ವೋಲ್ವೊ ಸಿಟಿಬಸ್, ಸಿಲ್ಕ್ ಬೋರ್ಡ್‍ನ ಸಿಗ್ನಲ್ ಇನ್ನೂ ಅಲ್ಲಿದೆ ಅನ್ನುವಾಗಲೇ ಪುಟ್ಟ ಜರ್ಕಿನೊಂದಿಗೆ ನಿಲ್ಲಲು, ಕತ್ತು ಉದ್ದ ಮಾಡಿ ಎದುರಿನ ದಟ್ಟ ವಾಹನಗಳ ಸಂಖ್ಯೆಯನ್ನು ಅಂದಾಜು ಹಾಕತೊಡಗಿದ ಅದ್ವೈತ. ಆಫೀಸಿಗೆ ಅರ್ಧ ಮುಕ್ಕಾಲು ಗಂಟೆ ಲೇಟಾಗಿ ತಲುಪಿ ಇಡೀ ದಿನ ಕೆಲಸ ಮಾಡಿದರೂ, ಬರೀ ಅರ್ಧ ದಿನ ಮಾತ್ರ ಲೆಕ್ಕಕ್ಕುಳಿಯುವುದು ಎನ್ನುವ ವಾಸ್ತವ ಅಲ್ಲಿಯವರೆಗಿನ ಅವನ ನಿರಾಳತೆಯನ್ನು ಕಸಿದುಕೊಂಡಿತು.
ದಿನವೂ ಬೈಕ್‍ಲ್ಲೇ ಆಫೀಸಿಗೆ ಹೋಗುತ್ತಿದ್ದವನು ಇಂದು ಬೆನ್ನು ನೋವಿನ ಕಾರಣದಿಂದ ಅನಿವಾರ್ಯವಾಗಿ ಮೊದಲ ಬಾರಿಗೆ ವೋಲ್ವೊ ಸಿಟಿಬಸ್ ಏರಿದ್ದ. “ಈ ವಯಸ್ಸಿಗೆಲ್ಲಾ ಇದೆಂಥದ್ದೋ ಬೆನ್ನು ನೋವು ನಿಂಗೆ? ಮೊದ್ಲು ನಡಿ ಡಾಕ್ಟರ್ ಹತ್ರ ಹೋಗ್ಬರೋಣ, ಇವತ್ತು ರಜೆ ಹಾಕು” ಎಂದ ಅಮ್ಮನ ಅಕ್ಕರೆಗೆ, ಈವಾಗ್ಲೇ ಹೋಗಿಬಿಡ್ಲಾ ಅನಿಸಿದರೂ ಕಮ್ಮಿ ರಜೆಗಳ ಸಂಖ್ಯೆ ಮನದಲ್ಲಿ ಸುಳಿದು, “ಶನಿವಾರ ನಾನೇ ಡಾಕ್ಟರ್ ಹತ್ರ ಹೋಗ್ತೀನಮ್ಮಾ ಈಗ ರಜೆ ಸಿಗೊಲ್ಲ” ಎನ್ನುತ್ತಾ ಅಮ್ಮ ಕೊಟ್ಟ ಪೇನ್ ಕಿಲ್ಲರ್ ಮಾತ್ರೆ ನುಂಗಿ ಬಸ್ ಸ್ಟಾಪಿನೆಡೆ ಹೆಜ್ಜೆ ಹಾಕಿದ್ದ. ಬಸ್ ಹತ್ತಿ ಕಿಟಕಿ ಪಕ್ಕದ ಸೀಟಲ್ಲಿ ಕೂರುತ್ತಿದ್ದ ಹಾಗೇ ಪಕ್ಕದಲ್ಲಿ ಇನ್ಯಾರೋ ಬಂದು ಕೂತಿದ್ದನ್ನು ಕಂಡು, ‘ಆಹಾ ಒಂದು ಸೆಕೆಂಡ್ ಮಿಸ್ ಆಗಿದ್ರೂ ಕಿಟಕಿ ಪಕ್ಕದ ಸೀಟ್ ಮಿಸ್ ಆಗಿ ಹೋಗಿರೋದು ಸಧ್ಯ!’ ಅನ್ಕೊಂಡು ಖುಷಿಯಾದ. ಬೆನ್ನಿಗಾಸರೆಯಾಗುವ ಸೀಟ್, ಈ AC ಬಸ್ಸಿನ ಮುಚ್ಚಿದ ಕಿಟಕಿಯ ಗಾಜುಗಳ ಕೃಪೆಯಿಂದಾಗಿ ಇರುವುದಕ್ಕಿಂತ ಕಡಿಮೆ ಕೇಳಿಸುವ ಹೊರಗಿನ ಸದ್ದು, ತಪ್ಪಿದ ವಾಹನಗಳ ಕಾರ್ಬನ್ನಿನಿಂದಾಗಿ ಉಸಿರಾಡಲೂ ಕಷ್ಟ ಎನ್ನುವಂತೆ ಕಲುಶಿತಗೊಂಡ ಗಾಳಿಯ ಸೇವನೆ, ದಾರಿಯುದ್ದಕ್ಕೂ ಕೇಳಬಹುದಾದ ಎಫ಼್ ಎಮ್ ರೆಡಿಯೊ ಹಾಡುಗಳು, ಅದ್ಯಾರೋ ಹಾಕಿಕೊಂಡ ಪರ್ಫ್ಯೂಮಿನ ಘಮ ರೂಮ್ ಸ್ಪ್ರೇಯಂತೆ ಬಸ್ಸಿನ ತುಂಬೆಲ್ಲಾ ಹರಡಿಕೊಂಡಿದ್ದು, ಎಲ್ಲವೂ ಬಸ್ಸಲ್ಲಿ ಕುಳಿತ ಸ್ವಲ್ಪ ಹೊತ್ತಿಗೆಲ್ಲಾ ಅದೆಂಥಾ ರಿಲ್ಯಾಕ್ಸ್ ಮೂಡಿಗೆ ಅವನನ್ನು ಎಳೆದವೆಂದರೆ ಇನ್ನು ಮುಂದೆ ಬೈಕಲ್ಲಿ ಆಫೀಸಿಗೆ ಹೋಗುವುದೇ ಬೇಡ ಎಂದವನು ನಿರ್ಧರಿಸಿಬಿಟ್ಟ. ಬೆನ್ನಿನ ಹಿತಕ್ಕೆ ಇಂದು ಈ ಪಯಣ ಬೇಗ ಮುಗಿಯದಿರಲಿ ದೇವರೇ ಎಂದು ಅವನ ಮನ ಮೈಮರೆತು ಹಾರೈಸಿಕೊಂಡಿತ್ತು. ಅದನ್ನ ಅಶ್ವಿನಿ ದೇವತೆಗಳು ಕೇಳಿಸಿಕೊಂಡರೇನೋ, ಸಿಲ್ಕ್ ಬೋರ್ಡ್ ಸಿಗ್ನಲ್ ಹತ್ರ ಟೈಟ್ ಟ್ರ್ಯಾಫಿಕ್ ಸೃಷ್ಠಿಸಿಬಿಟ್ಟಿದ್ದರು!
