Monday, March 6, 2017

ಹಣತೆ

ಹೊತ್ತೆನವ್ವ ಹಣತೆಯೊಂದ ಕಾರಿರುಳ ಸೆರಗಿನಲಿ
ಬೆಳಕ ಮೀಯಿಸುವೆನೆನುತ ಬಂದ ಸೂರ್ಯ ಮಿಂದು ಹೋದನವ್ವ
ಹಣತೆಯೆಂಬ ಸದರ ಅವಗೆ ತೊರೆದು ಹೋದನವ್ವ ನನ್ನ
ಮಡಿಲು ತುಂಬಿತವ್ವ!


ಚಂದ್ರ ತಾರೆಯರ ನಗರ ತೊರೆದು ಸೂರ್ಯನಗರಿಗೆ ಬಂದು
ಸರ್ವರ ಸಾಕ್ಷಿಯಲಿ ಹಣತೆ ಹೆತ್ತೆನವ್ವ, ಸೂರ್ಯಮರಿಯ ಹೆತ್ತೆನವ್ವ!
ಎಣ್ಣೆಯಿಲ್ಲ ನೀರಿಲ್ಲ ಹಸುಗಂದನ ನೆತ್ತಿಯಲಿ
ಉರಿಸಿ ಉಸಿರ ಮೈ ನೆಣವ ಎಣ್ಣೆಯಾಗಿಸಿದೆನವ್ವ


ಅಟ್ಟಿದನವ್ವ ಸೂರ್ಯ ಬಂದು ಉಟ್ಟ ದಟ್ಟಿಯ ಸೆಳೆದು
ಹೊರಗೆ ಅಟ್ಟಿದರವ್ವ ಜನರು ದೂರವಿಟ್ಟರವ್ವ
ತಮವ ಕಳೆದನೆಂದು ಹೊಗಳಿ ಅಟ್ಟಕ್ಕೇರಿಸಿದರು ರವಿಯ
ಒಡಲ ಕಂದನೊಡನೆ ನಾನು ಮೂಲೆ ಸೇರಿದೆನವ್ವ ಇತ್ತ ಮೂಲೆ ಸೇರಿದೆನವ್ವ!


- ಜಯಲಕ್ಷ್ಮೀ ಪಾಟೀಲ್.

Friday, March 3, 2017

ಹೇಳಿ...

ನಿಮ್ಮನೆಯ ಒಲೆಯಲ್ಲಿ ಬೆಕ್ಕು ಮಲಗಿದ್ದು
ನನ್ನಿಂದ ಎನ್ನುವುದಾದರೆ ಹೇಳಿ
ನಿಮ್ಮೋಣಿಯ ನಾಯಿ ಉಪವಾಸ ಸತ್ತಿದ್ದು
ನನ್ನಿಂದ ಎನ್ನುವುದಾದರೆ ಹೇಳಿ

ನಿಮ್ಮ ಪ್ರತಿಭೆ ಪಾಂಡಿತ್ಯ ವಿದ್ವತ್ತನ್ನು ಕಸಿದು ಮೆರೆದು
ಪದಕಗಳ ಬಾಚಿದವಳು ನಾನಾದರೆ ಹೇಳಿ
ನಿಮ್ಮ ಕಷ್ಟದ ಬೆವರಿಗೆ ನನ್ನ ಹೆಸರ ಫಲಕವನಂಟಿಸಿ
ಸುಖವನ್ನನುಭವಿಸುತ್ತಿರುವವಳು ನಾನಾದರೆ ಹೇಳಿ

ನೀವು ಉಸಿರಾಡುವ ಗಾಳಿ ಕಲುಷಿತಗೊಂಡಿದ್ದು
ನನ್ನಿಂದ ಎನ್ನುವುದಾದರೆ ಹೇಳಿ
ನೀವು ಕುಡಿಯುವ ನೀರು ಕೊಚ್ಚೆಯಾಗಿದ್ದು
ನನ್ನಿಂದ ಎನ್ನುವುದಾದರೆ ಹೇಳಿ

ದೇಶ ಒಂದು ಜಾತಿ ಎರಡು ಎಂಬ ಬೇಧ
ಬಗೆದಿದ್ದವಳು ನಾನಾದರೆ ಹೇಳಿ
ತಾಯಿ ಉಣಿಸಿದ ಹಾಲನು ವಿಷವಾಗಿಸಿಕೊಂಡು
ನಿಮ್ಮನ್ನು ಕೊಂದವಳು ನಾನಾದರೆ ಹೇಳಿ

ನಿಮ್ಮ ಕೊಂಕಿನ ಕೊಕ್ಕೆಗೆ ಸಿಗಿಬೀಳುತ್ತೇನೆ
ನಿಮ್ಮ ನೋಟದಲುಗಿಗೆ ನಲಗುತ್ತೇನೆ
ನಿಮ್ಮ ಹಿತ್ತಾಳೆ ಕಿವಿಯ ಲೋಲಾಕಾಗುತ್ತೇನೆ
ನಿಮ್ಮ ದ್ವೇಷದ ಗಾಣಕ್ಕೆ ಕೊರಳೊಡ್ಡುತ್ತೇನೆ

ನಿಮ್ಮ ಕಲ್ಪನೆಗಳಿಗೆ ಹೊಣೆ ನಾನಲ್ಲ
ನಿಮ್ಮ ಹಿತ್ತಾಳೆ ಕಿವಿ ಸದ್ದೂ ನಾನಲ್ಲ
ನಿಮ್ಮ ನೋಟದ ಮಿತಿಯೂ ನಾನಲ್ಲ
ನೀವಂದುಕೊಂಡಂತೆ ನಾನಿರಬೇಕಿಲ್ಲ

- ಜಯಲಕ್ಷ್ಮೀ ಪಾಟೀಲ್

(25 Feb 2016)

Monday, February 20, 2017

ವರ್ತಮಾನ ಪುರಾತನ


ಪುರಾತನ ಕಲೆಯಿದು ಕೌದಿ ಹೊಲೆವ ಮಾಟ ಪುರುಸೊತ್ತಿನ ಆಟ

ಸಣ್ಣ ದೊಡ್ಡ ತರಾವರಿ ತುಕಡಿಗಳ ರಾಶಿ ಅಡಗಿಸಿಕೊಂಡ ಗಂಟು

ಬಿಚ್ಚಿ ನೋಡಿದರೆ ಏನೆಲ್ಲ ಉಂಟು ಎಲ್ಲದರ ಜೊತೆಗೂ ನೆನಪಿನ ನಂಟು


ಮುದಿಸೀರೆ ಮದವಳಿದ ಧೋತರ ಜೊತೆಯಾಗಿ ಅಡಿಯ ಪದರಾಗಿ

ಹರೆಯದ ಸೀರೆಯದು ಮೇಲ್ಪದರು ನಡುವೆ ಸಿಕ್ಕಿಕೊಂಡವೆಲ್ಲ ಹರುಕು

ಮುರುಕು ಮುಲುಕುವ ಕಾಣದ ಕಾಣಬಾರದ ಮೆದುವಾದ ಹತ್ತಿ ಬಟ್ಟೆ


ಪುಟ್ಟ ಲಂಗದ ತುಕುಡಿ ಪುಗ್ಗಾ ಪೋಲಕದ ತುಂಡುಗಳು ಕೌದಿಯಲಿ ಅಲ್ಲಲ್ಲಿ

ಹಾರ್ಯಾರಿ ಹೂವಾಗಿ ಚಿಟ್ಟ್ಯಾಗಿ ಕಲರ್‍ಫುಲ್ಲಾಗಿ ಕುಳಿತ ಚೆಂದದ ಭಂಗಿ

ಪೋರನ ಅಂಗಿ ಚೊಣ್ಣ ಚಲ್ಲಣಗಳು ಇದೀಗ ಆನೆ ಒಂಟೆಗಳ ಮೆರವಣಿಗೆಯ ಸಾಲು


ಲಂಗ ಪೋಲಕಗಳೇ ಹೂ ಚಿಟ್ಟೆಗಳ್ಯಾಕೆ ಅಂಗಿ ಚೊಣ್ಣಗಳೇಕಿಲ್ಲ

ಹಾಗಂತ ನೀವು ಕೇಳುವ ಹಾಗಿಲ್ಲ ಹೂ ಚಿಟ್ಟೆಗಳ

ನಾಜೂಕು ಆನೆ ಒಂಟೆಗಳಿಗಿಲ್ಲ ಎಂದರೆ ಸಾಕಲ್ಲ!


ಹಚ್ಚಹಸರಿನ ಹಚ್ಚಡದ ಎಂಟೂ ದಿಕ್ಕಿಗೂ ಪ್ರತಿಫಲನ ತ್ರಿಕೋನ

ಹುಡುಗಿಯರ ಪುಗಡಿಯಾಟ ಹುಡುಗರ ಪಗಡೆಯಾಟ ನಡುನಡುವೆ

ದಾರದ ಸಾಲು ಎಳೆಗಳು ಅವು ನಮ್ಮೆದುರಿನ ಲಕ್ಷ್ಮಣ ರೇಖೆಗಳು


ಜೋಕೆ, ದಾಟುವ ಭರದಲ್ಲಿ ಉಗುರ ಸೀಳಿ ಗೆ ಸಿಲುಕಿ ದಾರ

ನರ ನಾಡಿಗಳಿಗೆ ವ್ಯಾಪಿಸೀತು ನೋವ ಧಾರ ಬದುಕಿಡೀ

ಅದರ ನೆನಪಿನ ಕೊರಗಿನ ಮರುಗಿನ ರಾಗ ಏಕತಾರ


ಗೆರೆ ದಾಟುವ ಆಟಕ್ಕೆ ಕುಂಟಾಬಿಲ್ಲೆಯೆಂದು ಹೆಸರು

ಕನಸ ಬಿಲ್ಲೆಯ ಕಣ್ಣಿಗೊತ್ತಿ ಮುತ್ತಿಕ್ಕಿ ಗೆರೆಗೆ ತಾಗದಂತೆ

ಹುಸಿ ಹೋಗದಂತೆ ಚಿಮ್ಮಿ ಎಸೆದರೆ ಬೇಕಾದ ಚೌಕದಲ್ಲಿ ಅದು ಸೆರೆ


ಜೊತೆಗಿದ್ದುದು ದೂರವಾಗಿ ಒಂಟಿ ಕಾಲಿನ ಸರ್ಕಸ್ಸು ಗುರಿ ಸೇರಲು

ಗೆರೆ ದಾಟುತ್ತಲೇ ಅಳಿಯದಂತೆ ನೋಡಿಕೊಳ್ಳುವ ಬಿಸಿನೆಸ್ಸು

ಮನೋವ್ಯಾಪಾರವದು ಬಲು ಗೌಪ್ಯ ಲೋಕಕೆ ಲಾಭ ನಷ್ಟಗಳಷ್ಟೆ ಸತ್ಯ


ಕೆಂಪು ಹಸಿರು ಬಾವುಟದ ಏರು ಯೌವ್ವನ ತೇರು ಕೇಂದ್ರ ಬಿಂದು

ಸುತ್ತಲೂ ಜೋಡಿ ಇಜ್ಜೋಡಿಗಳ ಮೇಳ ಬಯಲಾಟದ ಕುಣಿತ

ಧಿಥೈ ಧಿಮಿ ತಕಿಟ ಧಿಥೈ ಧಿಮಿ ತಕಿಟ ಧಿಥೈ ಧಿಮಿ ತಕಿಟ ಥೈ


ತಾಳ ಹಿಡಿದ ಕೈಗೆ ಬೆರಳುಗಳು ನೂರಾರು ಅಬ್ಬರದ ಜೋರು

ಸಂಪ್ರದಾಯದ ಬೇರು ಸುತ್ತುತ್ತ ಬದುವ ಬಿತ್ತುತ್ತ ಬೆಳೆಯುತಿದೆ ವೃತ್ತ

ಅಲ್ಲಲ್ಲಿ ಅಲ್ಲಲ್ಲಿ ಎದೆಯ ಹಂಬಲದ ದಿಗಿಣಕೆ ತಾಳೆಯಾಗದ ತಾಳ


ಕುಣಿತದ ಬಿರುಸಿಗೆ ಸಿಂಗಾರಗಳೆಲ್ಲ ಕಳಚಿ ಮನಸು ಬಿಳಚಿ ಎದ್ದೂಬಿದ್ದೂ

ಹೆಕ್ಕಿ ಆಯ್ದು ಮತ್ತೆ ಮತ್ತೆ ಸಿಂಗಾರಗೊಂಡು ಕಾಲನ ಹಿಡಿದಿಡುವ ಹಂಬಲ

ಕುಣಿವ ಕಾಲ್ಗಳಿಗೂ ದಣಿವ ಕಾಲ್ಗಳಿಗೂ ಆಸರೆ ಒಂದೇ ನೆಲ ಜಲ


ಕವುಚಿ ಮಲಗಿದ ಜೀವಕೆ ನೆನಪುಗಳ ರಾಶಿ ಕಣ್ಣ ರೆಪ್ಪೆಯಡಿ ಹಾಕಿ

ಕೌದಿ ನೇಯುತಿದೆ ನಿದ್ದೆ ನಲಿವಿನ ಜೊತೆಗೆ ನೋವೂ ಕುತ್ತಿ

ಚಿತ್ತಾರವಾದುದ ಕಂಡು ಮನಸೆಲ್ಲ ಒದ್ದೆಮುದ್ದೆ



-
ಜಯಲಕ್ಷ್ಮೀ ಪಾಟೀಲ್ (24 Nov 2016)


Saturday, February 11, 2017

ಶ್ರೀರಂಗರ ಎರಡು ಕಾದಂಬರಿಗಳಲ್ಲಿನ ಸ್ತ್ರೀಯರು

 ಶ್ರೀರಂಗರ ಕಾದಂಬರಿಗಳಲ್ಲಿಯ ಸ್ತ್ರೀಯರು.

ಶ್ರೀರಂಗರು ಬರೆದ ನಾಟಕಗಳನ್ನು ನೋಡಿ, ಓದಿ ಗೊತ್ತಿದ್ದ ನನಗೆ, ಶ್ರೀರಂಗರು ಹನ್ನೊಂದು ಕಾದಂಬರಿಗಳನ್ನು ಬರೆದಿರುವರೆಂದು ಗೊತ್ತಿರಲಿಲ್ಲ. ಅವರ ಯಾವ ಕಾದಂಬರಿಯನ್ನೂ ಓದಿರಲಿಲ್ಲ ನಾನು. ಡಾ.ವಿಜಯಾ ಅವರು ಫೋನ್ ಮಾಡಿ, ’’ವೆಂಕಟಸುಬ್ಬಯ್ಯವರಿಗಾಗಿ ಶ್ರೀರಂಗರ ಕಾದಂಬರಿಯಲ್ಲಿಯ ಸ್ತ್ರೀ ಪಾತ್ರಗಳ ಕುರಿತು ಬರೆದು ಕೊಡಲು ಸಾಧ್ಯವೇ” ಎಂದಾಗ ನಾಟಕಕಾರರಾದ ಶ್ರೀರಂಗರು ಒಂದೆರೆಡು ಕಾದಂಬರಿಗಳಿಗಿಂತ ಹೆಚ್ಚಿಗೆ ಬರೆದಿರಲಾರರು ಎಂದೆಣಿಸಿ ಸಂತೋಷದಿಂದ ಒಪ್ಪಿಕೊಂಡೆ. ನಂತರ ನೋಡಿದರೆ ಹನ್ನೊಂದು ಕಾದಂಬರಿಗಳು!! ನಿಗದಿತ ಒಂದು ತಿಂಗಳ ಗಡುವಿನಲ್ಲಿ ಅಷ್ಟನ್ನೂ ಓದಿ ಬರೆಯುವುದು ನನ್ನಿಂದಾಗದು ಎಂದರಿವಾಯಿತು. ಕೊನೆಗೆ ಬರಹಕ್ಕಾಗಿ ‘ಅನಾದಿ-ಅನಂತ’ ಮತ್ತು ‘ಗೌತಮನ ಶಾಪ’ ಎಂಬ ಎರಡು ಕಾದಂಬರಿಗಳನ್ನು ಆಯ್ದುಕೊಂಡೆ. ಒಂದು ತಿಂಗಳ ಅವಧಿಯನ್ನು ಕೆಲಸಗಳ ಒತ್ತಡದ ಕಾರಣದಿಂದಾಗಿ ಮೂರು ತಿಂಗಳುಗಳಿಗೆ ವಿಸ್ತರಿಸಿಕೊಂಡಿದ್ದಕ್ಕೆ ಹಿರಿಯರಾದ ವೆಂಕಟಸುಬ್ಬಯ್ಯನವರಲ್ಲಿ ಕ್ಷಮೆ ಕೋರುತ್ತೇನೆ.



ಕಾದಂಬರಿ - ‘ಅನಾದಿ-ಅನಂತ’


ತನ್ನ ಹೆಂಡತಿ ಸರಲೆಯನ್ನು ಗಾಢವಾಗಿ ಪ್ರೀತಿಸುವ ರಾಮಣ್ಣನೆಂಬ ಸೃಜನಶೀಲ ಬರಹಗಾರ, ಅವರ ಮನೆಯಲ್ಲಿ ತನ್ನ ಅಬಚಿಯ (ಚಿಕ್ಕಮ್ಮನ) ಮಗಳೆಂದು ಸರಲೆ ಕರೆತಂದಿಟ್ಟುಕೊಂಡ ಹುಡುಗಿ ಕುಮುದ. ಈ ಮೂರು ಪಾತ್ರಗಳು ಈ ಕಾದಂಬರಿಯ ಮುಖ್ಯ ಪಾತ್ರಗಳು.

ಗಂಡು ಹೆಣ್ಣಿನ ನಡುವಣ ಪ್ರೀತಿ, ಆಕರ್ಷಣೆ, ದೈಹಿಕ ವಾಂಛೆ, ಸ್ವೀಕಾರ, ನಿರಾಕಾರಣ, ಅನಿವಾರ್ಯತೆ ಈ ಕಾದಂಬರಿಯ ವಸ್ತು. ವರ್ಷಾನುಗಟ್ಟಲೆ ಖಾಯಿಲೆ ಮಲಗಿರುವ ಹೆಂಡತಿಯನ್ನು ರಾಮಣ್ಣ ಅಪಾರವಾಗಿ ಪ್ರೀತಿಸುತಿದ್ದರೂ, ಕುಮುದೆಯೊಡನೆ ದೈಹಿಕ ಸಂಪರ್ಕ ಬೆಳೆಸುತ್ತಾನೆ. ಆಗಷ್ಟೇ ಹರೆಯಕ್ಕೆ ಕಾಲಿಟ್ಟ ಕುಮುದಳ ಮನಸು ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗದೆ, ತನಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವನಾದ ರಾಮಣ್ಣನೆಡೆಗೆ ಬೆಳೆಸಿಕೊಳ್ಳುವ ಪ್ರೀತಿ, ಸರಲೆಯೆಡೆಗೆ ಸಣ್ಣಗಿನ ಮತ್ಸರಕ್ಕೆ ದಾರಿಯಾಗುತ್ತದಾದರೂ, ತನಗೆ ಆಶ್ರಯ ನೀಡಿದವಳು ಎನ್ನುವ ಒಳಎಚ್ಚರಿಕೆ ಅದನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗುತ್ತದೆ. ಸರಲಳ ಸಾವಿನ ನಂತರ ಕುಮುದಳ ಸಹವಾಸ ಅಸಹನೀಯವೆನಿಸಿ ರಾಮಣ್ಣ ಅವಳನ್ನು ಮನೆಯಿಂದ ಆಚೆ ಹಾಕಬೇಕು ಎಂದುಕೊಳ್ಳುತ್ತಿರುವಾಗಲೇ ಕುಮುದ ತಾನು ಬಸುರಿ ಎನ್ನುವುದನ್ನು ರಾಮಣ್ಣನಿಗೆ ತಿಳಿಸುತ್ತಾಳೆ. ರಾಮಣ್ಣ ಕುಮುದಳನ್ನು ಮದುವೆಯಾಗುತ್ತಾನೆ. ಮದುವೆಯಾದರೂ ಅಂತರದ ದಾಂಪತ್ಯ ಅವರದಾಗುತ್ತದೆ. ಇದು ಈ ಕಾದಂಬರಿಯ ಸಾರಾಂಶ.

ಈ ಕಾದಂಬರಿಯಲ್ಲಿ ಬರುವ ಸ್ತ್ರೀ ಪಾತ್ರಗಳೆಂದರೆ ಸರಲೆ, ಕುಮುದ ಮತ್ತು ಕುಮುದಳು ಅತ್ತೆ ಎಂದು ಕರೆಯುವ ಅವಳ ದೂರದ ಸಂಬಂಧಿ. ರಾಮಣ್ಣನ ಸ್ನೇಹಿತನ ಹೆಂಡತಿ ಎನ್ನುವ ಪಾತ್ರವೂ ಈ ಕಾದಂಬರಿಯಲ್ಲಿದೆಯಾದರೂ ಹೀಗೆ ಬಂದು ಹಾಗೆ ಹೋಗುವ ಪಾತ್ರ ಅದಾದ್ದರಿಂದ ಆ ಪಾತ್ರ ವಿವರಣೆಗೆ ಸಿಕ್ಕುವುದೇ ಇಲ್ಲ.

ಈ ಕಾದಂಬರಿಯಲ್ಲಿನ ಸ್ತ್ರೀ ಪಾತ್ರಗಳು ವ್ಯವಹಾರಿಕವಾಗಿ ಮನೆಯಲ್ಲಿಯೇ ಇದ್ದು ಮನೆ, ಗಂಡ, ಮಕ್ಕಳು ಮತ್ತು ಅವರುಗಳ ಬೇಕು ಬೇಡಗಳನ್ನು ನೋಡುಕೊಳ್ಳುವಲ್ಲಿಗೇ ಸೀಮಿತಗೊಂಡಂಥವು. ಮನೆಯ ಹೊರಗೆ ಕೆಲಸ ಮಾಡುವುದಂತೂ ದೂರ, ಆ ನಿಟ್ಟಿನಲ್ಲಿ ಯೋಚಿಸಿಯೂ ಗೊತ್ತಿಲ್ಲದಂಥವು. ಆದರೆ ಸರಲೆ ಮತ್ತು ಕುಮುದ ಪಾತ್ರಗಳು ವೈಚಾರಿಕ ನೆಲೆಗಟ್ಟಿನಲ್ಲಿ ಯೋಚಿಸುವಂಥ ಸ್ತ್ರೀ ಪಾತ್ರಗಳು ಎನ್ನುವುದು ವಿಶೇಷ. ಈ ಕಾದಂಬರಿಯ ಹೂರಣ ಮಾನಸಿಕ ಸಂಘರ್ಷ.




ಸರಲೆ.

ರಾಮಣ್ಣನ ಮಡದಿ. ಸುಶೀಲೆ ಮತ್ತು ಸುಗುಣೆ. ಹನ್ನೆರಡು ವರ್ಷದ ತನ್ನ ಚಿಕ್ಕಮ್ಮನ ಅನಾಥ ಮಗಳನ್ನು ತನ್ನೊಡನೆ ಕರೆದುಕೊಂಡು ಬಂದು, ಮನೆಯಲ್ಲಿಟ್ಟುಕೊಂಡು ಪ್ರೀತಿಯಿಂದ ನೋಡಿಕೊಳ್ಳುವಂಥ ಮಾತೃಹೃದಯಿ. ಬರಹಗಾರ ಪತಿಯ ಸ್ಪೂರ್ತಿಯ ಸೆಲೆಯಾದವಳು. ಅವನಿಗನುಕೂಲವಾದವಳು. ಅವನ ಬರಹಗಳ ಮೊದಲ ಓದುಗಳು ಮತ್ತು ವಿಮರ್ಶಕಳೂ ಸಹ! ಎಲ್ಲರೂ ಬಯಸುವಂಥ ಸುಂದರ ದಾಂಪತ್ಯ ರಾಮಣ್ಣ-ಸರಲೆಯರದ್ದಾಗಿರುತ್ತದೆ. ಗಂಡನ ಲೋಪಗಳನ್ನೂ ವಿಶೇಷಣಗಳನ್ನಾಗಿಸಿ, ಸಹಿಸಿಯೂ ಸಹಿಸಿದ್ದನ್ನು ತೋರಿಸಿಕೊಳ್ಳದ ಸರಲೆಯಂಥ ಪತ್ನಿ ತಮಗಿರಬೇಕು ಎಂದು, ಅಂದು ಬಹುಶಃ ಇಂದೂ ಗಂಡಸರು ಅಂದುಕೊಳ್ಳುವರೇನೋ ಎಂದು ನನ್ನನಿಸಿಕೆ. ಅಲ್ಲದೇ ಆ ಕಾಲಮಾನದ ಕತೆ ಕಾದಂಬರಿಗಳಲ್ಲಿ ಇಂಥ ಆದರ್ಶಮಯ ವ್ಯಕ್ತಿಚಿತ್ರಣ ಸಾಮಾನ್ಯವಾಗಿತ್ತು ಮತ್ತು ಆಪ್ಯವಾಗಿತ್ತು. ಇಂದಿನ ಸಾಹಿತ್ಯದಲ್ಲಿ ಯಾರಾದರೂ ಇಂಥ ಪಾತ್ರಗಳನ್ನು ಸೃಷ್ಟಿಸಿದ್ದೇ ಆದರೆ ಬಹುಶಃ ಇಂದಿನ ಪೀಳಿಗೆ ಅದನ್ನು ವಾಸ್ತವಕ್ಕೆ ಬಲು ದೂರ ಎನ್ನುವ ಕಾರಣ ಕೊಟ್ಟು ಸ್ವೀಕರಿಸಲು ಹಿಂಜರಿಯಬಹುದೇನೋ…

ಗಂಡ ರಾಮಣ್ಣನಿಗೋಸ್ಕರ, ಅವನಿಗನುಕೂಲವಾಗಿ ಬದುಕುವುದೇ ತನ್ನ ಜೀವನದ ಸಾರ್ಥಕತೆ ಎಂದು ಭಾವಿಸಿ ಜೀವಿಸುತ್ತಿದ್ದ ಸರಲೆ, ಕುಮುದ ಮನೆಗೆ ಬಂದ ಎರಡು ಮೂರು ವರ್ಷಕ್ಕೆಲ್ಲ ದೀರ್ಘ ಖಾಯಿಲೆಯಿಂದ ಹಾಸಿಗೆ ಹಿಡಿಯುತ್ತಾಳೆ. ಮನೆಯ ಕೆಲಸವೆಲ್ಲ ಹದಿನೈದು-ಹದಿನಾರರ ಹರೆಯದ ಕುಮುದಳ ಮೇಲೆ ಬೀಳುವುದನ್ನು ಕಂಡು ತನ್ನ ಅಸಹಾಯಕ ಸ್ಥಿತಿಗೆ ಕೊರಗುತ್ತಾಳೆ. ಕುಮುದಳ ಬಳಲಿಕೆ ನೀಗಲೆಂದು ಗಂಡ ರಾಮಣ್ಣನಿಗೆ ಅವಳನ್ನು ಸಿನಿಮಾಗೆ ಕರೆದುಕೊಂಡು ಹೋಗಲು ಬಲವಂತಪಡಿಸಿ ಅವರಿಬ್ಬರನ್ನು ಸಿನಿಮಾಗೆ ಕಳುಹಿಸಿಕೊಡುತ್ತಾಳೆ. ಮೂರೂ ಪಾತ್ರಗಳು ಅವುಗಳ ಸ್ವಸ್ಥಾನದಲ್ಲಿರುವವರೆಗೆ ಎಲ್ಲವೂ ಸರಿಯಾಗಿರುತ್ತದೆ. ಆದರೆ ರಾಮಣ್ಣ ಮತ್ತು ಕುಮುದಳ ನಡುವೆ ಸಂಬಂಧವೇರ್ಪಟ್ಟ ಮೇಲೆ ಮೇಲ್ನೋಟಕ್ಕೆ ಯಾವ ಬದಲಾವಣೆ ಕಾಣಿಸದಿದ್ದರೂ ಮೂರೂ ಅಂತರಂಗಗಳು ಅಲ್ಲೋಲ ಕಲ್ಲೋಲಗೊಳ್ಳುತ್ತವೆ. ಹಾಸಿಗೆ ಹಿಡಿದ ಸರಲೆಯ ಸಹನೆಯ ಕುರಿತು ಅಚ್ಚರಿಯಾಗುವುದು ಈ ಹೊತ್ತಿನಲ್ಲೆ! ರಾಮಣ್ಣ ಮತ್ತು ಕುಮುದರ ಸಂಬಂಧ ಶುರುವಾದ ನಂತರ, ಅವರಿಬ್ಬರೂ ಸರಲೆಯ ಎದಿರು ನಡುವಳಿಕೆಯಲ್ಲಿ ಮೊದಲಿನಂತೆಯೇ ಇದ್ದರೂ ಸರಲೆಯ ಸೂಕ್ಷ್ಮ ಮನಸಿಗೆ ಅವರಿಬ್ಬರ ಸಂಬಂಧದ ಸುಳಿವು ಸಿಕ್ಕುಬಿಡುತ್ತದೆ. ಆದರೆ ತಪ್ಪಿಯೂ ತನಗದು ಗೊತ್ತಾಗಿದೆ ಎಂದು ಸರಲೆ ತೋರಗೊಡುವುದಿಲ್ಲ. ಆದರೂ ಇದು ಓದುಗರಿಗೆ ಗ್ರಹಿಕೆಯಾಗುವುದು ಎರಡು ಪ್ರಸಂಗದಲ್ಲಿ, ಒಮ್ಮೆ ಕುಮುದಳೊಡನೆ ಮತ್ತೊಮ್ಮೆ ರಾಮಣ್ಣನೊಡನೆ ಮಾತಾನಾಡುವಾಗ ತನ್ನ ಸಹನೆ ಉಳಿಸಿಕೊಳ್ಳಲು ಮಲಗಿದಲ್ಲಿಯೇ ಸರಲೆ ಮುಖ ತಿರುಗಿಸಿ ಏನೊಂದೂ ಮಾತನಾಡದೆ ಮೌನವಹಿಸುವಾಗ. ನೋವು, ಅಸಹನೆಯನ್ನು ಮೀರಿದ, ವಾಸ್ತವಪ್ರಜ್ಞೆ ಸರಲೆಯನ್ನು ಈ ವಿಷಯದಲ್ಲಿ ಮೌನವಹಿಸುವಂತೆ ಮಾಡುತ್ತದೆಯೇ? ಇನ್ನೊಬ್ಬರ ಆಸರೆಯಿಲ್ಲದೆ ಬದುಕಲಾಗದ ಅಸಹಾಯಕ ಸ್ಥಿತಿಯಲ್ಲಿ, ಅದೂ ರಾಮಣ್ಣ ಮತ್ತು ಕುಮುದಳ ಮೇಲೆಯೇ ತಾನು ಅವಲಂಬಿತಳಾಗಿರುವುದೂ ಮತ್ತು ಖಾಯಿಲೆಯ ನಿಃಶ್ಯಕ್ತಿಯ ಕಾರಣದಿಂದಾಗಿ ರಾಮಣ್ಣನಿಗೆ ಸುಖ ಕೊಡಲಾಗದ ಅನಿವಾರ್ಯತೆಯೂ ಸೇರಿ ಅವರಿಬ್ಬರ ಸಂಬಂಧ ಗೊತ್ತಾಗಿಯೂ, ರಾಮಣ್ಣನ ಮೇಲಿನ ಪ್ರೀತಿಯಿಂದಾಗಿ ಸರಲೆ ಈ ಕುರಿತ ತನ್ನೊಳಗಿನ ನೋವನ್ನು ತೋರಗೊಡುವುದಿಲ್ಲವೇ ಎಂಬ ಅನಿಸಿಕೆ ಮೂಡುತ್ತದೆ. ಆದರೆ ಸರಲೆಯ ನೋವು ಪ್ರಕಟಗೊಳ್ಳುವುದು ಇನ್ನೊಂದು ರೀತಿಯಲ್ಲಿ. ಅದು ತಾನಿನ್ನು ಹೆಚ್ಚು ದಿನ ಬದುಕುವುದಿಲ್ಲವಾದ್ದರಿಂದ ರಾಮಣ್ಣ ತಾನು ಬದುಕಿರುವಾಗಲೇ ಇನ್ನೊಂದು ಮದುವೆಯಾಗಬೇಕೆಂದು ಆಗಾಗ ಅವನಿಗೆ ಬಲವಂತಪಡಿಸುವುದರ ಮೂಲಕ. ಮೊದಮೊದಲು ರಾಮಣ್ಣನಿಗೆ ’ಇನ್ನೊಂದು ಮದುವೆಯಾಗಿ’ ಎನ್ನುವ ಸರಲೆ ನಂತರ ನೇರವಾಗಿ ಕುಮುದಳನ್ನೇ ಮದುವೆಯಾಗಲು ಸೂಚಿಸುತ್ತಾಳೆ. ರಾಮಣ್ಣ ಸತತವಾಗಿ ಸರಲೆಯ ಮಾತನ್ನು ನಿರಾಕರಿಸುತ್ತಾ ಬರುತ್ತಾನೆ. ಕೊನೆಗೊಮ್ಮೆ ‘ಆಯ್ತು ಅದರ ಬಗ್ಗೆ (ಕುಮುದಳನ್ನು ಮದುವೆಯಾಗುವುದರ ಬಗ್ಗೆ) ವಿಚಾರ ಮಾಡ್ತೀನಿ’ ಎನ್ನುತ್ತಾನೆ ರಾಮಣ್ಣ. ಅಂದೇ ಸರಲೆ ಸಾಯುತ್ತಾಳೆ. ರಾಮಣ್ಣ ಮದುವೆಯ ಕುರಿತು ಯೋಚಿಸುತ್ತೇನೆ ಎನ್ನುವವರೆಗೂ ಅವನ ನಿರಾಕರಣೆಯ ಹಿಂದಿನ ತನ್ನ ಮೇಲಿನ ಪ್ರೀತಿ ಅಷ್ಟುದಿನ ಸರಲೆಯನ್ನು ಜೀವದಿಂದಿರುವಂತೆ ನೋಡಿಕೊಂಡಿತ್ತು ಎನಿಸುತ್ತದೆ ನನಗೆ.




ಕುಮುದ.

ಮಾನಸಿಕ ಸಂಘರ್ಷದ ಅದ್ಭುತ ಚಿತ್ರಣ ಕುಮುದ ಪಾತ್ರದ್ದು. ಬಹುಶಃ ಕನ್ನಡದಲ್ಲಿ ಇಷ್ಟು ವಿಶದವಾಗಿ ಮಾನಸಿಕ ಒಳತೋಟಿಯನ್ನು ತೆರೆದಿಟ್ಟ ಇನ್ನೊಂದು ಕಾದಂಬರಿ ಇರಲಾರದೇನೋ…

