Wednesday, October 30, 2013

ನಾನೀಗ...

ಇಲ್ಲಿಯವರೆಗೆ
ಬಯಸಿದ್ದು ಸಿಕ್ಕೂ ಕೈ ಜಾರಿಯೋ
ಬಯಸಿದ್ದು ಸಿಗದೇ ಹೋಗಿಯೋ
ಯಾವುದು ಏನಂತಾನೇ ಗೊತ್ತಿರದೆ
ಬಯಸದೇ ಇರುವುದೋ
ಅಂತೂ ಆಸೆಗಳು ಮಣ್ಣಾಗಿ
ಕೆಲವೊಮ್ಮೆ ಹುಟ್ಟದೆಯೇ
ನಾನೀಗ ಅಷ್ಟರ ಮಟ್ಟಿಗೆ
ಬುದ್ದ

ಇನ್ನಷ್ಟು ಬಾಕಿ ಇದೆ ಜೀವನ
ಮುಟ್ಟು ನಿಂತಿಲ್ಲದ ಹೆಣ್ಣು
ಜೀವಂತವಾಗಿರುವುದರ ಪ್ರತೀಕ
ಈ ಉಸಿರಾಟ
ನಿತ್ಯ ಕಣ್ತೆರೆದು ಬದುಕನ್ನ
ಸಂಧಿಸಲೇಬೇಕಾದ ಅನಿವಾರ್ಯತೆಗೆ
ಗರ್ಭ ಕಟ್ಟುತ್ತದೆ
ಬೇಕೋ ಬೇಡವೋ ಹುಟ್ಟಿ ಬೆಳೆಯುತ್ತದೆ
ಆಸೆ ಸಂತಾನ
ಗರ್ಭಪಾತ ಮಹಾ ಪಾಪ
ತಾನಾಗಿ ಬರುವ ಸಾವಿಗೆ
ಕಾಯಬೇಕು ನವೆನವೆದು
ಅಂತೂ ಆಸೆಗಳು ಮಣ್ಣಾಗಿ
ಕೆಲವೊಮ್ಮೆ ಹುಟ್ಟದೆಯೇ
ನಾನೀಗ ಅಷ್ಟರ ಮಟ್ಟಿಗೆ
ಬುದ್ದ...

     -27th Oct 2013

7 comments:

ಕನಸು ಕಂಗಳ ಹುಡುಗ said...

ನಿತ್ಯ ಕಣ್ತೆರೆದು ಬದುಕನ್ನ
ಸಂಧಿಸಲೇಬೇಕಾದ ಅನಿವಾರ್ಯತೆಗೆ
ಗರ್ಭ ಕಟ್ಟುತ್ತದೆ
ಬೇಕೋ ಬೇಡವೋ ಹುಟ್ಟಿ ಬೆಳೆಯುತ್ತದೆ
ಆಸೆ ಸಂತಾನ
ಅದ್ಭುತ ಸಾಲುಗಳು..

ಬದುಕು ಸಂಧಿಸುವ ಎಲ್ಲ ಘಳಿಗೆಗೆ ಮತ್ತು ಯಾವುದೋ ತಿರುವಿನಲ್ಲಿ ಅಚಾನಕ್ಕಾಗಿ ಎದುರಾಗಿ ಬದುಕು ಕೇಳುವ ಪ್ರಶ್ನೆಗಳಿಗೆ ಎಲ್ಲದಕ್ಕೂ ನಮ್ಮಲ್ಲಿ ಉತ್ತರ ಇರಲಿಕ್ಕಿಲ್ಲ.. ಆದರೆ ಬದುಕು ಕೇಳೋ ಆ ಪ್ರಶ್ನೆಗಳಿಗೆ ನಾವೆಷ್ಟು ಸಮಂಜಸ ಉತ್ತರವಾಗಿದ್ದೇವೆ ಎನ್ನುವುದು ನಾವು ಹೇಗೆ ಬದುಕಿದ್ದೇವೆಂಬುದರ ಪ್ರತಿಬಿಂಬ..

ನಿಮ್ಮ ಈ ಕವನ ಓದಿದರೆ ನಿಮ್ಮ ಪಾತ್ರದ ನೆನಪಾಗುತ್ತೆ... ಇಷ್ಟವಾಯ್ತು....

Badarinath Palavalli said...

'ನವೆನವೆದು' ತುಂಬಾ ಒಳ್ಳೆಯ ಪ್ರಯೋಗ.
ಬದುಕಿನ ಹುಟ್ಟು ಮತ್ತು ಅದರ ಸಾರ್ಥಕ್ಯ ಎಷ್ಟೋ ಸಾರಿ ನಮ್ಮ ಕೈಯಲಿ ಹಿಡಿತವಿಲ್ಲದ ವ್ಯವಹಾರ ಅನಿಸಿಬಿಡುತ್ತದೆ.

Jayalaxmi said...

ಧನ್ಯವಾದಗಳು ಕನಸು ಕಂಗಳ ಹುಡುಗ ರಾಘವ. :)

Jayalaxmi said...

ಅಲ್ಲವಾ ಬದ್ರಿ?! :( ಧನ್ಯವಾದ ಪ್ರತಿಕ್ರಿಯೆಗೆ. :)

Swarna said...
This comment has been removed by the author.
Swarna said...

ಆಸೆಗಳು ಹುಟ್ಟಿ, ಸತ್ತು ಮತ್ತೆ ಹುಟ್ಟುವ ಚಕ್ರವನ್ನು
ಸೊಗಸಾಗಿ ಹೇಳಿದ್ದಿರಿ.
ಕ್ಷಣ ಮಾತ್ರದ ಬುಧ್ಧರು ...nice

ಮನಸು said...

ಅದ್ಭುತ ಸಾಲುಗಳು ..