ಕಿಟಕಿಯಿಂದಾಚೆ ದೃಷ್ಟಿ ಹಾಯಿಸಿದ ಅದ್ವೈತ. ಈಗೊಂದು ಮೂರ್ನಾಲು ತಿಂಗಳಿಂದ ವಾರಕ್ಕೆರಡು ಮೂರು ಬಾರಿ ಸತತ ಇದೇ ಸಿಗ್ನಲ್‍ನಲ್ಲಿ ಕಾಣಿಸಿಕೊಳ್ಳುತ್ತಿರುವ, ಮೊದಲೆಲ್ಲ ಇವನಿಂದ ಭಿಕ್ಷೆ ಪಡೆಯುತ್ತಿದ್ದ ಮಧ್ಯ ವಯಸ್ಸಿನ ಹೆಣ್ಣುಮಗಳು ಕಂಡಳು. ಬಳಲಿದ ಮುಖ ಹೊತ್ತು ಅಲ್ಲಿದ್ದ ಸ್ಕೂಟರ್ ಸವಾರನೆದುರು ಕೈಯೊಡ್ಡಿ ನಿಂತಿದ್ದವಳು, ನಿರಾಶಳಾಗಿ ಮುಂದೆ ನಡೆದಿದ್ದನ್ನು ಕಂಡು ಖಿನ್ನನಾದ...
*
ಮೊದಲ ಬಾರಿಗೆ ಇದೇ ಸಿಗ್ನಲ್‍ನಲ್ಲಿ ಆಕೆ ಅದ್ವೈತನೆದುರು ಕೈ ಚಾಚಿದ್ದಾಗ, ಮಾಮೂಲಿನಂತೆ ಚಾಚಿದ ಕೈಯನ್ನು ನೋಡೇ ಇಲ್ಲವೆನ್ನುವಂತೆ ಮುಖ ತಿರುಗಿಸುವ ಬದಲು ಅವನಿಗೇ ಅರಿವಿಲ್ಲದಂತೆ ಇಪ್ಪತ್ತು ರೂಪಾಯಿಯ ನೋಟೊಂದನ್ನು ನೀಡಿ, ನಂತರ ತಾನ್ಯಾಕೆ ಅವಳಿಗೆ ಅಷ್ಟು ಹಣ ಕೊಟ್ಟೆ ಎಂದು ಆಶ್ಚರ್ಯವಾಗಿ ಕತ್ತೆತ್ತಿ ಆಕೆಯನ್ನು ನೋಡಿದ್ದ. ಹಳೆಯದಾದರೂ, ಹರಿದಿರದ ಸ್ವಚ್ಛವಾದ ಸೀರೆಯುಟ್ಟು, ಮೈ ತುಂಬಾ ಸೆರಗು ಹೊದ್ದು, ಹಣೆಗೆ ಹುಡಿ ಕುಂಕುಮವನ್ನಿಟ್ಟುಕೊಂಡು, ಅಂಗಲಾಚದೆ, ದೈನೇಸಿ ಮುಖಭಾವವೂ ಧರಿಸದೇ ಗಂಭೀರವಾಗಿದ್ದ, ನೋಡಿದ ತಕ್ಷಣ ಗೌರವ ಮೂಡುವಂತೆ ಕಾಣುತ್ತಿದ್ದ ಆ ಹಳ್ಳಿ ಹೆಣ್ಣುಮಗಳು ಭಿಕ್ಷುಕಿಯಂತೆ ಕಾಣಿಸಲಿಲ್ಲ. ಭಿಕ್ಷುಕಿ ‘ಥರ’ ಕಾಣದ ಕಾರಣಕ್ಕೆ ಒಡ್ಡಿದ ಕೈಗೆ ಚಿಲ್ಲರೆ ಕಾಸು ಹಾಕಲು ಮನಸು ಬರದೆ, ಇಪ್ಪತ್ತರ ನೋಟೊಂದನ್ನು ನೀಡಿಬಿಟ್ಟೆನೇನೋ, ಅಷ್ಟೊಂದು ಕೊಡಬಾರದಿತ್ತು ಅನಿಸಿತು. ಕೊಟ್ಟಾಯ್ತಲ್ಲ ಬಿಡು ಇನ್ಯಾಕೆ ಅದನ್ನ ಯೋಚಿಸೋದು ಅಂದುಕೊಂಡನಾದರೂ ಅಪ್ರಯತ್ನವಾಗಿ ಅಂದು ಹಲವು ಸಲ ಆಕೆಯನ್ನು, ತಾನು ಕೊಟ್ಟ ಇಪ್ಪತ್ತರ ನೋಟನ್ನು ನೆನಪಿಸಿಕೊಂಡಿದ್ದ. ಅದೂ ಸಹ ಅವನಿಗೆ ಆಶ್ಚರ್ಯವೇ! ಎಂದೂ ನೋಡಿರದ, ಸಂಬಂಧಪಡದ ಆಕೆಯನ್ನ್ಯಾಕೆ ನೆನಪಿಸಿಕೊಳ್ಳುತ್ತಿದ್ದೇನೆ ತಾನು? ಅದ್ವೈತನೇನು ಮೊದಲ ಬಾರಿ ಭಿಕ್ಷುಕರನ್ನು ಕಂಡವನೇನಲ್ಲ. ಸಿಗ್ನಲ್‍ಗಳಲ್ಲೆಲ್ಲಾ ನಿದ್ದೆಹೋದ ಮಗುವನ್ನು ಸೊಂಟದಲ್ಲಿ ಕುಳ್ಳರಿಕೊಂಡೋ, ಬೆನ್ನಿಗಾನಿಸಿಕೊಂಡೋ ಅವು ಜಾರದಂತೆ ಬಟ್ಟೆಯಿಂದ ಬಿಗಿದು, ಕೆಲವೊಮ್ಮೆ ಮಗುವಿನ ಕೈಗೋ ಕಾಲಿಗೋ ಬ್ಯಾಂಡೇಜ್ ಬಟ್ಟೆ ಸುತ್ತಿ ದಯನೀಯ ಮುಖ ಹೊತ್ತು ‘ಅಣ್ಣಾss’ ಎನ್ನುತ್ತ ಕೈ ಚಾಚಿ ನಿಲ್ಲುವ ಪುಟ್ಟಪುಟ್ಟ ಹೆಂಗಸರು, ಪಿಸುರುಗಣ್ಣು ಹೊತ್ತು ಕೈ ತಿರುಚಿಕೊಂಡೋ, ಕಾಲೆಳೆಯುತ್ತಲೋ, ಬಾಯಿ ವಕ್ರ ಮಾಡಿಕೊಂಡೋ ಬಂದು ಮುಟ್ಟಿ ಮುಟ್ಟಿ ಭಿಕ್ಷೆ ಕೇಳುವ ಗಂಡಸರು, ಹುಟ್ಟುತ್ತಲೇ ಉಳಿದ ಅಂಗಗಳ ಜೊತೆಗೆ ದೈನೇಸಿತನವೂ ಹುಟ್ಟಿಕೊಂಡಿದೆಯೇನೋ ಅಂತನಿಸುವ ಮುಖಭಾವದ ಸಿಂಗಳಬುರಕ ಮಕ್ಕಳನ್ನು ನೋಡೀ ನೋಡಿ ಓಡಿಸಿ ರೇಜಿಗೆ ಹುಟ್ಟಿದ್ದುದರಿಂದ, ಈ ಭಿಕ್ಷುಕರ ಕಾಟದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸುವ ಬೆಂಗಳೂರುವಾಸಿಗಳಲ್ಲಿ ಇವನೂ ಒಬ್ಬ. ಆದರೆ ಅದ್ಯಾಕೊ ಈಕೆ ಅವರೆಲ್ಲರಿಗಿಂತ ಭಿನ್ನವಾಗಿ ಕಂಡಿದ್ದಳು. ಆಕೆ ಭಿಕ್ಷೆ ಬೇಡುವ ವೃತ್ತಿಯವಳಾಗಿರದೆ, ಯಾವುದೋ ಅನಿವಾರ್ಯತೆಗೆ ಸಿಲುಕಿ ಭಿಕ್ಷೆ ಬೇಡುತ್ತಿದ್ದಾಳೆ ಎಂದು ಪದೇ ಪದೇ ಅನಿಸತೊಡಗಿತ್ತು ಅದ್ವೈತನಿಗೆ. ಭಿಕ್ಷೆ ಬೇಡುವಂಥ ಯಾವ ಅನಿವಾರ್ಯತೆ ಆಕೆಗೆ ಬಂದಿರಬಹುದು ಎಂದು ಊಹಿಸಲು ಯತ್ನಿಸಿ ಸೋತಿದ್ದ. ಕೊನೆಗೆ ಕಂಡರಿಯದ ಯಾರೋ ಭಿಕ್ಷುಕಿಯ ಬಗ್ಗೆ ತಾನು ಯೋಚಿಸುತ್ತಿರುವುದು, ಇಪ್ಪತ್ತು ರೂಪಾಯಿ ಕೊಟ್ಟಿದ್ದು ಅತಿಯಾಯ್ತು ಎಂದೆನಿಸಿ ಸುಮ್ಮನಾದವನು, ಮಾರನೆಯ ದಿನ ಮತ್ತಿದೇ ಸಿಗ್ನಲ್‍ನಲ್ಲಿ ಆಕೆ ಇವನೆದುರು ನಿಂತಾಗ ತಡೆಯಲಾಗದೆ ಕೇಳಿಯೇಬಿಟ್ಟಿದ್ದ.
“ಯಾಕಮ್ಮಾ??”
