ನೀ ಯಾರ ಮನೆಯ ಮಗಳೇ ಅಕ್ಕಾ
ನೀ ಯಾರ ಮನೆಯ ಮಗಳೆ ಹೇಳು (ಪ)
ಸೊಲ್ಲೊತ್ತಿ ಬದುಕಿದರೆ ನೀ ಸಾದ್ವಿಯೇ ಅಕ್ಕಾ
ಸೊಲ್ಲೆತ್ತಿ ಸಿಡಿದರೆ ನೀ ಸೂಳೆಯೆ
ಸಾದ್ವಿ ಸೂಳೆಯಾ ಜಟಾಪಟಿಯಲಿ ಹೆಣ್ಣುಜನ್ಮವಿದು
ನೋಡು ಬೆಪ್ಪಾಯಿತೇ ಕೇಳು ಬೆಪ್ಪಾಯಿತೆ (೧)
ಅವರಿವರ ಮಕ್ಕಳು ಬದಲಾದರೇ ಅಕ್ಕಾ
ತಮ್ಮ ಮಕ್ಕಳ ವೈರಿ ಇವರಾದರೇ
ನಿಮ್ಮವ ನಮ್ಮವನೆಂಬ ಹೊಡೆದಾಟದಲಿ ಮಗುವದು
ನೋಡು ಬೆಪ್ಪಾಯಿತೇ ಕೇಳು ಬೆಪ್ಪಾಯಿತೇ (೨)
ಇವರು ಸಮಬಾಳು ಬೇಕೆಂದರೇ ಅಕ್ಕಾ
ಅವರು ಸಮ ದೂರ ನಿಲ್ಲೆಂದರೆ
ಸರಿಸಮದ ಅಸಹನೆಯಲಿ ಸುಮ್ಮಾನವಿದು
ನೋಡು ಬೆಪ್ಪಾಯಿತೇ ಕೇಳು ಬೆಪ್ಪಾಯಿತೆ (೩)
ಮೇಲರಿಮೆಯ ಬಣ್ಣ ಬಿಳಿಯಾಯಿತೇ ಅಕ್ಕಾ
ಕೀಳರಿಮೆಯ ಬಣ್ಣ ಕಪ್ಪಾಯಿತೇ
ಕಪ್ಪು ಬಿಳುಪಿನಾ ಹೊಡೆದಾಟದಲ್ಲಿ ದೇಶವಿದು
ನೋಡು ಬೆಪ್ಪಾಯಿತೇ ಕೇಳು ಬೆಪ್ಪಾಯಿತೆ (೪)
ಬಲಗೈ ಮೇಲಂತೆ ಬಲವೂರಿ ಹೇಳಿದರೇ ಅಕ್ಕಾ
ಎಡಗೈ ಎತ್ತರವೆಂದು ದನಿ ಎತ್ತಿ ಹಾಡುವರೆ
ಎಡ ಬಲದ ಹೊಡೆದಾಟದಲಿ ದೇಹವಿದು
ನೋಡು ಬೆಪ್ಪಾಯಿತೇ ಕೇಳು ಬೆಪ್ಪಾಯಿತೆ (೫)
- ಜಯಲಕ್ಷ್ಮೀ ಪಾಟೀಲ್
No comments:
Post a Comment