Thursday, August 18, 2016

ಔದಾರ್ಯ

ಮೀಸೆಯಲುಗಿಸಿ ಮೂಸುತ್ತಿದ್ದವು ನೊಣಗಳು
ಮಿಕ್ಕಿದನ್ನ ವಡೆ ಚೂರು ಪಾಯಸವಂಟಿದ ಪತ್ರೊಳೆ
ಗುಪ್ಪೆ ಗುಪ್ಪೆಗೂ ತಿಪ್ಪೆಯಲಿ ಗುಂಪಾಗಿ ಮುತ್ತಿಗೆ
ಸದ್ದಿಲ್ಲದಂತೆ ಪಾದಗಳೂರಿ ಪಾಲಿಗೆ ಬಂದ ನಾಯಿ
ಗುಂಪಿಗೆ ಗುಂಪೇ ಹೆದರಿ ಹಾರಿ ಗುಂಯಿಗುಟ್ಟಿದವು
ಹೆದರಿಸದೆ ಕಮಕ್ ಕಿಮಕ್ ಅನ್ನದೆ ಜೊತೆಗೂಡಿದ್ದೇ
ನಾಯಿಯ ಔದಾರ್ಯಕೆ ಹಿಗ್ಗಿ ಕೊಂಡಾಡಿ ಬಾಲ
ಸವರಿ ತಲೆ ಮೇಲೇರಿ ಬೆನ್ನ ಸವಾರಿ ಸೂಪರ್ರುರೀ
ದೊಡ್ಡ ಪಾಲು ದೊಡ್ಡ ಬಾಯಿಗೆ ಮಿಕ್ಕಿ ಉಳಿದರೆ ಸಣ್ಣವರಿಗೆ
ವಿಳಂಬಿಸದೆ ಶ್ವಾನಸ್ವಾಮಿಗಳು ಆಹಾರ ಸೇವಿಸಿ ಸಂತೃಪ್ತಿ
ನಿಂತ ನೆಲೆಯ ವೀಕ್ಷಿಸಿ ಹಾಗೇ ಗಿರ್ರನೆ ಸ್ವಪ್ರದಕ್ಷಿಣೆ ರಿಂಗ್ ರಿಂಗ್
ರೋಡಿಗಿಳಿದು ಬಿಜಯಂಗೈದರು ಘನಗಾಂಭಿರ್ಯದಿಂದ
ಮುರುಕಿರಿದ್ದ ನೊಣಗಳು ಎಗರಿ ಬಿದ್ದವು ಶುಷ್ಕ ತಿಪ್ಪೆಯ ಮೇಲೆ

- ಜಯಲಕ್ಷ್ಮೀ ಪಾಟೀಲ್

2 comments:

sunaath said...

ಇದು ಔದಾರ್ಯ!

Jayalaxmi said...

:) ಇವತ್ತಿನ ಕಾಲದ್ದು ಕಾಕಾ. ಪುಣ್ಯಾಕ್ ನಮಗೇನೂ ಮಾಡ್ಲಿಲ್ಲ ಅಷ್ಟೇ ಸಾಕು ಅನ್ನೊ ಮನಸ್ಥಿತಿ ಈ ಕಾಲಮಾನದ್ದು. :)