Sunday, September 1, 2013

ಮಂಜುಳಾ ಬಿರಾದರ್ ಎಂಬ ಹೆಸರಿನ ಅದಮ್ಯ ಚೇತನಕ್ಕಿಂದು ಅರವತ್ತರ ವಸಂತ.

"ಮಂಜು ಚಿಕ್ಕಮ್ಮ, ಕಲ್ಲುಮುಳ್ಳುಗಳ ಬಯಲಲ್ಲಿ ನಡೆದು, ದಾರಿ ಮಾಡಿ, ಈಗ ನಾವೆಲ್ಲ ಅನಾಯಸ ನಡೆವಂತೆ ಮಾಡಿದ ದಿಟ್ಟ ಹೆಣ್ಣು ನೀನು. ನಿನ್ನ ನಿಟ್ಟಿನಲ್ಲಿ ನಾವೆಲ್ಲ ನಾಲ್ಕು ಹೆಜ್ಜೆ ನಡೆದರೂ ಅದೆಷ್ಟೋ ಸಾರ್ಥಕಭಾವ ನಮ್ಮಲ್ಲಿ! ಅಷ್ಟಾದರೂ ನಾವೆಲ್ಲ ನಿನ್ನನನುಸರಿಸುವಂತಾಗಲಿ ಬದುಕ ದಾರಿಯಲಿ. ನಿನ್ನಂಥವರ ಸಂತತಿ ಹೆಚ್ಚಾಗಲಿ ನಮ್ಮ ಮನೆತನದಲ್ಲಿ. ನೋಡು, ನಿನಗೆ ಶುಭ ಹಾರೈಸಲೆಂದು ಬಂದವಳು ನಮ್ಮ ಸ್ವಾರ್ಥದ ಕುರಿತೇ ಮಾತಾಡುತ್ತಿರುವೆ ನಾನು!! ಹುಟ್ಟುಹಬ್ಬದ ಶುಭಾಶಯಗಳು ಚಿಕ್ಕಮ್ಮ. ನಿನ್ನ ಇಷ್ಟು ವರುಷಗಳ ದಣಿವು ಮುಂದಿನ ವರ್ಷಗಳ ಉತ್ಸಾಹವಾಗಲಿ. :) "
*
*
ಆರು ತಿಂಗಳ ಹಿಂದೆ ನನ್ನ ಒಬ್ಬ ಅಮ್ಮನ (ಪದ್ಮಾ ಆಂಟಿ) 60ನೇಯ ಹುಟ್ಟುಹಬ್ಬವಾಗಿತ್ತು, ಇಂದು ನನ್ನ ಇನ್ನೊಬ್ಬ ಅಮ್ಮ, ಮಂಜು ಚಿಕ್ಕಮ್ಮನ ನ 60ನೇಯ ಹುಟ್ಟುಹಬ್ಬ. :)
*
"ನನ್ನನ್ನು ಹೆತ್ತವಳು ಅವ್ವ ಸರೋಜಿನಿಯಾದರೂ, ನಾನು ಪುಣ್ಯವಂತಳಾದ್ದರಿಂದ ನನ್ನ ಉಡಿ ಇನ್ನೂ ಮೂರು ಜನ ಅಮ್ಮಂದಿರ ಪ್ರೀತಿ ವಾತ್ಸಲ್ಯಗಳಿಂದ ತುಂಬಿದೆ. ಅವರು ಮಂಜು ಚಿಕ್ಕಮ್ಮ, ಗಾಯತ್ರಿ ಆಂಟಿ ಮತ್ತು ಪದ್ಮಾ ಆಂಟಿ."
*
ಮಂಜು ಚಿಕ್ಕಮ್ಮ (ಮಂಜುಳಾ ಬಿರಾದರ), ಅವ್ವನ ಮೊದಲ ತಂಗಿ, ಅವ್ವನಿಗಿಂತ ಐದು ವರ್ಷಕ್ಕೆ ಚಿಕ್ಕವರು. ನನ್ನನ್ನು ನೋಡಿದ ನಮ್ಮ ಪರಿಚಯದ ಜನ, ನಾನು ಸರೋಜಿನಿಯ ಮಗಳೆಂದು ಗೊತ್ತಿದ್ದರೂ ಹೋಲಿಕೆಯಿಂದಾಗಿ ಕನ್ಫೂಸ್ ಮಾಡಿಕೊಂಡು, ‘ನೀನು ಮಂಜುನ ಮಗಳಲ್ಲಾ? ಸರೂನ ಮಗಳು ಅನ್ಕೊಂಡಿದ್ದೆ’ ಎಂದವರು ನಂತರ ನಾನೂ ಸರೂನ ಹೊಟ್ಟೆಲೇ ಹುಟ್ಟಿದ ಮಂಜುನ ಮಗಳು ಎಂದು ತಮ್ಮ ಸಂದೇಹವನ್ನು ಪರಿಹರಿಸಿಕೊಂಡು ನಗುತ್ತಾರೆ. ನನ್ನ ಮಂಜುಚಿಕ್ಕಮ್ಮ ನನ್ನನ್ನು ತಮ್ಮ ಅಕ್ಕನ ಮಗಳು ಎಂದು ಯಾರಿಗಾದರೂ ಪರಿಚಯಿಸಿದ್ದು ನೆನಪೇ ಇಲ್ಲ ನನಗೆ. ನನ್ನ ಮಗಳು ಎಂದೇ ಎಲ್ಲರಿಗೂ ಪರಿಚಯಿಸುವಷ್ಟು ಮಮತೆ ನನ್ನ ಮೇಲೆ. :)
