Friday, December 12, 2014

ಅವನ ಅವಳು

ಅವಳನ್ನು ಒಳಮನೆಯಿಂದ ನಡುಮನೆಗೆ
ನಡುಮನೆಯಿಂದ ಪಡಸಾಲೆಗೆ,
ಒಳಾಂಗಣಕೆ, ಅಲ್ಲಿಂದ ಬಾಗಿಲಿಗೆ 
ಬಾಗಿಲಿನಾಚೆಗೆ ತಂದು ನಿಲ್ಲಿಸಿದವನು 
ಒಳಮನೆಯಡೆ ಮಾತನಾಡುತ್ತಿದ್ದ 
ಅವಳೆಡೆಗೇ ಮುಖ ಮಾಡಿ 
ಅವನ ಮಾತಿಗೆ ಒಳಮನೆಯಿಂದ 
ಯಾರದೋ ನಗು ಮಾತು 
ಹುಸಿಮುನಿಸು... ನೆನಪಾದಾಗೊಮ್ಮೆ 
ಅವಳನ್ನು ನೋಡಿ ನಕ್ಕರೆ ಅವನು 
ಅವಳ ಹೃದಯವರಳಿ ಮಾತು 
ಘಮಿಸುವ ಮುಂಚೆಯೇ ಮತ್ತೆ 
ಅವನದು ಒಳಮನೆಯೊಂದಿಗೆ ಮಾತು...
ಈಗ ಮತ್ತಿನ್ಯಾರದೋ ದನಿ...
ಬಾಗಿಲಾಚೆ ನಿಂತು ಕಾದವಳು 
ನಿಲ್ಲಲಾಗದೆ ಬಳಲಿ, ಕೂರಲು ಆಸರೆಗೆ 
ಬಾಗಿಲ ತೋಳನ್ನು ಮುಟ್ಟಿದರೂ 
ಸಾಕು ರೇಗುತಿದ್ದ ಅವನು
ಅಲ್ಲಿಂದ ಕದಲಲೂ ಬಿಡಲಿಲ್ಲ ಕನಲುತಿದ್ದ 
ಅವನನ್ನು ಬಿಟ್ಟಿರಲಾಗದ 
ಅವಳದು ಬಾಗಿಲಾಚೆಗೆ ಒಂಟಿ ಕಾಲಿನ ತಪ್ಪಸ್ಸು 
ಮತ್ತೆ ಒಳಮನೆಯಲಿ ಮಾತು, 
ನಗೆ, ಮುನಿಸು... 
ಅವನ ಮುಖ ಮಾತ್ರ ಅವಳೆಡೇಗೇ! 
ನಿಂತೂ ನಿಂತೂ ಬಳಲಿ 
ಬಸವಳಿದ ಅವಳು ಕೊನೆಗೆ ಸೋತು 
ಕಾಲೆಳೆಯುತ್ತಾ ನಡೆಯತೊಡಗಿದಳು 
ಉತ್ತರ ದಿಕ್ಕಿಗೆ ಮುಖ ಮಾಡಿ... 
ದೂರದಿಂದ ಇವರನ್ನು ಗಮನಿಸುತ್ತಿದ್ದ 
ಜಗತ್ತು ಅವಳನ್ನು ದೂರತೊಡಗಿತ್ತು.
    
                                   -ಜಯಲಕ್ಷ್ಮೀ ಪಾಟೀಲ್ (೦೨-೦೨-೨೦೧೩)

2 comments:

Badarinath Palavalli said...

ಬಾಗಿಲಾಚೆ ನಿಂತು ಕಾದವಳ ಅಂರರಂಗವನ್ನು ತುಂಬ ಮಾರ್ಮಿಕವಾಗಿ ತೆರೆದಿಟ್ಟಿದ್ದೀರ.
ಜಗತ್ತು ಅವಳನ್ನು ದೂರತೊಡಗಿತ್ತು - ಎಂಬುದೆಂತಹ ವಿಪರ್ಯಾಸವಲ್ಲವೇ?

shared at:
https://www.facebook.com/groups/191375717613653?view=permalink&id=435285689889320

Jayalaxmi said...

ಹೌದು ಬದ್ರಿ...