“ಮಗ್ಗ ಆರಾಮಿಲ್ರಿ, ನಿಮ್ ವಾರ್ಗಿ ಅದಾನ. ಕಳ್ಳಾಗ ಗಡ್ಡ್ಯಾಗೇತಂತ. ಆಪ್ರೇಸನ್ ಮಾಡಾಕ ಭಾಳ್ ರೊಕ್ಕ ಬೇಕಂತ್ರಿ, ಅಟ್ಟ ರೊಕ್ಕ ಇಲ್ರೀ ನನ್ನ ಬಲ್ಲಿ... ಊರಿಂದ ತಂದಿದ್ ರೊಕ್ಕಾ ಅದ್ಯಾನ್ಯಾನೊ ತಪಾಸ್ ಮಾಡ್ಸಾಕಂತ ಖಾಲಿ ಆಗಿ ಹೋದೂರಿ. ಎಡ್ಡ ಲಾಕ್ ರುಪಾಯಿ ತಂದ ಕೊಟ್ಟ್ರ ಆಪ್ರೇಸನ್ ಮಾಡ್ತೀವಿ, ಇಲ್ಲಾಕಂದ್ರ ಮಗನ್ನ ಹೊಡಮಳ್ಳಿ ಊರಿಗ್ ಕರ್ಕೊಂಡು ಹೋಗಾಂತಾರ್ರಿ ದವಾಖಾನ್ಯಾಗ. ಊರಿಗ್ ಹ್ವಾದ್ರ ನನ್ ಮಗಾ ಬದುಕೂದಿಲ್ರಿ ಯಪ್ಪಾ. ಹರೇದ್ ಮಗಾ ಕಣ್ ಎದ್ರಿಗೆ ಸಾವೂದ್ ನಾ ಹೆಂಗ್ ನೋಡಲ್ರಿ ತಂದೆ? ಮಗನ್ ಜೀವಕ್ಕಿಂತ ಮಾನ ದೊಡ್ಡದಲ್ಲ ಅಂತ...” ಬೇಡಲಾಗದೆ ಬೇಡುತ್ತಿರುವ ದನಿಯಲ್ಲಿ ಅನಿವಾರ್ಯತೆ, ಅಸಹಾಯಕತೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಒಂದೂ ಮಾತಾಡದೆ ತಟ್ಟನೆ ಪ್ಯಾಂಟ್ ಜೇಬಲ್ಲಿದ್ದ ವ್ಯಾಲಟ್ ತೆರೆದು ನೋಟೊಂದನ್ನು ಕೊಟ್ಟ. ಕೈಗೆ ನೋಟು ಸಿಗುತ್ತಿದ್ದಂತೆಯೇ ಆಕೆಗದು ಐನೂರರ ನೋಟೆನ್ನುವ ಅರಿವಾಗಿ, “ಇದು... ಇದು... ಇಟ್ಟಾಕೊಂಡು... ಬ್ಯಾಡ್ರಿ, ನಿಮಗೂ ಬೇಕಾಕ್ಕಾವು” ಹಿಡಿಯಷ್ಟಾಗಿ ಮಾತಾಡುತ್ತಿದ್ದವಳನ್ನು ತಡೆದು,
“ಇಲ್ಲ, ನನ್ನ ಹತ್ರ ಇನ್ನೂ ದುಡ್ಡಿದೆ. ಮೊದ್ಲು ನಿಮ್ಮ ಮಗನ ಆಪರೇಶನ್ನಿಗೆ ಹಣ ಹೊಂದ್ಸಿ ನೀವು” ಎಂದ. ಸಿಗ್ನಲ್‍ನ ಹಸಿರು ದೀಪ ಹೊತ್ತಿಕೊಂಡಿತು. ತಾನು ಆಕೆಗೆ ಬಹುವಚನ ಬಳಿಸಿದ್ದು ಬೈಕಿನ ವೇಗದಲ್ಲಿಯೆ ಮನದಲ್ಲಿ ಸುಳಿಯಿತು.
ಆಫೀಸಿನ ಲಂಚ್ ಅವರ್‍ನಲ್ಲಿ ತನ್ನ ಸಹೋದ್ಯೋಗಿಗಳೆದುರು ಮಾತ್‍ಮಾತಲ್ಲಿಯೇ ಎಂಬಂತೆ ಆಕೆಯ ವಿಷಯ ತೆಗೆದು, ಆಕೆ ಹೇಳಿದ್ದನ್ನೆಲ್ಲಾ ಹೇಳಿ, ಆಕೆಯ ಬಗ್ಗೆ ತನಗನಿಸಿದ್ದನ್ನ, ತಾನಾಕೆಗೆ ಐದುನೂರು ರೂಪಾಯಿಗಳನ್ನು ಕೊಟ್ಟಿದ್ದನ್ನ ಒತ್ತುಕೊಟ್ಟು ಹೇಳಿದ. ಅಷ್ಟೊಂದು ಹಣವನ್ನ ಭಿಕ್ಷೆಯಲ್ಲಿ ಕೊಟ್ಟೆ ಎನ್ನುವಾಗ ಒಂದು ಬಗೆಯ ಹೆಮ್ಮೆ, ತೃಪ್ತಿ ದನಿಯಲ್ಲಿ ಒಡೆದು ತೋರುತ್ತಿತ್ತು.