ಸರಲೆಯ ಅಬಚಿ(ಚಿಕ್ಕಮ್ಮ)ಯ ಮಗಳು ಕುಮುದ. ಹನ್ನೆರೆಡು ವರ್ಷದವಳಿದ್ದಗಲೇ ಸರಲೆಯೊಂದಿಗೆ ಆಕೆಯ ಗಂಡನ ಮನೆಗೆ ಬಂದು, ಸರಲೆ ಮತ್ತು ರಾಮಣ್ಣನ ಸಹೃದಯತೆಯಿಂದಾಗಿ ಯಾವ ಕೊರತೆಯೂ ಬಾರದಂತೆ ಬೆಳೆದವಳು. ಕುಮುದ ಹರೆಯಕ್ಕೆ ಕಾಲಿಡುವ ಹೊತ್ತಿಗೆ ಸರಲೆ ಖಾಯಿಲೆಯಿಂದ ಹಾಸಿಗೆ ಹಿಡಿಯುತ್ತಾಳೆ. ಈ ಮನೆಗೆ ಬಂದ ಮೊದಲ ದಿನದಿಂದಲೇ ಕುಮುದೆಗೆ ಅದೇನು ಅಂತ ಅರ್ಥವಾಗದ ಆಕರ್ಷಣೆ ರಾಮಣ್ಣನ ಬಗ್ಗೆ. ಮುಂದೆ ಸರಲೆ ಹಾಸಿಗೆ ಹಿಡಿದು ಮೂರ್ನಾಲ್ಕು ವರ್ಷಗಳ ನಂತರ ಆಕಸ್ಮಿಕವಾಗಿ ರಾಮಣ್ಣನ ಕೈ ಸೋಕಿದ್ದೇ ನೆಪವಾಗಿ ರಾಮಣ್ಣ ಮತ್ತು ಕುಮುದಳ ನಡುವೆ ದೈಹಿಕ ಸಂಪರ್ಕವೇರ್ಪಡುತ್ತದೆ. ತಾನು ತನ್ನ ಹೆಂಡತಿಯನ್ನು ಅಪಾರವಾಗಿ ಪ್ರೀತಿಸುತ್ತೇನೆ ಎನ್ನುವ ರಾಮಣ್ಣನ ಪಾಲಿಗೆ ಕುಮುದ ದಾಹ ನೀಗಿಸಿಕೊಳ್ಳುವ ಒಂದು ಸಾಧನವಾದರೆ, ಕುಮುದ ನಿಜವಾಗಿಯೂ ರಾಮಣ್ಣನನ್ನು ಪ್ರೀತಿಸತೊಡಗುತ್ತಾಳೆ. ಹಗಲು ಹೆಂಡತಿಯೊಂದಿಗೆ ಆಪ್ತವಾಗಿ ಮಾತಾಡುವ, ರಾತ್ರಿ ತನ್ನೊಡನೆ ಸ್ವಲ್ಪ ಕಾಲ ಕಳೆಯುವ ರಾಮಣ್ಣ ಕುಮುದಳ ಪಾಲಿಗೆ ಒಗಟಾಗುತ್ತಾನೆ. ಅವನು ನಿಜವಾಗಿ ಪ್ರೀತಿಸುವುದು ಯಾರನ್ನು ಎನ್ನುವ ಗೊಂದಲ ಕುಮುದಳನ್ನು ಅಸ್ವಸ್ಥಳನ್ನಾಗಿಸುತ್ತದೆ. ತನ್ನನ್ನೇ ಅವನು ಪ್ರೀತಿಸಬೇಕು ಎನ್ನುವ ಪ್ರೀತಿಸುವ ಜೀವದ ಸಹಜ ಹಂಬಲ. ಜೊತೆಗೇ ತಾನು ಸರಲೆಗೆ ಮೋಸ ಮಾಡುತ್ತಿರುವೆ ಎನ್ನುವ ಪಾಪಪ್ರಜ್ಞೆ, ಸರಲೆಗೆ ತಮ್ಮಿಬ್ಬರ ವಿಷಯ ಗೊತ್ತಾದರೆ, ತಮ್ಮಿಬ್ಬರನ್ನೂ ಅಪಾರವಾಗಿ ಪ್ರೀತಿಸುವ ಅವಳಿಗಾಗುವ ಆಘಾತ ನೆನೆದು ಒಂದೆರೆಡು ಸಲ ಕಂಗಾಲಾಗುತ್ತಾಳೆ. ಅಕ್ಕನಿಗೆ ನೋವಾಗದಂತೆ ಇರಬೇಕೆಂದುಕೊಂಡರೂ ರಾಮಣ್ಣನೆಡೆಗಿನ ಸೆಳೆತ ಅದನ್ನು ಸಾಧ್ಯವಾಗಿಸುವುದಿಲ್ಲ.

ಆದರೆ ಹಗಲು ಹೊತ್ತಲ್ಲಿ ತನ್ನೆಡೆಗಿನ ರಾಮಣ್ಣನ ನಿರ್ಲಿಪ್ತತೆ, ರಾತ್ರಿಯೂ ಸಹ ಬಂದ ಕೆಲಸ ಮುಗಿಸಿಕೊಂಡು ಹೋಗುವವನಂತಿರುವ ರಾಮಣ್ಣನ ವರ್ತನೆ, ಮೊದಮೊದಲು ಪ್ರೀತಿಯ ಆವೇಶದಲ್ಲಿದ್ದ ಕುಮುದಳ ಗಮನಕ್ಕೆ ಅಷ್ಟಾಗಿ ಬರದೆ, ದಿನಗಳು ಕಳೆದಂತೆ, ವಾಸ್ತವದ ಅರಿವಾಗುತ್ತಿದ್ದಂತೆ, ಅವಳ ಮನಸಿನ ಮೇಲೆ ನೋವಿನ, ಅವಮಾನದ ಗಾಯಗಳಾಗಲು ಕಾರಣವಾಗುತ್ತದೆ. ಕುಮುದ ಅದೆಷ್ಟರ ಮಟ್ಟಿಗೆ ರಾಮಣ್ಣನನ್ನು ಪ್ರೀತಿಸುತ್ತಿರುತ್ತಾಳೆ ಅಂದರೆ ಅವನ ಮನೆಯಾಚೆಯ ಕೆಲವು ಚಟುವಟಿಕೆಗಳು, ಅವನು ಇವಳಿಗೆ ಹೇಳಿರದಿದ್ದರೂ ಇವಳ ಅನುಭೂತಿಗೆ ಬರುವಷ್ಟು! ಅದೂ ಸರಲೆಯ ಗಮನಕ್ಕೂ ಬರುತ್ತದೆ. ಮುಂದೆ ಸರಲೆಯ ಸಾವಿನ ನಂತರ ರಾಮಣ್ಣನಿಂದಾಗಿ ರಾಮಣ್ಣ ಮತ್ತು ಕುಮುದಳ ನಡುವೆ ಅಸಹನೆ ಹೆಚ್ಚುತ್ತಾ ಹೋಗುತ್ತದೆ. ಹೆಂಡತಿಯ ಸಾವಿನ ನಂತರ ರಾಮಣ್ಣನಿಗೆ ಕುಮುದ ಬೇಡವಾಗತೊಡಗುತ್ತಾಳೆ. ಅವಳನ್ನು ಮನೆಯಿಂದ ಆಚೆ ಅಟ್ಟಲು ಯೋಚಿಸುತ್ತಾನೆ. ತನ್ನೆಡೆಗಿನ ರಾಮಣ್ಣನ ನಿರ್ಲಿಪ್ತತೆ ಮತ್ತು ಅಸಹನೆ ಕುಮುದಳನ್ನು ಕಂಗಾಲಾಗಿಸುತ್ತದೆ. ತನ್ನ ಪ್ರೀತಿಗೆ, ಸ್ವಾಭಿಮಾನಕ್ಕೆ ಪದೇ ಪದೇ ಬೀಳುವ ಏಟು ಅವಳನ್ನು ಅಪಾರವಾಗಿ ನೋಯಿಸುತ್ತದೆ, ಹಗಲೂ ರಾತ್ರಿ ಮರುಗಿಸುತ್ತದೆ, ಅದೇ ಅವಳನ್ನು ಪೆಡಸಾಗಿಸುತ್ತದೆ. ಕೊನೆಗೊಮ್ಮೆ ರಾಮಣ್ಣನ ಮನೆಯಿಂದ ತೆರಳಲು ನಿರ್ಧರಿಸಿದ ಕುಮುದೆಗೆ ತನ್ನ ತಿಂಗಳ ಹಿಂದೆಯೇ ಮುಟ್ಟಿನ ದಿನ ಮುಂದೆ ಹೋಗಿರುವುದು ಗಮನಕ್ಕೆ ಬರುತ್ತದೆ. ಮಕ್ಕಳಿಗಾಗಿ ಹಂಬಲಿಸುತಿದ್ದ ಸರಲೆಯನ್ನು ಕುಮುದ ಆ ಹೊತ್ತಲ್ಲಿ ನೆನೆದು ಆರ್ದ್ರವಾದರೂ, ರಾಮಣ್ಣನನ್ನು ನೆನೆದು ತಿರಸ್ಕಾರದ ನಗೆ ಮೂಡುತ್ತದೆ ಅವಳ ಮೊಗದಲ್ಲಿ. ತನ್ನಿಂದ ಮಕ್ಕಳಾಗುವುದು ಸಾಧ್ಯವಿಲ್ಲದಿದ್ದರೂ, ಮಕ್ಕಳು ಮನೆಯಲ್ಲಿ ಓಡಾಡುವುದನ್ನು ಕಣ್ತುಂಬಾ ಕಾಣಬೇಕು ಎಂದು ಬಯಸಿದ್ದ ಸರಲೆ, ಆ ಕಾರಣದಿಂದಾಗಿ ತನ್ನನ್ನು ಮದುವೆಯಾಗಲು ಬಲವಂತ ಪಡಿಸಿದಾಗಲೂ ಒಪ್ಪದಿದ್ದ ರಾಮಣ್ಣನಿಗೆ (ರಾತ್ರಿ ತನ್ನೊಂದಿಗೆ ಕಳೆಯಲು ಅಭ್ಯಂತರವಿಲ್ಲದಿದ್ದವನಿಗೆ ಮದುವೆಯಾಗಲು ಮಾತ್ರ ಅಭ್ಯಂತರ!) ಈಗ ತನ್ನ ಬಸಿರಿನ ವಿಷಯ ತಿಳಿಸಿ ಅವನು ವ್ಯಥೆ ಪಡುವುದನ್ನು ನೋಡಿ ಹೊಟ್ಟೆತುಂಬಾ ನಗಬೇಕು ಎಂದು ಕುಮುದಳ ನೊಂದ ಮನಸು ಬಯಸುತ್ತದೆ.

ಇತ್ತ ರಾಮಣ್ಣನ ಮನಸು ಕುಮುದಳನ್ನು ಮನೆಯಾಚೆ ಹಾಕಲು ನಿರ್ಧರಿಸುತ್ತಿದ್ದಂತೆ, ಅದನ್ನರಿಯದ ಕುಮುದ ರಾಮಣ್ಣನ ಕೋಣೆಗೆ ಬಂದು, ತನ್ನ ಒಡಲಲ್ಲಿ ಅವನ ಚಿಗುರು ಮೂಡಿದ್ದನ್ನು ತಿಳಿಸುತ್ತಾಳೆ. ಅಷ್ಟೊತ್ತು ಕುಮುದಳನ್ನು ಹೊರಹಾಕುವ ಬಗ್ಗೆ ಯೋಚಿಸಿ ನಿರ್ಧರಿಸಿದವನು ಕುಮುದಳ ಮಾತು ಕೇಳುತ್ತಲೇ ಮದುವೆಯಾಗೋಣ ಎನ್ನುತ್ತಾನೆ! ರಾಮಣ್ಣನ ಮನೆಯಿಂದ ಹೊರನಡೆಯಬೇಕು ಎಂದುಕೊಂಡಿದ್ದ ಕುಮುದಳೂ ಸಮ್ಮತಿಸಿಬಿಡುತ್ತಾಳೆ!! ತಾಳಮೇಳವಿಲ್ಲದ ಎರಡು ಜೀವಗಳು ಅನಿವಾರ್ಯವೆಂಬಂತೆ ಮದುವೆಯ ಬಂಧನಕ್ಕೊಳಪಡುತ್ತವೆ!

ಮದುವೆಯಾದರೂ ಘಾಸಿಗೊಂಡ ಕುಮುದಳ ಮನಸು ರಾಮಣ್ಣನನ್ನು ಹತ್ತಿರ ಬರಲು ಬಿಡುವುದೇ ಇಲ್ಲ. ಸ್ವಲ್ಪವಾದರೂ ಸ್ವಾಭಿಮಾನವಿರುವ ಯಾರಿಗೇ ಆಗಲಿ, ‘ತಾನು ಬಳಕೆಯಾದೆ, ಉಪಯೋಗಿಸಲ್ಪಟ್ಟೆ’ ಎನ್ನುವುದು ಮನದಟ್ಟಾದಾಗ ಆಗುವ ಆ ನೋವು, ಅವಮಾನ ಅಳಿಸಲಾಗದಂಥದ್ದು. ಕುಮುದಳೊಡನೆ ಆಗುವುದೂ ಅದೇ. ರಾಮಣ್ಣನನ್ನು ಪ್ರೀತಿಸುತ್ತಿದ್ದರೂ ಅವಳದನ್ನು ಕೃತಿಯಲ್ಲಿ ಪ್ರಕಟಪಡಿಸುವುದೇ ಇಲ್ಲ! ನಿರ್ಲಿಪ್ತ ವಿರಾಗಿಣಿಯಂತೆ ಬದುಕುತ್ತಾಳೆ. ಅವಳ ಮನಸಿಗಾದ ನೋವನ್ನು, ಅವಮಾನವನ್ನು ವಿವರಿಸಲು, ಮದುವೆಯಾಗಿ, ಮಗುವಾದ ನಂತರ ಒಮ್ಮೆ, ರಾಮಣ್ಣನಿಗೆ ತನ್ನಿಲ್ಲಿ ಇನ್ನೂ ಕುಮುದಳಿಗೆ ಪ್ರೇಮವಿದೆ, ಆದರೆ ಆಕೆ ಅದನ್ನು ತೋರಗೊಡುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ, ಅದರಿಂದ ಅವನು ಉತ್ಸುಕನಾಗಿ ಅವಳನ್ನು ಹೊಂದಲು ಅವಳೆಡೆ ಬರುವ ಈ ಒಂದು ಪ್ರಸಂಗ ಸಾಕು. (ಶ್ರೀರಂಗ ಸಾರಸತ್ವ /ಸಂಪುಟ-೨/ ಪುಟ: ೧೫೧-೧೫೨)

“ಕುಮುದ”

ತನ್ನನ್ನು ಒಮ್ಮೆ ಚಕಿತಳಾಗಿ ನೋಡಿ ಆಕೆ ಒಮ್ಮೆಲೆ ಮುಗುಳ್ನಗೆ ನಕ್ಕಿದ್ದಳು. ಆಗಲೇ ತಿಳಿಯಬೇಕಾಗಿತ್ತು ತನಗೆ. ಆ ಮುಗುಳ್ನಗೆಯಿಂದ ಮುಖ ಸೌಮ್ಯವಾಗಿ ಕಂಡಿರಲಿಲ್ಲ.