*
  ಮಂಜು ಚಿಕ್ಕಮ್ಮನ ಸಾಧನೆ ನಮ್ಮವರೆಲ್ಲರೂ ಹೆಮ್ಮೆ ಪಡುವಂಥದ್ದು. ಕೇವಲ ಗೃಹಿಣಿಯಾಗಿ ಮಕ್ಕಳನ್ನು ನೋಡಿಕೊಳ್ಳುವುದು ನನ್ನ ಚಿಕ್ಕಮ್ಮನಂಥ ಅದಮ್ಯ ಚೇತನಗಳಿಗೆ ಸಾಧ್ಯವಿಲ್ಲದ ಮಾತು. ಹೀಗಾಗೇ ಉಂಡುಟ್ಟು ಆರಾಮಾಗಿರಲು ತೊಂದರೆ ಇಲ್ಲದಿದ್ದಾಗ್ಯೂ, ಐದು ಪುಟ್ಟಮಕ್ಕಳ ತಾಯಿ, ನನ್ನ ಈ ಚಿಕ್ಕಮ್ಮ ಮನೆಯಲ್ಲೇ Small scale industry ಒಂದು ಭಾಗವಾದ files ತಯಾರಿಸುವ ಉದ್ಯೋಗ ಶುರು ಮಾಡಿಕೊಂಡರು. ಜಿಲ್ಲೆ ಮತ್ತು ತಾಲೂಕುಗಳ ಪ್ರತೀ ಆಫೀಸಿಗೂ ಹೋಗಿ, files orders ತೆಗೆದುಕೊಂಡು ಬಂದು ಮನೆಯಲ್ಲಿ ಅಗತ್ಯಕ್ಕೆ ತಕ್ಕಂಥ files ತಯಾರಿಸಿ ಕೊಡುತ್ತಿದ್ದರು. ಮುಂದೆ ವರ್ಷಗಳು ಕಳೆದ ಮೇಲೆ ಈ ಉದ್ಯೋಗದ ಇತಿಮಿತಿ ಗೊತ್ತಾಗುತ್ತಿದ್ದಂತೆ ನನ್ನ ಚಿಕ್ಕಮ್ಮನ ಚಡಪಡಿಕೆ ಹೆಚ್ಚಾಗಿ, ಸರಿಯಾದ ದಾರಿ ಕಂಡುಕೊಂಡಿತು! ಅದು ರೊಟ್ಟಿ ಅಂಗಡಿ! ಹೌದು ಈಗ ರೊಟ್ಟಿ ಅಂಗಡಿ ಅಂದರೆ ಯಾರಿಗೂ ಅಚ್ಚರಿಯಾಗದಿರಬಹುದು. ಆದರೆ ಅದ್ಭುತವಾಗಿ ಅಡುಗೆ ಮಾಡುವ ನನ್ನ ಚಿಕ್ಕಮ್ಮ ಆಗ ಬಿಜಾಪುರದಲ್ಲಿ ರೊಟ್ಟಿ ಅಂಗಡಿ ತೆರೆದಾಗ, ‘ಅದೇನು ಹೊಳಿ ದಂಡೀಗೆ ಕುಂತು ನೀರು ಮಾರೋ ಹುಡುಗಾಟ!!’ ಎಂದವರೇ ಹೆಚ್ಚು. ಬಿಜಾಪುರ/ಉತ್ತರ ಕರ್ನಾಟಕದ ಮುಖ್ಯ ಆಹಾರವಾದ, ‘ಮನೆ ಮನೆಯಲೂ ನಿತ್ಯವೂ ಮಾಡುವ ರೊಟ್ಟಿಯನ್ನೇ ಮಾರುವುದೆಂದರೆ ಕೊಳ್ಳುವವರ್ಯಾರು?! ಇವಳಿಗೆಲ್ಲೋ ಹುಚ್ಚು’ ಎಂದು ಕುಹಕವಾಡಿದ ಜನರಿಗೇ ಈಗ, ‘ಜ್ಯೋತಿ ಗೃಹ ಉದ್ಯೋಗ’ದ ರೊಟ್ಟಿ, ಸೇಂಗಾದ ಹೋಳಿಗೆ, ಚಟ್ನಿಪುಡಿ, ಉಪ್ಪಿನಕಾಯಿಗಳೇ ಬೇಕು. ಮೊದಮೊದಲು ತಾವೊಬ್ಬರೇ ಇವೆಲ್ಲವನ್ನೂ ತಯಾರಿಸುತಿದ್ದ ನನ್ನ ಚಿಕ್ಕಮ್ಮ ಬೇಡಿಕೆ ಹೆಚ್ಚಾದಂತೆ ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳ ತೊಡಗಿದರು. ಮಶಿನ್ನುಗಳನ್ನು ಕೊಂಡರು. ಮಾರುಕಟ್ಟೆಯಲ್ಲಿ ದೊರೆಯದ ಕೆಲವು ಮಶಿನ್ನುಗಳನ್ನು ತಾವೇ ಡಿಸೈನ್ ಮಾಡಿ ಮಾಡಿಸಿಕೊಂಡರು. ಈಗ ಎಪ್ಪತ್ತು ಜನ ಮಹಿಳೆಯರು ನನ್ನ ಚಿಕ್ಕಮ್ಮನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ‘ಜ್ಯೋತಿ ಗೃಹ ಉದ್ಯೋಗ’ ಅಂಗಡಿಗಳ ಸಂಖ್ಯೆ ಆರಕ್ಕೇರಿದೆ.
`Karnataka state co-operative Women Federation' ನ ನಿರ್ದೇಶಕರಲ್ಲಿ ಒಬ್ಬರಾಗಿದ್ದವರು ನನ್ನ ಚಿಕ್ಕಮ್ಮ.
ಗುಡ್ಡಾಪುರದ ದಾನಮ್ಮದೇವಿಯ ಭಕ್ತೆಯಾದ ಮಂಜುಳಾ ಬಿರಾದಾರ್ ಹೆಸರಿನ ನನ್ನ ಈ ಚಿಕ್ಕಮ್ಮ ದಾನಮ್ಮದೇವಿಯ ಹೆಸರಿನಲ್ಲಿ ಪ್ರತೀವರ್ಷ ಶ್ರಾವಣದಲ್ಲಿ ಮಹಿಳೆಯರನ್ನು ಕರೆದು ಉಡಿತುಂಬಿ ಊಟ ಮಾಡಿಸುತ್ತಾರೆ. (ಉತ್ತರ ಕರ್ನಾಟಕದಲ್ಲಿ ಎಲ್ಲ ಮನೆಗಳಲ್ಲೂ ಶ್ರಾವಣ ಮಾಸದಲ್ಲಿ ಕೊನೆಯ ಶುಕ್ರವಾರ ಐದು ಜನ ಮುತೈದೆಯರನ್ನುಣ್ಣಿಸುವುದು [ಸುಹಾಸಿನಿಯರನ್ನು ಕರೆದು, ಅವರ ಪಾದಪೂಜೆ ಮಾಡಿ, ಉಡಿ ತುಂಬಿ ಊಟಕ್ಕೆ ಹಾಕುವುದು] ಪರಿಪಾಠ)
5, 11, 21, 51, 101,501, 1001 ಹೀಗೆ ವರುಷ ವರುಷವೂ ಉಡಿ ತುಂಬಿಸಿಕೊಂಡು, ಉಂಡು ಹಾರೈಸಲು ಬರುವವರ ಸಂಖ್ಯೆ ಹೆಚ್ಚಾಗುತ್ತಾ ಆಗುತ್ತಾ ಈ ವರ್ಷ, ಇಂದು 4500 ಜನ ಸೇರಬಹುದು ಎನ್ನುವ ಅಂದಾಜಿದೆಯಂತೆ! ಅದಕ್ಕೂ ಹೆಚ್ಚಾಗಬಹುದು ಎನ್ನುತ್ತಿದ್ದರು ಚಿಕ್ಕಮ್ಮ. ಕೊನೆಯ ಶುಕ್ರವಾರ  ಊರಿನ ಎಲ್ಲರ ಮನೆಯಲ್ಲೂ ಹಬ್ಬ ಅನ್ನುವ ಕಾರಣಕ್ಕೆ ಈ ಕಾರ್ಯಕ್ರಮವನ್ನು ಮಂಜು ಚಿಕ್ಕಮ್ಮ ಭಾನುವಾರ ಹಮ್ಮಿಕೊಳ್ಳುತ್ತಾರೆ. ಜಾತಿ, ಅಂತಸ್ತಿನ ಹಂಗಿಲ್ಲ ಅಲ್ಲಿ. ಎಲ್ಲರಿಗೂ ಆದರದ ಆತಿಥ್ಯ.
 ಇಂದು ಅಲ್ಲಿರಬೇಕಿತ್ತು ನಾನು. ಆಗಲಿಲ್ಲ... ಇಲ್ಲಿಂದಲೇ ಶುಭ ಹಾರೈಸುತ್ತಿರುವೆ. :)