ಮಾತುಗಳನ್ನಾಲಿಸಿದ ಇವನ ಎದುರಿನ ಕ್ಯಾಬಿನ್ನಿನ ವಿಶಾಲ್,
“ಐನೂರು!? ಯಾಮಾರಿದ್ರಿ ಅನಿಸುತ್ತೆ ನೀವು. ಈ ಬೆಂಗಳೂರಲ್ಲಿ ಭಿಕ್ಷೆ ಬೇಡುವ ವಿಧಾನಗಳಿಗೇನು ಕಮ್ಮಿಯಾ?! ನೀಟಾಗಿ ಡ್ರೆಸ್ ಮಾಡ್ಕೊಂಡು ಬೇಡ್ಕೊಳ್ಳೋದು ಲೇಟೆಸ್ಟ್ ವಿಧಾನ ಅನಿಸುತ್ತೆ. ಅದೂ ಈಗ ಒಂದು ಬ್ಯೂಸಿನೆಸ್ ಆಗಿದೆ ಅನ್ನೋದು ಎಲ್ರಿಗೂ ಗೊತ್ತಿರೊ ವಿಚಾರಾನೆ. ಅಂಥದ್ದ್ರಲ್ಲಿ, ನೀವೊಳ್ಳೆ ಹೊಸದಾಗಿ ಬೆಂಗ್ಳೂರಿಗೆ ಬಂದಿರೋರ್ ಥರಾ ಆಕೆಯ ಮಾತ್ ನಂಬಿ, ಕರಗಿ ಐನೂರು ಕೊಟ್ಟು ಬಂದಿದೀರಲ್ಲ, ನೀವೊಳ್ಳೆ ನೀವು!” ಅಂದ.
“ನನಗೂ ಇದೆಲ್ಲಾ ಗೊತ್ತೂರಿ ವಿಶಾಲ್, ಆದ್ರೆ ಯಾವ್ ಯಾಂಗಲ್‍ನಲ್ಲೂ ಆಕೆ ಅಂಥಾಕೆ ಅನಿಸ್ಲಿಲ್ಲ ನನಗೆ. ಜೆನ್ಯೂನ್ಲಿ ಆಕೆಯ ಮಗನ ಆಪರೇಶನ್‍ಗೋಸ್ಕರವೇ ಹಣ ಕೇಳ್ತಿರೋದು ಅನಿಸ್ತು” ಎಂದ ಅದ್ವೈತ.
“ನೀವು ಬಿಡೀಪಾ ಮಗು ಥರ, ಎಲ್ರುನೂ ನಂಬ್ತೀರಿ. ಜೊತೆಗೆ ಆ ಕರ್ಣನ ಅಪರಾವತಾರಾನೂ ಸಹ ಅಂತ ಇವತ್ತ್ ಗೊತ್ತಾಯ್ತು ನೋಡಿ” ರೇಗಿಸಿದಳೊಬ್ಬ ಕಲೀಗ್. ಆಕೆ ಹೇಳ್ತಿರೋದು ಕರೆಕ್ಟ್ ಅನ್ನುವಂತೆ ನಕ್ಕಿದ್ದರು ಉಳಿದವರು.
“ಆ ಕರ್ಣ ಸತ್ತು ಈ ನಿನ್ನ ಮಗಾ ಹುಟ್ಟಿರೋದು ಕಣೆ! ಕೇಳಿಸ್ಕೊಂಡ್ಯಾ? ದಿವಾನ್ರು ಐನೂರು ರೂಪಾಯ್ನ ಭಿಕ್ಷೆ ಕೊಟ್ಟ್ರಂತೆ” ಸಿಗ್ನಲ್‍ನಲ್ಲಿಯ ಹೆಣ್ಣುಮಗಳ ವಿಷಯವನ್ನ ಮನೆಯಲ್ಲೂ ಹೇಳಿದಾಗ, ತಂದೆ ಪ್ರತಿಕ್ರಿಯಿಸಿದ್ದು ಹೀಗೆ. ಅಪ್ಪ ಲೋಕ ವ್ಯವಹಾರದ ಮಾತಾಡಿದ್ರೂ ಆ ದನಿಯಲ್ಲಿನ ಮೆಚ್ಚುಗೆಯನ್ನ ಗುರುತಿಸಿದ್ದ ಅದ್ವೈತ.
ಅಮ್ಮ ಎಂದಿನಂತೆ ಮಗನ ಪರ ಮಾತಾಡಿದ್ದಳು. “ಅಯ್ಯೋ ಬಿಡಿ, ಅವ್ನೇನು ಬೇರೆಯವ್ರ ಥರ ಕುಡ್ದೂ ತಿಂದೂ ಹಾಳ್ ಮಾಡಿದ್ನೇ ದುಡ್ಡನ್ನ? ಯಾರ್ಗೋ ತನ್ನ ಕೈಲಾದಷ್ಟು ಅನುಕೂಲ್ವಾದ. ಅದ್ರಿಂದ ನಿಮ್ಮ ಮಹಾರಾಜ ವಂಶದ ಆಸ್ತಿಯೇನ್ ಕರಗಿಹೋಗ್ಲಿಲ್ಲ ಸುಮ್ನಿರಿ!”
ಈ ಅಮ್ಮಂಗೆ ನಾನು ಆಗೊಮ್ಮೆ ಈಗೊಮ್ಮೆ ಸ್ನೇಹಿತರ ಜೊತೆ ಬಿಯರ್ ಕುಡಿಯೋದೇನಾದ್ರೂ ಗೊತ್ತಾದ್ರೆ ಅಷ್ಟೇ ನನ್ನ ಕತೆ! ಎಂದು ಮನಸಲ್ಲಂದುಕೊಳ್ಳುತ್ತಾ, ನಗುತ್ತಾ ಅಡುಗೆ ಮನೆಗೆ ಹೋಗಿ ಅಮ್ಮನಿಗೆ ಇಷ್ಟ ಎಂದು ತಂದಿದ್ದ ಸಮೋಸ ಬಿಸಿ ಮಾಡಲು ಒವನ್ ಸ್ವಿಚ್ ಒತ್ತಿದ್ದ.
