Monday, February 20, 2017

ವರ್ತಮಾನ ಪುರಾತನ


ಪುರಾತನ ಕಲೆಯಿದು ಕೌದಿ ಹೊಲೆವ ಮಾಟ ಪುರುಸೊತ್ತಿನ ಆಟ

ಸಣ್ಣ ದೊಡ್ಡ ತರಾವರಿ ತುಕಡಿಗಳ ರಾಶಿ ಅಡಗಿಸಿಕೊಂಡ ಗಂಟು

ಬಿಚ್ಚಿ ನೋಡಿದರೆ ಏನೆಲ್ಲ ಉಂಟು ಎಲ್ಲದರ ಜೊತೆಗೂ ನೆನಪಿನ ನಂಟು


ಮುದಿಸೀರೆ ಮದವಳಿದ ಧೋತರ ಜೊತೆಯಾಗಿ ಅಡಿಯ ಪದರಾಗಿ

ಹರೆಯದ ಸೀರೆಯದು ಮೇಲ್ಪದರು ನಡುವೆ ಸಿಕ್ಕಿಕೊಂಡವೆಲ್ಲ ಹರುಕು

ಮುರುಕು ಮುಲುಕುವ ಕಾಣದ ಕಾಣಬಾರದ ಮೆದುವಾದ ಹತ್ತಿ ಬಟ್ಟೆ


ಪುಟ್ಟ ಲಂಗದ ತುಕುಡಿ ಪುಗ್ಗಾ ಪೋಲಕದ ತುಂಡುಗಳು ಕೌದಿಯಲಿ ಅಲ್ಲಲ್ಲಿ

ಹಾರ್ಯಾರಿ ಹೂವಾಗಿ ಚಿಟ್ಟ್ಯಾಗಿ ಕಲರ್‍ಫುಲ್ಲಾಗಿ ಕುಳಿತ ಚೆಂದದ ಭಂಗಿ

ಪೋರನ ಅಂಗಿ ಚೊಣ್ಣ ಚಲ್ಲಣಗಳು ಇದೀಗ ಆನೆ ಒಂಟೆಗಳ ಮೆರವಣಿಗೆಯ ಸಾಲು


ಲಂಗ ಪೋಲಕಗಳೇ ಹೂ ಚಿಟ್ಟೆಗಳ್ಯಾಕೆ ಅಂಗಿ ಚೊಣ್ಣಗಳೇಕಿಲ್ಲ

ಹಾಗಂತ ನೀವು ಕೇಳುವ ಹಾಗಿಲ್ಲ ಹೂ ಚಿಟ್ಟೆಗಳ

ನಾಜೂಕು ಆನೆ ಒಂಟೆಗಳಿಗಿಲ್ಲ ಎಂದರೆ ಸಾಕಲ್ಲ!