8 comments:

ಮನಸು said...

ನಿಜಕ್ಕೂ ಖುಷಿ ಆಯ್ತು ಅಕ್ಕಾ... ಇವರ ಬಗ್ಗೆ ಕೇಳಿ.. ಆ ಕಾಲದಲ್ಲೇ ಇವರು ಧೃಡಸಂಕಲ್ಪದಿಂದ ಬಿಸಿನೆಸ್ ಮಾಡಿದ್ದು ಗ್ರೇಟ್... ಹುಟ್ಟು ಹಬ್ಬದ ಶುಭಾಶಯ ತಿಳಿಸಿ..

Jayalaxmi said...

ಖಂಡಿತ ಸುಗುಣಾ. :) ನನ್ನಿ. :)

sunaath said...

ನಿಮ್ಮ ಚಿಕ್ಕಮ್ಮನವರಿಗೆ ನೂರು ಪ್ರಣಾಮಗಳು. ಅವರ ಪ್ರೀತಿಯನ್ನು ಪಡೆದ ನೀವು ಧನ್ಯರು.

ದಿನಕರ ಮೊಗೇರ said...

ಇವರು ನಿಮ್ಮದೆ ತಾಯಿ ಹಾಗೆ ಇದ್ದಾರೆ... ನಿಜವಾದ ಸುಭಾಶಯ ಸಲ್ಲಿಸಿದ್ದೀರಾ...

Jayalaxmi said...

ಹೌದು ಕಾಕಾ, ಧನ್ಯವಾದಗಳು. :)

Jayalaxmi said...

ಧನ್ಯವಾದ ದಿನಕರ್. :)

Badarinath Palavalli said...

ಮಾಜುಳಾರವರು ನನಗೆ ಆದರ್ಶವಾಗಲಿ.

Jayalaxmi said...

ಬದ್ರಿ, ನನಗೂ ಅವರು ಆದರ್ಶ. :) ಪ್ರತಿಕ್ರಿಯೆಗೆ ಧನ್ಯವಾದ.