ಮುಂದೆಲ್ಲ ಸಿಗ್ನಲ್‍ನಲ್ಲಿ ಎದುರಿಗೆ ಸಿಕ್ಕಾಗಲೆಲ್ಲ, ಆಕೆ ಕೈ ಚಾಚುವ ಮುಂಚೆಯೇ ಐವತ್ತು, ನೂರು ರೂಪಾಯಿಗಳನ್ನ ತೆಗೆದು ಕೊಟ್ಟುಬಿಡುತ್ತಿದ್ದ. ಅವಳ ಮಗನ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದ. ಹಣ ಒಟ್ಟಾಗುತ್ತಿದೆಯೆ ಎಂದು ಕೇಳುತ್ತಿದ್ದ. ಎಷ್ಟೋ ಸಲ ಆಕೆ ಅದ್ವೈತನ ಕಣ್ಣಿಗೆ ಅದೇ ಸಿಗ್ನಲ್‍ನಲ್ಲಿ ಕಂಡರೂ ಟ್ರಾಫಿಕ್‍ನ ಇನ್ನೊಂದು ತುದಿಯಲ್ಲೊ, ತುಂಬಾ ಮುಂದೆಯೋ ಇರುತ್ತಿದ್ದಳು. ದಿನಗಳುರುಳಿದಂತೆ ಅವಳ ಮುಖದಲ್ಲಿನ್ನ ಕಳೆ ಕಂದುತ್ತಾ, ಆಡಲಾಗದ, ಅನುಭವಿಸಲಾಗದ ಅಸಹಾಯಕತೆ, ಆಕ್ರೋಶಗಳು ಕಂಡೂ ಕಾಣದಂತೆ ತೆಳುವಾಗಿ ಸೌಮ್ಯತೆಯ ಜಾಗವನ್ನಾಕ್ರಮಿಸತೊಡಗಿದ್ದು ಅದ್ವೈತನ ಕಣ್ಣಿಗೆ ಗೋಚರಿಸಿತೇ...?
ಸತತವಾಗಿ ಆಕೆ ಇದೇ ಸಿಗ್ನಲ್‍ನಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದುದನ್ನು ನೋಡಿ, ಈಗ ಹತ್ತುಹದಿನೈದು ದಿನಗಳ ಮುಂಚೆ ಅದೊಂದು ದಿನ, ಧಿಡೀರಂತ ತನ್ನ ಸಹೋದ್ಯೋಗಿಗಳು ಹೇಳುವಂತೆ ಈಕೆ ನಿಜಕ್ಕೂ ಸುಳ್ಳು ಹೇಳಿ ಭಿಕ್ಷೆ ಬೇಡಿ ಹಣ ಮಾಡುವ ಹೆಂಗಸಾಗಿರಬಹುದೇ ಎನಿಸತೊಡಗಿತು ಅದ್ವೈತನಿಗೆ. ಇಲ್ಲದಿದ್ದಲ್ಲಿ ಉಳಿದ ಭಿಕ್ಷುಕರು ಅವಳನ್ನು ಇಲ್ಲಿಂದ ಓಡಿಸಿ ಯಾವುದೋ ಕಾಲವಾಗಿರುತ್ತಿತ್ತಲ್ಲವೇ? ಅವರುಗಳೂ ಇಂಥಿಂಥಾ ಏರಿಯಾ ಇಂಥಿಂಥವರಿಗೆ ಎಂದು ಹಂಚಿಕೊಂಡಿರುತ್ತಾರೆಂದು, ಬೇರೆ ಏರಿಯಾದವರು ತಮ್ಮ ಏರಿಯಾ ಪ್ರವೇಶಿಸಿದರೆ ಓಡಿಸಿಬಿಡುತ್ತಾರೆಂದು ಎಲ್ಲೋ ಓದಿ ತಿಳಿದಿದ್ದ. ಅಷ್ಟು ದಿನ ಇಲ್ಲದ ಅನುಮಾನ ಅಂದು ಬಲವಾಗಿ ಕಾಡತೊಡಗಿ, ಕಾಕತಾಳಿಯವೆಂಬಂತೆ ಆಕೆಯೂ ಅಂದೇ ಎದುರು ನಿಂತು ಕೈ ಚಾಚಿದಾಗ, ಹಣ ಕೊಡದೆ ಅಸಹ್ಯ ಎನ್ನುವಂತೆ ಮುಖ ತಿರುವಿಬಿಟ್ಟಿದ್ದ. ಎತ್ತಿಕೊಂಡವರು ರಪ್ಪನೆ ಮಗುವನ್ನು ನೆಲಕ್ಕಪ್ಪಳಿಸಿದ ಭಾವ ಆಕೆಯ ಮುಖದ ಮೇಲೆ... ಮೊದಲ ಬಾರಿ ಅವಳ ಕಣ್ಣು ತುಂಬಿಕೊಂಡ ನೋಟ ಇವನಿಗೆ. ಕಣ್ಣೀರು ಕೆನ್ನೆ ಮೇಲಿಳಿಯುವ ಮೊದಲೇ ಇವನೆದುರಿನಿಂದ ಸರಿದು ಹೋಗಿದ್ದಳು. ಆ ಕ್ಷಣಕ್ಕೆ ಅದೂ ಒಂದು ನಾಟಕವೇ ಅನಿಸಿ ಗೆಟ್ ಲಾಸ್ಟ್ ಎನ್ನುವಂತೆ ಭುಜ ಹಾರಿಸಿದ್ದ.
