾರೆ ಅನ್ನೋದು ನನ್ನ ಅನುಭವಕ್ಕೆ ಬಂದ ವಿಷಯ!

ಎಂದಿನಂತೆ ಓದೋಕೆ ಖುಷಿ ಕೊಡೋ ಬರಹ :):)

sunaath said...

ಆಯಿ ತನ್ನ ಕಾಲದಲ್ಲಿ ತಾನು ಬಂದಿಯಾಗಿದ್ದಳು. ಹೊಸ ಕಾಲವು ಆಕೆಯನ್ನು ಆ ಬಂಧನದಿಂದ ಮುಕ್ತಗೊಳಿಸಿತು. ತಾನು ಹಳೆಯ ಕಾಲದವಳಂತೆಯೇ ಉಳಿದರೂ ಸಹ, ‘ಹೊಸ ಕಾಲದ ಹಸು ಮಕ್ಕಳ ಹರಸಿ, ಹಕ್ಕಿ ಹಾರುತಿದೆ ನೋಡಿದಿರಾ!’ ಎನ್ನುವದು ಆಯಿಗೆ ಸರಿ ಹೊಂದುತ್ತದೆ!

Jayalaxmi said...

ನನ್ನಿ ಸುಗುಣಾ.

Jayalaxmi said...

ನಿಜ. ಅಪರ್ಣಾ, ನಿಮ್ಮ ವಿಶ್ವಾಸಕ್ಕೆ ನನ್ನಿ.

Jayalaxmi said...

ಸ್ವರ್ಣ,
ಅದು ಅವರಿಗೆ ಅನ್ಯಾಯ ಅನ್ನಿಸುವುದಕ್ಕಿಂತ ವರ್ಷಾನುಕಾಲ ಅಥವಾ ತಲಮಾರುಗಳಿಂದ ಬಂದಿರುವ ಆಚರಣೆಯಾಗಿರುತ್ತಾದ್ದರಿಂದ ಅನ್ಯಾಯ ಅನ್ನಿಸದೇ, ಎಷ್ಟೇ ಕಷ್ಟವಾದರೂ ಸರಿ ಅದೊಂದು ಪಾಲಿಸಲೇಬೇಕಾದ ನಿಯಮ ಎಂಬ ನಂಬಿಕೆ ಇರುತ್ತದೆ. ಅದನ್ನು ತಪ್ಪಿದರೆಲ್ಲಿ ಇನ್ನೇನು ಕೇಡಾಗುತ್ತದೋ ಎಂಬ ಮೂಢಭಯವೂ ಸಹ.

Jayalaxmi said...

ಅಹಲ್ಯ,
ಹೌದು ನೀವು ಹೇಳಿದ್ದು ೧೦೦% ಕರ್ರೆಕ್ಟು.

Jayalaxmi said...

ಸುನಾಥ್ ಕಾಕಾ,
ನನ್ನಿ ಕಾಕಾ. :)

ಸಂಧ್ಯಾ ಶ್ರೀಧರ್ ಭಟ್ said...

ಮಾ " ಬೇರೆಯವರಿಗಾಗಿ ಹೋರಾಡಿದಷ್ಟು ಸುಲಭವಲ್ಲ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ನಮ್ಮವರೆಂದುಕೊಂಡವರೊಡನೆಯೇ ಹೋರಾಡುವುದು."

೧೦೦% ನಿಜ ಈ ಮಾತು.
ಅಂದ ಹಾಗೆ ಈಗಲೂ ಮರುಮದುವೆಯಾದವರ ಕಟ್ಟುಪಾಡುಗಳು ಹಾಗೆಯೇ ಇದೆಯಾ ?
ನಿಮ್ಮ ಆಯಿ ನಿಮ್ಮನೆಯಿಂದ ಓದ್ದೊಡಿಸಿದ ಕೆಟ್ಟ ಪರಂಪರೆಯನ್ನು ಎಲ್ಲರೂ ಒದ್ದೋಡಿಸಬೇಕು.

Jayalaxmi said...

ಗೊತ್ತಿಲ್ಲ ಸಂಧ್ಯಾ. ಹೌದು ‘ಮೂಢ’ ನಂಬಿಕೆ, ಆಚರಣೆಗಳು ಇಲ್ಲವಾಗಬೇಕು. ಮತ್ತು ಅದು ನಮ್ಮಿಂದಲೇ ಶುರುವಾಗಬೇಕು.ಅಲ್ಲವೇ

minchulli said...

Intha aayigala sankhye sahasraagali...

Kannu thumbi banthu