“ಕುಮುದ”

“ಒಳಗೆ ಬನ್ನಿ”

“ಕುಮುದಾ, ಕುಮುದಾ, ಆದದ್ದನ್ನು ನೀನು ಮರೆಯುವೆ ಎಂದು ನನಗನಿಸಿತ್ತು. ಹಾಂಗ ಕೇಳಿದರೆ ನನ್ದೇ ತಪ್ಪು, ನಾನು ಒಪ್ಕೋತೀನಿ.”

“ನಿಮ್ಮಂಥ ಪ್ರಗತಿಶೀಲರು ಇದನ್ನು ತಪ್ಪು ಎಂದು ತಿಳಿಯಬೇಕೆ?”

“ಆಂ? ಏನೆಂದೆ?”

“ಅಲ್ಲ-ಹಳೇ ವಿಚಾರದವರು ಹಾಂಗ ಅನ್ನಬಹುದು, ಆದರೆ ನೀವು…”

“ಯಾವುದು? ಏನು? ಯಾವ ವಿಷಯ ನೀನು ಮಾತಾಡ್ತಾ ಇರೋದು?”

“ಸೂಳೇರನ್ನ ಮದುವೆಯಾಗೋದು.”

“ಕುಮುದಾ!” ಚಾವಟಿಯ ಹೊಡೆತಕ್ಕೆ ಆಕ್ರೋಶಿಸುವವನಂತೆ ಕೂಗಿದ.

“ಪ್ರೀತಿಸದೇ ಇದ್ದ ಹೆಂಗಸಿನ ಸಹವಾಸ ಅಂದ್ರ, ಸೂಳೆಯ ಸಹವಾಸ ಅಂತ ನೀವೇ…”

“ಕುಮುದಾ, ಕುಮುದಾ, ಯಾಕ ದಂಡಸ್ತಿ ನನ್ನ ಇಂಥಾ ಮಾತಿನಿಂದ? ನಿನ್ನನ್ನ ಪ್ರೀತಿಸದೇ ಇದ್ದರೆ ನಿನ್ನ ಮದುವೆಯಾಗುತ್ತಿದ್ದೆನೆ ನಾ? ಯಾಕ ಇಲ್ಲದ ವಿಚಾರ ತಲೆವಳ್ಗ ತುಂಬಿಕೊಂಡು…”

“ನನಗೇ ಮಗು ಬೇಕಾಗಿತ್ತು. ಅದಕ್ಕ ನಿಮ್ಮನ್ನ ನಾ ಜವಾಬ್ದಾರ ಅಂತ ಹಿಡಿಯೂದಿಲ್ಲ. ಈಗಾದ್ರೂ ಸಮಾಧಾನ ಆಯ್ತೊ?”

“ಕುಮುದಾ, ಕುಮುದಾ, ಯಾವುದೋ ತಪ್ಪು ಕಲ್ಪನೆಯಿಂದ ನೀನು ಏನೇನೊ ಕಲ್ಪಿಸ್ಕೊಂಡೀದಿ…”

“ನನ್ನ ಕಲ್ಪನೆ ತಪ್ಪೋದಿಲ್ಲ. ಈಗ ನೀವು ಇಲ್ಲಿ ಯಾಕ ಬಂದೀರಿ ಅನ್ನೊ ಕಲ್ಪನೆ ನನಗಿದೆ. ಅದನ್ನ ತಪ್ಪು ಅಂತೀರಾ? ಆದರೆ ಒಂದು ಮಾತು. ನಿಮ್ಮ ತೃಪ್ತಿಗೆ ನಾನು ಅಡ್ಡ ಬರೋದಿಲ್ಲ. ಒಂದ್ಮಾತು ಮೊದ್ಲು ನನಗ ತಿಳುಹಿಸಿಕೊಡಿರಿ. ಈಗ ನೀವು ಇಲ್ಲಿ ಬಂದಿದ್ದು, ನಾ ನಿಮ್ಮ ಮದುವೇ ಹೆಂಡತಿ ಅನ್ನೋ ಅಧಿಕಾರದಿಂದಲೊ, ಇಲ್ಲಾ ನಾನು ಅಂದ್ರೆ ನಿಮಗೆ ಮೋಹಿತಳಾದ ಒಬ್ಬ ಸ್ವೇಚ್ಛಾಚಾರಿಣಿ ಅಂತಲೊ? ಯಾವುದನ್ನ ನೀವು ಹೇಳ್ತೀರಿ, ಆ ಪಾತ್ರ ಅಭಿನಯಿಸಲಿಕ್ಕೆ ನಾ ಸಿದ್ಧ.”


ಕುಮುದಳನ್ನು ಮದುವೆಯಾದ ಹತ್ತು ವರ್ಷಗಳಲ್ಲಿ ರಾಮಣ್ಣನಿಗೆ ತನ್ನಿಂದಾದ ತಪ್ಪು ಅರಿವಾಗಿ ಕುಮುದಳೆಡೆಗೆ ನಿಧಾನವಾಗಿ ಪ್ರೀತಿ ಮೂಡಿದರೂ, ಇದೇ ಕಾರಣದಿಂದಾಗಿ ಕುಮುದ ತನ್ನನ್ನು ದೂರವಿಟ್ಟಿದ್ದರಿಂದಾಗಿ, ಹೇಳಲು ಧೈರ್ಯ ಸಾಲದಾಗುತ್ತದೆ. ರಾಮಣ್ಣನಿಗಾಗಿ ಏರ್ಪಟ್ಟ ದೊಡ್ಡ ಸತ್ಕಾರ ಸಮಾರಂಭದ ಒಂದು ದಿನ, ಕುಮುದಳ ಮನಸಿನಲ್ಲಿ ರಾಮಣ್ಣನೆಡೆಗಿದ್ದ ಪ್ರೀತಿ-ದ್ವೇಷಗಳಲ್ಲಿ ಪ್ರೀತಿಯೇ ಗೆದ್ದಿತು ಅನ್ನುವಷ್ಟರಲ್ಲಿ ಅಂದೇ ಆಗುವ ಅವರಿಬ್ಬರ ಮಗ ಮೋಹನನ ಆಕಸ್ಮಿಕ ಸಾವಿನೊಂದಿಗೆ ಕಾದಂಬರಿ ಅಂತ್ಯ ಕಾಣುತ್ತದೆ.

ಮಗ ಮೋಹನ ಹೋಲಿಕೆಯಲ್ಲಿ, ವಿಶೇಷವಾಗಿ ಮೋಹನನ ಕಣ್ಣುಗಳು, ನೋಟ ಸರಲೆಯನ್ನೇ ಹೋಲುತ್ತಿರುತ್ತವೆ ಎನ್ನುವುದು ಎರಡು ಮೂರು ಕಡೆಗಳಲ್ಲಿ ಈ ಕಾದಂಬರಿಯಲ್ಲಿ ಓದಲು ಸಿಗುತ್ತದೆ. ಅದನ್ನು ಆಧಾರವಾಗಿಟ್ಟುಕೊಂಡು ಯೋಚಿಸುವುದಾದರೆ ಮೋಹನನ ಸಾವು, ರಾಮಣ್ಣನ ಮನಸಿನೊಳಗಿನ ಸರಲೆಯ ಸಾವನ್ನು ಸೂಚಿಸುತ್ತದೆಯೇ ಎನ್ನುವ ಅನುಮಾನ ನನ್ನದು…




ಕುಮುದಳ ಅತ್ತೆ.

ಈ ಪಾತ್ರ ಪಕ್ಕಾ ಹೆಣ್ಣು ಮನಸಿನ ಕಾಂಪ್ರಾಮೈಜಿಂಗ್ ಗುಣವುಳ್ಳದ್ದು. ಗಂಡನಿಗೆ ಹೊರಗಿನದೊಂದು ಸಂಬಂಧವಿದೆಯಂದು ಗೊತ್ತಾದಾಗಲೂ, ಅದರ ಬಗ್ಗೆ ಎಷ್ಟೇ ಅಸಮಾಧಾನವಿದ್ದರೂ, ಕೊನೆಗೆ ಆಡಿ ಸೋತ ಮಗು ಮನೆಗೇ ಬರುವಂತೆ ತನ್ನ ಗಂಡ ತನ್ನಲ್ಲಿಗೇ ಬರುತ್ತಾನೆ ಎಂಬ ಸುಳ್ಳು ಸಮಾಧಾನವನ್ನು ತಂದುಕೊಂಡು, ಜೀವನದಲ್ಲಿ ಸಿಕ್ಕ ಸಣ್ಣಪುಟ್ಟ ಸಂತೋಷಗಳನ್ನೇ ಬದುಕಿಡೀ ಮೆಲುಕು ಹಾಕುತ್ತಾ ಬದುಕನ್ನು ಸಹ್ಯವಾಗಿಸಿಕೊಂಡು ಆಯಸ್ಸು ಸವೆಸಿದ ಜೀವ. ಕುಮುದ ತನ್ನಲ್ಲಿ ಬಂದಾಗಲೆಲ್ಲ ತನ್ನ ಬದುಕನ್ನು ಇಷ್ಟಿಷ್ಟೇ ಅವಳೆದುರು ತೆರೆದುಕೊಳ್ಳುತ್ತಾಳೆ.



****************************************************************************





ಕಾದಂಬರಿ - ‘ಗೌತಮನ ಶಾಪ’

ಗುಂಡಾಚಾರಿ ಈ ಕಾದಂಬರಿಯ ಮುಖ್ಯ ಪಾತ್ರ. ಆಸೆಗಳಿರುವ ಆದರೆ ಮಹತ್ವಾಕಾಂಕ್ಷಿಯಲ್ಲದ, ದುಷ್ಟನಲ್ಲದ, ಗಾಳಿ ಬಂದತ್ತ ತೂರಿಕೊಳ್ಳುತ್ತಾ, ಆಸರೆ ಸಿಕ್ಕಲ್ಲೆಲ್ಲ ಅನುಕೂಲ ಮಾಡಿಕೊಳ್ಳುತ್ತಾ, ಮದುವೆಗೆ ಮುಂಚೆ ಹೆಂಗಸರ ಸಹವಾಸ ಮಾಡಿ ಗೌತಮನ ಶಾಪ ಹೊತ್ತ ಇಂದ್ರನಂತಾದವನು. ಆದರೆ ಅದರ ಶಿಕ್ಷೆ ಮಾತ್ರ ಎಂಟು ಮಕ್ಕಳನ್ನು ಹೆತ್ತರೂ ಒಂದೇ ಮಗುವನ್ನು ಉಳಿಸಿಕೊಳ್ಳಲಾಗುವ ಅವನ ಹೆಂಡತಿ ಸುಂದರಕ್ಕನಿಗೆ. ಆ ಒಂದು ಮಗು ಸಹ ಬದುಕುಳಿಯುವುದು ಗುಂಡಾಚಾರಿ ತಾನು ವೈದ್ಯರಲ್ಲಿ ಚಿಕಿತ್ಸೆ ತೊಗೊಂಡ ಕಾರಣದಿಂದಾಗಿ.