ಮುಂದೆ ಇವನ ಬೈಕಿಗೆದುರಾಗುವ ಪ್ರಸಂಗ ಬಂದಾಗಲೆಲ್ಲ ಆಕೆ ತಲೆ ತಗ್ಗಿಸಿ ಬೇರೆಡೆ ನಡೆದು ಬಿಡುತ್ತಿದ್ದುದನ್ನು ಕಂಡು ಮೊದಮೊದಲು ಅಲಕ್ಷ್ಯ ಮಾಡಲು ನೋಡಿದನಾದರೂ ಯಾಕೋ ಮನಸಿಗೆ ಹರಳು ಕಡಿದಂಥಾ ಅನುಭವ... ಸಾಮಾನ್ಯವಾಗಿ ಭಿಕ್ಷುಕರು ಎಷ್ಟೆಲ್ಲಾ ಬೈದು ಕಳಿಸಿದರೂ ಅದು ತಮಗಲ್ಲವೇ ಅಲ್ಲ ಎನ್ನುವಂತೆ ಮತ್ತೆ ಕೈ ಚಾಚಿ ನಿಲ್ಲುವಾಗ, ಈಕೆಯ ವರ್ತನೆ... ಊಂಹೂಂ ಇಂಥಾ ಸ್ವಾಭಿಮಾನ ಭಿಕ್ಷುಕರಲ್ಲಿರಲು ಸಾಧ್ಯವೇ ಇಲ್ಲ ಎನ್ನುವುದು ಹೊಳೆದು ತನ್ನ ತಪ್ಪಿನ ಅರಿವಾಗಿತ್ತು ಅದ್ವೈತನಿಗೆ. ಯಾರನ್ನೂ ನಂಬದಂತೆ ಮಾಡುವ ನಗರ ಕ್ರೂರತೆ, ತನ್ನನ್ನೂ ಆವರಿಸಿ ತಾನು ಆಕೆಯೊಂದಿಗೆ ವರ್ತಿಸಿದ ರೀತಿಗೆ ಮುಂದೆ ಗಿಲ್ಟ್ ಅನುಭವಿಸತೊಡಗಿದ್ದ. ಮನೆಯಿಂದ ತಾನು ಆಫೀಸ್ ತಲುಪುವ ದಾರಿಯಲ್ಲಿ ಹತ್ತಾರು ಸಿಗ್ನಲ್‍ಗಳೂ ನೂರೆಂಟು ಜನ ಭಿಕ್ಷುಕರೂ ನಿತ್ಯವೂ ಎದುರಾಗುವುದು ಸಾಮಾನ್ಯ ಮತ್ತು ಮರೆತುಹೋಗುವ ಸಂಗತಿಯಾದರೂ ಭಿಕ್ಷೆ ಎನ್ನುವ ಪದ ಮನಸಿಗೆ ಬಂದಿದ್ದೇ, ಕಿವಿಗೆ ತಡ ಈಕೆಯನ್ನೇ ತಾನ್ಯಾಕೆ ನೆನಪಿಸಿಕೊಳ್ಳುತ್ತೇನೆ ಎನ್ನುವುದು ಅವನಿಗೇ ತಿಳಿಯದ ವಿಚಾರ. ಆಕೆ ಮಗನಿಗಾಗಿ ಭಿಕ್ಷೆ ಬೇಡುತ್ತಿದ್ದೇನೆ ಎಂದಿದ್ದು ತಾನು ತನ್ನ ಅಮ್ಮನ ವಾತ್ಸಲ್ಯದೊಂದಿಗೆ ಆಕೆಯ ವಾತ್ಸಲ್ಯವನ್ನು ಹೋಲಿಸಿಕೊಂಡು ಹೀಗೆ ಆರ್ದ್ರವಾಗುತ್ತೇನೆ ಎಂದೂ ಯೋಚಿಸಲಾರ. ಜಗತ್ತಿನ ಬಹುತೇಕರು ಅದ್ವೈತನ ಹಾಗೆಯೇ, ಅನಿಸಿದ್ದನ್ನು ಮಾಡಿಬಿಡುತ್ತಾರೆ ಆಡಿಬಿಡುತ್ತಾರೆ. ಯಾಕೆ ಹಾಗೆ ಮಾಡಿದೆ, ಮಾತಾಡಿದೆ ಎಂದು ತಲೆಬಿಸಿ ಮಾಡಿಕೊಳ್ಳುವುದಿಲ್ಲ. ಅದಕ್ಕೇ ಅವರು ಆ ಮಟ್ಟಿಗೆ ನಿರಾಳವಾಗಿರುತ್ತಾರೆ. ಅದ್ವೈತ ಅದೇ ಕೆಟಗರಿಯವನಾದರೂ ಆಕೆಯನ್ನು ತಾನು ಹಾಗೆ ಅವಮಾನಿಸಬಾರದಿತ್ತು ಎನ್ನುವುದು ಕಾಡುತ್ತಲೇ ಇತ್ತು ಅನ್ನುವುದು ಸುಳ್ಳಲ್ಲ.
*
ಕೆಂಪು ಹಸಿರಾಗಿ ಮುಂದಿದ್ದ ವಾಹನಗಳು ಚಲಿಸತೊಡಗಿದಂತೆ ಬಸ್ಸಿನಲ್ಲಿದ್ದವರೆಲ್ಲ ನಿರಾಳತೆಯ ಉಸಿರುಬಿಟ್ಟರು. ಪಾಪ, ಎಲ್ಲರಿಗೂ ಸರಿಯಾದ ಹೊತ್ತಿಗೆ ಆಫೀಸ್ ತಲುಪಿ, ಆ ಹಾಜರಿ ಮಶಿನ್ನಿಗೊಂದು ಬೆರಳೊತ್ತಿಬಿಟ್ಟರೆ ಇಂದಿನ ದಿನ ಬದುಕಿದೆವು, ಇಲ್ಲದೇ ಹೋದರೆ... ಅನ್ನುವ ಒತ್ತಡ. ಬಸ್ ಇನ್ನೇನು ಸಿಗ್ನಲ್ ದಾಟಬೇಕು ಮತ್ತೆ ಕೆಂಪು ದೀಪ ಹೊತ್ತಿತು! ಓಹ್... ಶಿಟ್! ಥತ್ ಇದರ! ಛೇ! ಮುಂತಾದ ದನಿಗಳು ಬಸ್ ತುಂಬಾ ತೇಲತೊಡಗಿದವು.