ಹಚ್ಚಹಸರಿನ ಹಚ್ಚಡದ ಎಂಟೂ ದಿಕ್ಕಿಗೂ ಪ್ರತಿಫಲನ ತ್ರಿಕೋನ

ಹುಡುಗಿಯರ ಪುಗಡಿಯಾಟ ಹುಡುಗರ ಪಗಡೆಯಾಟ ನಡುನಡುವೆ

ದಾರದ ಸಾಲು ಎಳೆಗಳು ಅವು ನಮ್ಮೆದುರಿನ ಲಕ್ಷ್ಮಣ ರೇಖೆಗಳು


ಜೋಕೆ, ದಾಟುವ ಭರದಲ್ಲಿ ಉಗುರ ಸೀಳಿ ಗೆ ಸಿಲುಕಿ ದಾರ

ನರ ನಾಡಿಗಳಿಗೆ ವ್ಯಾಪಿಸೀತು ನೋವ ಧಾರ ಬದುಕಿಡೀ

ಅದರ ನೆನಪಿನ ಕೊರಗಿನ ಮರುಗಿನ ರಾಗ ಏಕತಾರ


ಗೆರೆ ದಾಟುವ ಆಟಕ್ಕೆ ಕುಂಟಾಬಿಲ್ಲೆಯೆಂದು ಹೆಸರು

ಕನಸ ಬಿಲ್ಲೆಯ ಕಣ್ಣಿಗೊತ್ತಿ ಮುತ್ತಿಕ್ಕಿ ಗೆರೆಗೆ ತಾಗದಂತೆ

ಹುಸಿ ಹೋಗದಂತೆ ಚಿಮ್ಮಿ ಎಸೆದರೆ ಬೇಕಾದ ಚೌಕದಲ್ಲಿ ಅದು ಸೆರೆ


ಜೊತೆಗಿದ್ದುದು ದೂರವಾಗಿ ಒಂಟಿ ಕಾಲಿನ ಸರ್ಕಸ್ಸು ಗುರಿ ಸೇರಲು

ಗೆರೆ ದಾಟುತ್ತಲೇ ಅಳಿಯದಂತೆ ನೋಡಿಕೊಳ್ಳುವ ಬಿಸಿನೆಸ್ಸು

ಮನೋವ್ಯಾಪಾರವದು ಬಲು ಗೌಪ್ಯ ಲೋಕಕೆ ಲಾಭ ನಷ್ಟಗಳಷ್ಟೆ ಸತ್ಯ


ಕೆಂಪು ಹಸಿರು ಬಾವುಟದ ಏರು ಯೌವ್ವನ ತೇರು ಕೇಂದ್ರ ಬಿಂದು

ಸುತ್ತಲೂ ಜೋಡಿ ಇಜ್ಜೋಡಿಗಳ ಮೇಳ ಬಯಲಾಟದ ಕುಣಿತ

ಧಿಥೈ ಧಿಮಿ ತಕಿಟ ಧಿಥೈ ಧಿಮಿ ತಕಿಟ ಧಿಥೈ ಧಿಮಿ ತಕಿಟ ಥೈ


ತಾಳ ಹಿಡಿದ ಕೈಗೆ ಬೆರಳುಗಳು ನೂರಾರು ಅಬ್ಬರದ ಜೋರು

ಸಂಪ್ರದಾಯದ ಬೇರು ಸುತ್ತುತ್ತ ಬದುವ ಬಿತ್ತುತ್ತ ಬೆಳೆಯುತಿದೆ ವೃತ್ತ

ಅಲ್ಲಲ್ಲಿ ಅಲ್ಲಲ್ಲಿ ಎದೆಯ ಹಂಬಲದ ದಿಗಿಣಕೆ ತಾಳೆಯಾಗದ ತಾಳ


ಕುಣಿತದ ಬಿರುಸಿಗೆ ಸಿಂಗಾರಗಳೆಲ್ಲ ಕಳಚಿ ಮನಸು ಬಿಳಚಿ ಎದ್ದೂಬಿದ್ದೂ

ಹೆಕ್ಕಿ ಆಯ್ದು ಮತ್ತೆ ಮತ್ತೆ ಸಿಂಗಾರಗೊಂಡು ಕಾಲನ ಹಿಡಿದಿಡುವ ಹಂಬಲ

ಕುಣಿವ ಕಾಲ್ಗಳಿಗೂ ದಣಿವ ಕಾಲ್ಗಳಿಗೂ ಆಸರೆ ಒಂದೇ ನೆಲ ಜಲ


ಕವುಚಿ ಮಲಗಿದ ಜೀವಕೆ ನೆನಪುಗಳ ರಾಶಿ ಕಣ್ಣ ರೆಪ್ಪೆಯಡಿ ಹಾಕಿ

ಕೌದಿ ನೇಯುತಿದೆ ನಿದ್ದೆ ನಲಿವಿನ ಜೊತೆಗೆ ನೋವೂ ಕುತ್ತಿ

ಚಿತ್ತಾರವಾದುದ ಕಂಡು ಮನಸೆಲ್ಲ ಒದ್ದೆಮುದ್ದೆ



-
ಜಯಲಕ್ಷ್ಮೀ ಪಾಟೀಲ್ (24 Nov 2016)


4 comments:

Ahalya said...

ಆಹಾ...
ಎಷ್ಟು ಹುಡುಕಿದರೂ
ಹೊಲಿಗೆಗಳು ಕಾಣಸಿಗವಲ್ಲ
ಅದ್ಯಾವ ಸೂಜಿಯೋ ಎಲ್ಲಿಯ ದಾರವೋ
ಕಣ್ಣ ಮುಂದೆ ಕುಣಿಕುಣಿವ ನುಡಿನವಿಲುಗಳು
ಮನದಂಗಳದ ತುಂಬಾ ಹೆಜ್ಜೆಗೆಜ್ಜೆಗಳ ಚಿತ್ತಾರ!


Loved it.
- ಅಹಲ್ಯಾ

Jayalaxmi said...

ಧನ್ಯೋಸ್ಮಿ! :)

sunaath said...

ಒಳ್ಳೆಯ ಕವನವನ್ನು ಓದಿದಾಗ ಮನಸ್ಸು ಮುದಗೊಳ್ಳುತ್ತದೆ. ನೀವು ಹೆಣೆದ ಕೌದಿ ಮೆಚ್ಚಿಗೆಯಾಯಿತು. ಕವನದ rhyme,ಅಲ್ಲಲ್ಲಿ ಬರುವ ಶ್ಲೇಷೆ ಹಾಗು ಬದುಕಿನ ಒಳನೋಟ ಪ್ರಶಂಸನೀಯ.

Jayalaxmi said...

ಧನ್ಯೋಸ್ಮಿ ಕಾಕಾರ! :)