ಈ ಕಾದಂಬರಿಯಲ್ಲಿ ಹಲವಾರು ಸ್ತ್ರೀ ಪಾತ್ರಗಳು ಬರುತ್ತವೆ. ಇಲ್ಲಿ ಬರುವ ಸ್ತ್ರೀ ಪಾತ್ರಗಳ್ಯಾವೂ ಹೆಚ್ಚು ಶಿಕ್ಷಣ ಪಡದವುಗಳಲ್ಲ. ಭಾಗಶಃ ಎಲ್ಲ ಸ್ವಭಾವದ ಸ್ತ್ರೀಯರೂ ಈ ಕಾದಂಬರಿಯಲ್ಲಿರುವುದೊಂದು ವಿಶೇಷ. ಜೊತೆಗೆ ಮನೆ ಹೊರಗೂ ದುಡಿಯುವ ಹೆಣ್ಣು ಪಾತ್ರಗಳೂ ಇವೆ. ‘ಅನಂತ-ಅನಾದಿ’ಯಲ್ಲಿಯ ಸ್ತ್ರೀ ಪಾತ್ರಗಳಂತೆ ಕೇವಲ ಮನೆಗೆ ಸೀಮಿತಗೊಂಡ ಪಾತ್ರಗಳಲ್ಲ ಇಲ್ಲಿನವು.



ಗುಂಡಾಚಾರಿಯ ತಾಯಿ.


ಈಕೆಗೊಂದು ಹೆಸರು ಕೊಡದೇ ಗುಂಡಾಚಾರಿಯ ತಾಯಿ ಎಂದೇ ಪ್ರಾಸ್ತಾವಿಸುತ್ತಾ ಹೋಗುತ್ತಾರೆ ಶ್ರೀರಂಗರು. ಲೋಲುಪ, ಫಟಿಂಗ ಗಂಡನನ್ನು ಅನ್ನಲೂ ಆಗದೇ ಆಡಲೂ ಆಗದೇ, ಮಾನಸಿಕವಾಗಿ ನೋವು ಅನುಭವಿಸುತ್ತಲೇ ಮಗನ ಭವಿಷ್ಯವನ್ನು ಚಿಂತಿಸುವ, ಅವನ ವಿದ್ಯೆಯತ್ತ, ಏಳಿಗೆಯತ್ತ ಗಮನ ಹರಿಸುವ ಜೀವ ಗುಂಡಾಚಾರಿಯ ತಾಯಿ. ಮಗನನ್ನು ಶಾಲೆಗೆ ಸೇರಿಸಲು ಆಸಕ್ತಿ ತೋರದ ಗಂಡನಿಗೆ ಹೇಳಿ ಸಾಕಾಗಿ ತಾನೇ ಶಾಲೆಗೆ ಕಳುಹಿಸುತ್ತಾಳೆ. ರಾತ್ರಿ ಮಲಗುವಾಗ ಮಗನಿಗೆ ರಾಮಾಯಣದ ಕತೆಯನ್ನು ಹೇಳುತ್ತಿರುತ್ತಾಳೆ. ಶಾಲೆಯಲ್ಲಿ ದೊಡ್ಡ ಹುಡುಗರ ಸಹವಾಸದಿಂದ ‘ಪ್ರೇಮ’ದ ಬಗ್ಗೆ ಕುತೂಹಲಗೊಂಡು, ಅದನ್ನು ತಿಳಿಯಲು ಉತ್ಸುಕನಾಗಿ, ಕೊನೆಗೊಮ್ಮೆ ತನ್ನ ತಂದೆಯದು ಇನ್ನ್ಯಾರೋ ಹೆಣ್ಣಿನ ಜೊತೆ ಪ್ರೇಮವಿದೆ ಮತ್ತು ಪ್ರೇಮವೆಂದರೆ ಏನು ಎಂದು ತಿಳಿದುಕೊಳ್ಳುತ್ತಾನೆ. ಅವನ ಅಮ್ಮ ಎಂದಿನಂತೆ ರಾತ್ರಿ ರಾಮಾಯಣದ ಕತೆ ಹೇಳುವಾಗ, “ದಶರಥನಿಗೆ ಹಿರಿ ಮಗನ ಮ್ಯಾಲೆ ಭಾಳ ಪ್ರೇಮ” ಎಂದಿದ್ದು ಕೇಳಿ, ತನಗೀಗ ಪ್ರೇಮವೆಂದರೇನು ಎಂದು ಅರ್ಥವಾಗಿದೆ ಎನ್ನುತ್ತಾ, ತನಗೆ ಗೆಳೆಯನಿಂದ ಗೊತ್ತಾದ ಪ್ರೇಮದ ಕುರಿತು ಹೇಳುತ್ತಾನೆ. ತಾಯಿ ಅವಕ್ಕಾಗುತ್ತಾಳೆ.

ಇದೇ ವಿಷಯದಲ್ಲಿ ತಂದೆ ತಾಯಿಯ ನಡುವೆ ಜಗಳವಾಗಿ, ತಂದೆ ತಾಯಿಯ ಮೇಲೆ ಕೈ ಎತ್ತಲು ಹೋದಾಗ ನಡುವೆ ಹೋಗಿ ಅಪ್ಪನಿಂದ ಪೆಟ್ಟು ತಿಂದು, ಮುಂದಿನ ಪೆಟ್ಟುಗಳಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿದ ಗುಂಡಾಚಾರಿ ಮತ್ತೆ ಮನೆಗೆ ಮರಳುವುದೇ ಇಲ್ಲ! ಮಗನ ಅಭ್ಯುದಯವನ್ನೇ ಜೀವನದ ಉದ್ದೇಶವಾಗಿಸಿಕೊಂಡಿದ್ದ ಗುಂಡಾಚಾರಿಯ ತಾಯಿಯ ಪಾತ್ರ ಇಲ್ಲಿಗೆ ಕೊನೆಗೊಳ್ಳುತ್ತದೆ.



ತುಳಸಾಬಾಯಿ.

ದೊಡ್ಡೂರ ದೇಶಪಾಂಡೆಯವರ ಹೆಂಡತಿ ತುಳಸಾಬಾಯಿ. ಮನೆಬಿಟ್ಟು ಓಡಿ ಬಂದ ಗುಂಡಾಚಾರಿಗೆ, ತಮ್ಮ ಎತ್ತಿನ ಗಾಡಿಯಿಂದ ಅಕಸ್ಮಾತ್ತಾಗಿ ಕೆಳಗೆ ಬಿದ್ದಿದ್ದ ಆಭರಣದ ಪೆಟ್ಟಿಗೆಯನ್ನು ತಂದು ಕೊಟ್ಟ, ತಾನು ಅನಾಥ ಎಂದು ಹೇಳಿಕೊಂಡ ಹುಡುಗ ಗುಂಡಾಚಾರಿಯನ್ನು ಮನೆಯಲ್ಲಿಟ್ಟುಕೊಂಡು ಸಾಕಲು ಗಂಡನೆದುರು ಇಲ್ಲವೆನ್ನಲಾಗದೇ ಒತ್ತಾಯದಿಂದ ಒಪ್ಪಿಕೊಂಡಾಕೆ. ಮಾತು ಬಲ್ಲಾಕೆ. ಅಷ್ಟೇನು ವಾತ್ಸಲ್ಯಮಯಿ ಅಲ್ಲದ ಈಕೆ ಇರಲು ಮಾತ್ರ ಜಾಗ ಕೊಡೋಣ, ಊಟಕ್ಕಾದರೆ ಅವನು ನಾಲ್ಕಾರು ಮನೆ ‘ಮಧುಕರಿ’ಗೆ, ‘ವಾರದನ್ನ’ಕ್ಕೆ ಹೋಗಲಿ ಎನ್ನುತ್ತಾಳೆ. ಆದರೆ ಇರಲು ಆಶ್ರಯ ಕೊಟ್ಟಿದ್ದಕ್ಕೆ ಪ್ರತಿಯಾಗಿ ಗುಂಡಾಚಾರಿಯಿಂದ ಮನೆಗೆಲಸಗಳನ್ನು ಮಾಡಿಸಿಕೊಳ್ಳುತ್ತಿರುತ್ತಾಳೆ. ತಾವು ಗುಂಡಾಚಾರಿಗೆ ತೋರುತ್ತಿರುವ ಔದಾರ್ಯವನ್ನು ಊರ ಹೆಣ್ಣುಮಕ್ಕಳ ಮುಂದೆಲ್ಲ ಬಣ್ಣಿಸಿ ಹೇಳಿಕೊಳ್ಳುವ ತುಳಸಾಬಾಯಿ ದೊಡ್ಡಸ್ಥಿಕೆಯ ಬಡಿವಾರದ ಹೆಣ್ಣು. ತಾನು ತನ್ನ ಸಂಸಾರ ಅಷ್ಟನ್ನೇ ಯೋಚಿಸುವವಳು. ಮಗಳು ಕಮಲೆಯ ವಿಷಯ ಬಂದಾಗ ಮಾತ್ರ ಪಕ್ಕಾ ಮಾತೃಹೃದಯ. ಗಂಡಸರು ವಿದ್ಯೆ ಕಲಿಯುವುದೇ ಹೆಚ್ಚಿನ ವಿಷಯವಾಗಿದ್ದ ಆ ಕಾಲದಲ್ಲಿ, ಮಗಳ ವಿದ್ಯೆಗಾಗಿ ಮನೆ ಪಾಠಕ್ಕೆ ಮೇಷ್ಟ್ರನ್ನು ನಿಯಮಿಸಲು ಸಮ್ಮತಿಸುವಂಥಾಕೆ. ಮನೆಯಲ್ಲಿರುವ ಮಗಳ ಓರಿಗೆಯ ಗುಂಡಾಚಾರಿಯ ಜೊತೆ ಮಗಳು ಹೆಚ್ಚು ಸಲುಗೆ ಬೆಳಸಿದರೆ ವಯೋಸಹಜವಾಗಿ ಅವರಿಬ್ಬರ ನಡುವೆ ಎಲ್ಲಿ ಪ್ರೀತಿ ಮೂಡಿಬಿಡುವಿದೋ, ಏನಾದರೂ ಎಡವಟ್ಟಾಗುವುದೋ ಎಂದು ಮಾತೃಸಹಜ ಎಚ್ಚರಿಕೆಯಲ್ಲಿರುವಂಥ ಹೆಣ್ಣು ಪಾತ್ರ ತುಳಸಾಬಾಯಿಯದು.



ಕಮಲೆ.

ಮನೆ ಬಿಟ್ಟು ಓಡಿ ಬಂದ ಗುಂಡಾಚಾರಿಗೆ ಶುರುವಿನಲ್ಲಿ ಆಶ್ರಯವಿತ್ತ ದೊಡ್ಡೂರ ದೇಶಪಾಂಡೆ ದಂಪತಿಗಳ ಮಗಳು ಕಮಲಾ. ವಿದ್ಯೆ ಬುದ್ದಿಯಲ್ಲಿ ಚುರುಕಾದ, ವಾತ್ಸಲ್ಯಮಯಿ ಹುಡುಗಿ. ತಮ್ಮ ಮನೆಯಲ್ಲಿದ್ದುಕೊಂಡು ಓದುತ್ತಿರುವ ಗುಂಡಣ್ಣನ ಜೊತೆಗೆ ವಿನೋದವಾಗಿ, ಕೀಟಲೆ ಮಾಡಿಕೊಂಡು ಸ್ನೇಹದಿಂದ ಇದ್ದರೂ ಸ್ನೇಹ ಕೆಡದಂತೆ ನಡೆದುಕೊಳ್ಳುವ ಹುಡುಗಿ. ಗುಂಡಣ್ಣನೂ ಅಷ್ಟೇ, ಮಿತಿಮೀರಿ ಎಂದೂ ಆಕೆಯ ಜೊತೆ ನಡೆದುಕೊಳ್ಳುವುದಿಲ್ಲ. ಓದಿನಲ್ಲಿ ಚುರುಕಾಗಿದ್ದ, ಬೆಳ್ಳಗೆ ನೋಡಲು ಲಕ್ಷಣವಾಗಿದ್ದ ಗುಂಡಾಚಾರಿಗೇ ಕಮಲೆಯನ್ನು ದೇಶಪಾಂಡೆಯವರು ಮದುವೆ ಮಾಡಿಕೊಡಬಹುದು, ತುಂಬಾ ಯೋಗ್ಯವಾದ ಜೋಡಿ ಎಂದು ಊರ ಜನ ಊಹೆ ಮಾಡಿಕೊಳ್ಳುತ್ತಾರೆ. ಆದರೆ ಹಾಗಾಗುವುದಿಲ್ಲ.



‘ವಾರದ ಮನೆ’ಯ ಯಜಮಾನಿ.