ಅದ್ವೈತನ ಕೈಯಲ್ಲಿದ್ದ ಮೊಬೈಲ್ ತಬಲಾ ನುಡಿಸತೊಡಗಿತು, ಸ್ಕ್ರೀನ್ ಮೇಲೆ Mother India ಅನ್ನುವ ಅಕ್ಷರಗಳು.
“ ಹಾಂ ಮಾ”
“ಮದ್ಯಾಹ್ನದ ಮಾತ್ರೆ ಮನೇಲೇ ಮರ್ತು ಹೋಗಿದೀಯ. ಅಲ್ಲೇ ಹತ್ರದಲ್ಲಿರೊ ಅಂಗ್ಡೀಲಿ ಕೊಂಡ್ಕೊಂಡು ತೊಗೊಳ್ಳೊ.”
“ ತೊಗೊಳ್ತೀನಿ, ನೀ ಟೆನ್ಶನ್ ಮಾಡ್ಕೊಬೇಡ ಆಯ್ತಾ? ಬಾಯ್.” ಫೋನ್ ಕಟ್ ಮಾಡಿ ಮತ್ತೆ ಕಿಟಕಿಯಾಚೆ ನೋಡಿದ.
ಕೈಯಲ್ಲಿ ಆಟಿಕೆ, ಪೆನ್, ನ್ಯಾಪ್‍ಕಿನ್ ಹಿಡಿದು ವ್ಯಾಪಾರದಲ್ಲಿ ತೊಡಗಿದ್ದ ಪುಟ್ಟಪುಟ್ಟ ಮಕ್ಕಳು ಕಾಣಿಸಿದರು. ಮಗನಿಗೋಸ್ಕರ ಭಿಕ್ಷೆ ಕೇಳುತ್ತಿದ್ದ ಆಕೆ ಹಿಂದೆಲ್ಲೋ ಯಾರ್ಯಾರ ಮುಂದೊ ಕೈಯೊಡ್ಡಿ, ಹಣ ಸಿಗದೆ ಮುಂದೆ ಸರಿಯುತ್ತಿರಬೇಕು ಅನಿಸಿತು. ತನ್ನ ಆಫೀಸಲ್ಲಿ, ಫೇಸ್‍ಬುಕ್‍ನಲ್ಲಿ, ಪರಿಚಿತರೆಲ್ಲರನ್ನು ಕೇಳಿ, ಒಂದಿಷ್ಟು ಹಣ ಒಟ್ಟು ಮಾಡಿ, ಆಕೆಯ ಜೊತೆಗೆ ಆಸ್ಪತ್ರೆಗೆ ಹೋಗಿ, ಆಕೆಯ ಮಗನ ಆಪರೇಶನ್ನಿಗೆ ಹಣ ಕಟ್ಟಿ ಬರಬೇಕು ಅನ್ನುವ ಯೋಚನೆ ಮೊದಲ ಬಾರಿ ಮನಸಿಗೆ ಬಂದು, ಅದು ನಿರ್ಧಾರವಾಗಿ ಗಟ್ಟಿಗೊಳ್ಳುತ್ತಿದ್ದಂತೆಯೇ, ಈ ಏಳೆಂಟು ದಿನಗಳಿಂದ ಎದೆಯಾಳದಲ್ಲಿ ಚಿಟುಗು ಮುಳ್ಳಿನಂತೆ ಮಿಸುಗುತ್ತಿದ್ದ ಅವ್ಯಕ್ತ ನೋವೊಂದರಿಂದ ಬಿಡುಗಡೆಗೊಂಡವನಂತೆ ನಿರಾಳಗೊಂಡ ಅದ್ವೈತ.
ಇವನ ಬಸ್ಸಿನ ಹಿಂದಿನ ಬಸ್ಸಿನ ಹಿಂದೆ ಜನರ ಗುಂಪು ಜಮಾಯಿಸತೊಡಗಿತ್ತು. ಬೈಕ್ ಮೇಲೆ, ಕಾರಲ್ಲಿ, ಬಸ್ಸಲ್ಲಿ ಕುಳಿತವರೆಲ್ಲರೂ ಇಣುಕಿ, ಕತ್ತು ತಿರುಗಿಸಿ, ಜನಸಂದಣಿಯಲ್ಲಿ ಅಲ್ಲಿ ಆಗಿರುವುದೇನಾದರೂ ಕಂಡೀತು ಎಂದು ಕತ್ತು ಬಗ್ಗಿಸಿ ಹಿಂದೆ ನೋಡತೊಡಗಿದರು. ಅದ್ವೈತನೂ ಏನಾಗಿರಬಹುದೆಂದು ಕಿಟಕಿಗೆ ಮೂಗಂಟಿಸಿ ನೋಡಲು ಯತ್ನಿಸಿದನಾದರೂ ಸಾಧ್ಯವಾಗಲಿಲ್ಲ.
- - ಜಯಲಕ್ಷ್ಮೀ ಪಾಟೀಲ್
No comments:
Post a Comment