ಗುಂಡಣ್ಣ (ಗುಂಡಾಚಾರಿ)ನಿಗೆ ವಾರದನ್ನ ಬಡಿಸುವ ಮನೆಗಳಲ್ಲಿ ಈಕೆಯ ಮನೆಯೂ ಒಂದು. ಮಕ್ಕಳಿಲ್ಲದಾಕೆ. ಒಮ್ಮೆ ಗುಂಡಣ್ಣನ್ನು ವಿಶೇಷವಾಗಿ ಸಂಜೆ ಹೊತ್ತಲ್ಲಿ ಊಟಕ್ಕೆ ಕರೆಯುತ್ತಾಳೆ. ಗುಂಡಣ್ಣನಿಗೆ ಆಶ್ಚರ್ಯವಾದರೂ ಮಕ್ಕಳಿಲ್ಲದವರು ಅನ್ಯ ಮಕ್ಕಳಿಗೆ ವಿಶೇಷ ಪ್ರೀತಿಯಿಂದ ಊಟ ಬಡಿಸಿದರೆ ಮಕ್ಕಳಾಗುತ್ತವೆ ಅನ್ನುವ ನಂಬಿಕೆ ಹಳ್ಳಿಯಲ್ಲಿರುವುದರಿಂದ ತನ್ನನ್ನು ಆಕೆ ಸಂಜೆ ಹೊತ್ತಲ್ಲಿ ಊಟಕ್ಕೆ ಕರೆದಿರಬಹುದು ಎಂದುಕೊಂಡು ಅವಳ ಮನೆಗೆ ಹೋಗುತ್ತಾನೆ. ಅಲ್ಲಿ ಹೋದ ಮೇಲೆ, ಅವಳ ಗಂಡನ ಗೈರು ಹಾಜರಿಯಲ್ಲಿ ಸುಗ್ರಾಸ ಭೋಜನವೂ ವಿಶೇಷ ಪ್ರೀತಿಯಿಂದಲೇ ಬಡಿಸಲ್ಪಡುತ್ತದೆ. ನಂತರ ಮಾತ್ರ ಗುಂಡಣ್ಣನನ್ನು ಮನೆಯಾಚೆ ಹೋಗಗೊಡದೇ, ತಪ್ಪಿಸಿಕೊಂಡು ಹೋಗಲು ನೋಡಿದರೆ ಕೂಗಿ ಗಲಾಟೆ ಮಾಡುವುದಾಗಿ ಹೆದರಿಸಿ, ಹದಿನಾಲ್ಕರ ಹರೆಯದ ಗುಂಡಣ್ಣನ ಮೇಲೆ ಅತ್ಯಾಚಾರವೆಸಗುತ್ತಾಳೆ ಆ ‘ವಾರದ ಮನೆ’ಯ ಯಜಮಾನಿ. ಇದನ್ನು ಓದಿದಾಗ ಆ ಹೆಣ್ಣಿನ ಬಗ್ಗೆ ಅದೆಂಥ ತಿರಸ್ಕಾರ ಮೂಡುತ್ತದೆಂದರೆ, ಹೆಣ್ಣೆಂದರೆ ವಾತ್ಸಲ್ಯಮಯಿ, ಮಾತೃಹೃದಯಿ, ಘಟವಾಣಿ, ಕೆಟ್ಟ ಸ್ವಭಾವದ ಅತ್ತೆ, ಕೆಟ್ಟ ಸ್ವಭಾವದ ಸೊಸೆ, ಎಂದಷ್ಟೇ ಕೇಳಿ ಕೇಳಿ ಓದಿ ಅಭ್ಯಾಸವಾದ ಮನಸಲ್ಲಿ ಹೊಲಸು ತುಳಿದಂಥ ಹೇಸಿಗೆ, ತಿರಸ್ಕಾರ ಮೂಡುತ್ತದೆ. ಇಂಥ ಹೆಂಗಸರೂ ಇರುತ್ತಾರೆ ಎನ್ನುವುದೂ ಅಲ್ಲಗಳೆಯಲಾಗದ ವಾಸ್ತವದ ಒಂದು ಮುಖ. ಇದರಿಂದ ಆಘಾತಗೊಂಡ ಗುಂಡಣ್ಣ ಆಶ್ರಯ ಕೊಟ್ಟ ದೇಶಪಾಂಡೆಯವರ ಮನೆಗೂ ಹೋಗದೆ, ಆ ಊರನ್ನೇ ತೊರೆಯುತ್ತಾನೆ.



ಬ್ರಾಹ್ಮಣತಿ.

ವಾರದ ಮನೆಯ ಯಜಮಾನಿಯ ಮನೆಯಿಂದ ಓಡುತ್ತಲೇ ಊರು ಬಿಟ್ಟ ಗುಂಡಣ್ಣ ಮುಂದೊಂದೂರಲ್ಲಿ ಆಯಾಸವಾಗಿ ಎಚ್ಚರತಪ್ಪಿ ಬೀಳುತ್ತಾನೆ. ಎಚ್ಚರಗೊಂಡ ಮೇಲೆ ವಿಪರೀತ ಬಾಯಾರಿದ ಗುಂಡಣ್ಣನ್ನು ಮನೆಯೊಳಗೆ ಕರೆದು ಉಪಚರಿಸುವವಳೇ ಈ ಬ್ರಾಹ್ಮಣತಿ. ಭಾರತದ ಧ್ಯೇಯವಾಕ್ಯವಾದ ‘ಅತಿಥಿ ದೇವೋಭವ’ವನ್ನು ಅಕ್ಷರಶಃ ಪಾಲಿಸುವ, ಮಕ್ಕಳಿಲ್ಲದ ಬಡ ವೈದ್ಯ ಬ್ರಾಹ್ಮಣ ದಂಪತಿಗಳು. ಪರಿಚಿತನಲ್ಲದ, ನೆಂಟರವನಲ್ಲದ ಗುಂಡಣ್ಣನನ್ನು ತಮ್ಮ ಮನೆಯಲ್ಲಿರುವ ತನಕ ತಿಂಗಳುಗಟ್ಟಲೆ ಮಗನಂತೇ ನೋಡಿಕೊಂಡ ನಿಸ್ವಾರ್ಥ ಮಮತಾಮಯಿ ಈಕೆ. ತಾನಾಗಿಯೇ ಹೊರಡುವೆನೆಂದು ಗುಂಡಾಚಾರಿ ಹೇಳುವ ತನಕ ಅದನ್ನು ಕೇಳುವ ಗೋಜಿಗೇ ಹೋಗದಂಥ ವಿಶಾಲ ಮನಸಿನವರು ಈ ದಂಪತಿಗಳು. ಇಲ್ಲಿ ಮಾತ್ರ ಗಂಡನನ್ನು ಹೊರತುಪಡಿಸಿ ಬರೀ ಹೆಂಡತಿಯ ಕುರಿತು ಹೇಳಲು ನನಗೆ ಸಾಧ್ಯವಾಗುತ್ತಲೇ ಇಲ್ಲ! ಜೀವನದಲ್ಲಿ ಹಾಸುಕೊಕ್ಕಾಗಿಸಿಕೊಂಡ ಆದರ್ಶದ ಅಷ್ಟೊಂದು ಸಾಮ್ಯತೆ ಇಬ್ಬರಲ್ಲೂ ಕಾಣುವುದು ಇದಕ್ಕೆ ಕಾರಣವಾಗಿರಬಹುದು. ಇವರಿಬ್ಬರಲ್ಲಿ ತಂದೆ ತಾಯಿಯನ್ನು ಕಾಣುವ ಗುಂಡಾಚಾರಿ ಇವರಿಬ್ಬರ ವಾತ್ಸಲ್ಯವನ್ನು ದುರುಪಯೋಗಪಡಿಸಿಕೊಳ್ಳಲು ಮನಸು ಮಾಡದೇ, ಅವರಿಗೆ ಇನ್ನು ಹೆಚ್ಚು ದಿನ ಹೊರೆಯಾಗುವುದು ಸರಿಯಲ್ಲ ಎನಿಸಿ ಅಲ್ಲಿಂದ ಹೊರಟು ನಿಲ್ಲುತ್ತಾನೆ. ವೈದ್ಯ ಬ್ರಾಹ್ಮಣ ತಾನೇ ತೆಗೆದ ನೂಲಿನಿಂದ ಮಾಡಿದ, ಅಗಲವಾದ ಜೋಡು ಪಂಚೆಗಳನ್ನು ಉಡುಗೊರೆಯಾಗಿ, ದಕ್ಷಿಣೆಯಾಗಿ ಎಂಟಾಣೆಯನ್ನು ಗುಂಡಾಚಾರಿಗೆ ನೀಡಿದರೆ, ಆ ತಾಯಿ ದಾರಿಗೆ ಬುತ್ತಿ ತಯಾರಿಸಿ, ದಾರಿ ಮದ್ಯದಲ್ಲಿ ಬಾಯಾರಿಕೆಗೆ ಆಸರೆಯಾಗಲೆಂದು, ಹಸನಾಗಿ ಬೆಳಗಿದ ಹಿತ್ತಾಳೆ ತಿರುಗುಣಿ ತಂಬಿಗೆಯಲ್ಲಿ ನೀರು ತುಂಬಿಕೊಡುತ್ತಾಳೆ. ಮುಂದೆ ಯುದ್ಧದ ನಂತರ ಎಲ್ಲೆಡೆ ಹರಡಿದ ಇನ್‍ಫ್ಲೂಯೆಂಜಾ ಈ ಸಾದ್ವಿಯನ್ನು ಬಲಿ ತೆಗೆದುಕೊಳ್ಳುತ್ತದೆ…

ಈ ದಂಪತಿಗಳ ಬಗ್ಗೆ ಓದುವಾಗ ಮನಸಲಿ ಅದೆಂಥಾ ಧನ್ಯತೆ ತುಂಬಿಕೊಳ್ಳುತ್ತದೆಂದರೆ, ಇಂಥವರ ಸಂತತಿ ಸಾವಿರವಾಗಲಿ ಎಂದು ಮನತುಂಬಿ ಹಾರೈಸುವಷ್ಟು!



ಚಾಹಾದ ಅಂಗಡಿಯವನ ಹೆಂಡತಿ.

ಜಂಭದ ಹೆಂಗಸು. ತನ್ನ ಕೈಕೆಳಗೆ ಕೆಲಸ ಮಾಡುವ ಹುಡುಗರನ್ನು ಮುಲಾಜಿಲ್ಲದೆ ಹೊಡೆದು ಬಡೆದು ಮಾಡುವ ಕಟು ಹೆಂಗಸು. ವೈದ್ಯ ಬ್ರಾಹ್ಮಣರಿಂದ ಬೀಳ್ಕೊಂಡು, ಪೇಟೆಯೂರಿಗೆ ಬರುವ ಗುಂಡಾಚಾರಿ, ಊಟಕ್ಕೆಂದು ಸಣ್ಣ ಚಹಾದ ಅಂಗಡಿ ಹೊಕ್ಕವನು, ಊಟದ ಸಂಪೂರ್ಣ ಹಣವನ್ನು ನೀಡಲಾಗದೆ ಅಲ್ಲಿಯೇ ಕೆಲಸ ಮಾಡುತ್ತಾ ಚಹಾದ ಅಂಗಡಿಯ ಸಾವ್ಕಾರನ ನಂಬಿಕೆ ಗಳಿಸಿಕೊಂಡವನು, ಮುಂದೆ ಸಾವ್ಕಾರ ಈ ಹೆಣ್ಣನ್ನು ಮದುವೆಯಾಗಿ ಕರೆತಂದು, ಅವಳನ್ನು ಹೋಟೆಲ್ಲಿನ ಅಡುಗೆ ಮನೆಯನ್ನು ನೋಡಿಕೊಳ್ಳಲು ಬಿಡುತ್ತಾನೆ. ಇವಳ ದೌರ್ಜನ್ಯಕ್ಕೆ ಉಪಾಯವೆಂಬಂತೆ ಗುಂಡಾಚಾರಿ ಇವಳನ್ನು ಒಲಿಸಿಕೊಂಡುಬಿಡುತ್ತಾನೆ! ಕಾಲಾನಂತರ ಸಾವ್ಕಾರನಿಗೆ ವಿಷಯ ತಿಳಿದು ಗುಂಡಾಚಾರಿಯನ್ನು ಕೆಲಸದಿಂದ ತೆಗೆದು ಹಾಕುತ್ತಾನೆ.



ಸುಗುಣಾಬಾಯಿ.

ಈಕೆ ಖಾನಾವಳಿಯೊಂದರ ಒಡತಿ. ಒಂಟಿ ಹೆಂಗಸು. ಗಂಡಸರ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು, ಕೊರಳಲ್ಲಿ ತಾಳಿ ಧರಿಸಿ, ತನ್ನ ಗಂಡ ಸೈನ್ಯದಲ್ಲಿದ್ದಾನೆ, ಸಮುದ್ರದಾಚೆ ಯುದ್ಧಕ್ಕೆ ಹೋಗಿದ್ದಾನೆ, ಅವನು ಮರಳಿ ಬರುವವರೆಗೂ ತಾನು ಹೊತ್ತು ಕಳೆಯಲು ಖಾನಾವಳಿ ತೆರೆದು, ಸೈನ್ಯಕ್ಕೆ ಸೇರುವವರಿಗೆ ಈ ಮೂಲಕ ಸಹಾಯ ಮಾಡುವ ಸತ್ಕಾರ್ಯವನ್ನು ಮಾಡುತ್ತಿರುವೆಂದು ತನ್ನ ಖಾನಾವಳಿಗೆ ಊಟಕ್ಕೆ ಬರುವ ಪ್ರತಿಯೊಬ್ಬ ಗಿರಾಕಿಯ ಬಳಿಯೂ ಹೇಳಿಕೊಳ್ಳುತ್ತಿರುತ್ತಾಳೆ. ನಮ್ಮ ಸಮಾಜದಲ್ಲಿ ಹೆಣ್ಣು ಒಂಟಿಯಾಗಿ ಬದುಕಬೇಕೆಂದರೆ ಎಷ್ಟೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎನ್ನುವುದಕ್ಕೆ ಸುಗುಣಾಬಾಯಿಯ ಈ ತಂತ್ರವೇ ಸಾಕ್ಷಿ.

ಚಹಾದ ಅಂಗಡಿಯ ಕೆಲಸ ಕೆಲಸ ಕಳೆದುಕೊಂಡು ಕೆಲಸ ಅರಸುತ್ತಾ ಬರುವ ಗುಂಡಾಚಾರಿಗೆ ಸುಗುಣಾಬಾಯಿಯ ಖಾನಾವಳಿ ಕಣ್ಣಿಗೆ ಬೀಳುತ್ತದೆ. ಗುಂಡಾಚಾರಿ ಗಂಡಸೆಂಬ ಕಾರಣಕ್ಕೆ ಕೆಲಸ ಕೊಡಲು ನಿರಾಕರಿಸುವ ಸುಗುಣಾಬಾಯಿಯನ್ನು ಗುಂಡಾಚಾರಿ ಇನ್ನಿಲ್ಲದಂತೆ ಬೇಡಿಕೊಂಡು ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ನಿಯತ್ತಾಗಿ ಕೆಲಸ ಮಾಡಿ ಅವಳ ನಂಬಿಕೆ ಗಳಿಸುತ್ತಾನೆ. ಮುಂದೆ ಅವರಿಬ್ಬರ ಸಖ್ಯವೂ ಬೆಳೆಯುತ್ತದೆ. ನಿಜವಾಗಿಯೂ ಆಕೆಗೊಬ್ಬ ಗಂಡ ಇದ್ದಾನೋ ಇಲ್ಲವೋ ಎನ್ನುವುದು ಯಾರಿಗೂ ತಿಳಿಯುದೇ ಇಲ್ಲ. ಯುದ್ಧದ ನಂತರ ಎಲ್ಲೆಡೆ ಹರಡಿದ ಇನ್‍ಫ್ಲೂಯೆಂಜಾ ರೋಗ ಸುಗುಣಾಬಾಯಿಯನ್ನು ಬಲಿ ತೆಗೆದುಕೊಳ್ಳುತ್ತದೆ. ಸಾಯುವ ಮೊದಲು, ತನ್ನೆಲ್ಲ ಆಸ್ತಿ ಗುಂಡಾಚಾರಿಗೆ ಸೇರಬೇಕು ಎಂದು ಸ್ವಸಂತೋಷದಿಂದ ಬರೆದಿರುವುದಾಗಿ ಸಂದೇಶಪತ್ರ ಬಿಟ್ಟಿರುತ್ತಾಳೆ. ಅದರಿಂದಾಗಿ ಗಂಡನ ಕುರಿತು ಆಕೆ ಕತೆ ಕಟ್ಟಿದ್ದು ಗೊತ್ತಾಗುತ್ತದೆ.




ಸುಂದರಕ್ಕ.

ಗುಂಡಾಚಾರಿಯನ್ನು ಮನೆಯಲ್ಲಿಟ್ಟುಕೊಂಡು ಉಪಚರಿಸಿ, ಉಪಕರಿಸಿದ್ದ ವೈದ್ಯ ದಂಪತಿಯ ಸಂಬಂಧಿ. ಆ ಬ್ರಾಹ್ಮಣತಿಯ ತಂಗಿಯ ಮಗಳು. ಸುಂದರಕ್ಕ ಏಳೆಂಟು ವರ್ಷದವಳಾಗಿದ್ದಾಗಲೇ ಅವಳ ತಾಯಿ ಖಾಯಿಲೆಯಿಂದಾಗಿ ತೀರಿಕೊಂಡು, ತಂದೆ ಇನ್ನೊಂದು ಮದುವೆ ಮಾಡಿಕೊಳ್ಳುತ್ತಾನೆ. ಆಕೆ ಸುಂದರಕ್ಕನನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ತಾಯ ಮಮತೆಯ ಹಂಬಲದ ಸುಂದರಕ್ಕನಿಗೆ, ತನ್ನ ಮದುವೆಯಾದ ಮೇಲೆ ತನ್ನ ಮಕ್ಕಳನ್ನು ತುಂಬಾ ಅಕ್ಕರೆಯಿಂದ ಬೆಳೆಸಬೇಕು ಎಂಬ ಆಕಾಂಕ್ಷೆ ಬಲವಾಗುತ್ತದೆ. ಈ ಮಗುವಿನ ಕಷ್ಟ ನೋಡಲಾಗದೆ ವೈದ್ಯ ದಂಪತಿಗಳು ತಮ್ಮ ಮನೆಯಲ್ಲಿ ತಂದಿಟ್ಟುಕೊಳ್ಳುತ್ತಾರೆ. ಸುಂದರಕ್ಕನ ದೊಡ್ಡಮ್ಮನೂ ತೀರಿಕೊಂಡ ಮೇಲೆ, ಹತ್ತು ವರುಷದ ಸುಂದರಕ್ಕನನ್ನು ಕರೆದುಕೊಂಡು ಊರು ತೊರೆದ ವೈದ್ಯ ಬ್ರಾಹ್ಮಣ ಪೇಟೆಯೂರಿಗೆ ಬರುತ್ತಾನೆ. ಅಲ್ಲಿ ಗುಂಡಾಚಾರಿ ಸಿಕ್ಕು, ಎಲ್ಲ ವಿಚಾರವೂ ತಿಳಿದ ನಂತರ, ವೈದ್ಯ ದಂಪತಿಗಳ ಋಣ ತೀರಿಸಲು ಇದೊಂದು ಅವಕಾಶವೆಂದು ಭಾವಿಸಿದ ಗುಂಡಾಚಾರಿ, ಸುಂದರಕ್ಕನನ್ನು ಮದುವೆಯಾಗುವುದಾಗಿ ಹೇಳುತ್ತಾನೆ. ಗುಂಡಾಚಾರಿಯ ಬಗ್ಗೆ ಸದಭಿಪ್ರಾಯವಿದ್ದ ವೈದ್ಯ, ಗುಂಡಾಚಾರಿ ಮತ್ತು ಸುಂದರಕ್ಕನ ನಡುವೆ ವಯಸ್ಸಿನ ಅಂತರವಿದ್ದರೂ ಸಂತೋಷದಿಂದ ಧಾರೆ ಎರೆದುಕೊಡುತ್ತಾನೆ.

ಮದುವೆಯಾದರೂ ಗಂಡನ ದೃಷಿಯಲ್ಲಿ ಸುಂದರಕ್ಕ ಇನ್ನೂ ಆಟವಾಡಿಕೊಂಡಿರಬೇಕಾದ ಮಗು. ಅವಳನ್ನು ಹಾಗೆಯೇ ನೋಡಿಕೊಳ್ಳುತ್ತಾನೆ. ತನ್ನ ಬಾಲ್ಯವನ್ನು ಮತ್ತೆ ಸಂಭ್ರಮಿಸುತ್ತಾಳೆ ಸುಂದರಕ್ಕ. ಹರೆಯಕ್ಕೆ ಕಾಲಿಡುತ್ತಿರುವಂತೆಯೆ, ಸುಂದರಕ್ಕನ ಮಕ್ಕಳಿಗೆ ಅಕ್ಕರೆ ಉಣಬಡಿಸುವ ಕನಸು ಮತ್ತಷ್ಟು ಚಿಗುರೊಡೆಯುತ್ತದೆ. ಬಾಲಕಿ ಸುಂದರಕ್ಕ ಗೃಹಿಣಿಯಾಗುತ್ತಾಳೆ. ಆದರೆ ವಿಧಿ ಇಲ್ಲೂ ಅವಳ ಜೊತೆ ಆಟವಾಡುತ್ತದೆ. ಒಡಲಲ್ಲಿ ಮೂಡುವ ಮಕ್ಕಳ್ಯಾವೂ ಮುದ್ದಿಸಲು ದಕ್ಕುವುದೇ ಇಲ್ಲ! ಸುಂದರಕ್ಕನಿಗೆ ಚಿಕಿತ್ಸೆ ಕೊಡಿಸಲೆಂದು ಡಾಕ್ಟರಲ್ಲಿಗೆ ಕರೆದುಕೊಂಡು ಹೋದ ಗುಂಡಾಚಾರಿ ಅವಳಲ್ಲಿ ಯಾವ ದೋಷವೂ ಇಲ್ಲವೆಂದು ತಿಳಿದ ಮೇಲೆ ತಾನು ತಪಾಸಣೆಗೊಳಪಡಲು ಮುಂದಾಗುತ್ತಾನೆ. ತಪಾಸಣೆಯಿಂದ ತನಗೆ ಗುಪ್ತ ಖಾಯಿಲೆ ಇರುವುದು ಗೊತ್ತಾಗಿ, ಅದಕ್ಕೆ ಚಿಕಿತ್ಸೆ ಪಡೆದುಕೊಂಡ ಮೇಲೆ, ಸುಂದರಕ್ಕನ ಆಗಿನ ಮಗು ದುರ್ಬಲವಾಗಿದ್ದರೂ ಬದುಕುಳಿಯುತ್ತದೆ. ಎಂಟು ಮಕ್ಕಳಲ್ಲಿ ಉಳಿದ ಈ ಒಬ್ಬ ಮಗನ ಮೇಲೆ ತನ್ನೆಲ್ಲ ಅಕ್ಕರೆಯನ್ನು ಸುರಿದುಬಿಡುತ್ತಾಳೆ. ಸಾಮರಸ್ಯದ ದಾಂಪತ್ಯ ಹೊಂದಿದ ಸಂತೃಪ್ತ ಹೆಣ್ಣು ಸುಂದರಕ್ಕ.


- ಜಯಲಕ್ಷ್ಮೀ ಪಾಟೀಲ್.
*******************************************************************************

(* ೨೦೧೩ರಲ್ಲಿ ಬರೆದ ಲೇಖನವಿದು. ಏನೇನೋ ಕಾರಣಗಳಿಂದಾಗಿ ವೆಂಕಟಸುಬ್ಬಯ್ಯನವರಿಗೆ ಪುಸ್ತಕವನ್ನು ಇನ್ನೂ  ಹೊರತರಲಾಗಿಲ್ಲ. ಇದನ್ನು ಮತ್ತೆ ಓದಿದಾಗ ಅರೆ, ಹೀಗಲ್ಲದೆ ನಾನು ಬೇರೆ ರೀತಿಯಲ್ಲಿ ಬರೆಯಬಹುದಿತ್ತು ಅನಿಸಿ ಆ ಕಾದಂಬರಿಗಳ ಸಂಕಲನವನ್ನು ಕಳುಹಿಸಿ ಕೊಡುವಂತೆ ವೆಂಕಟಸುಬ್ಬಯ್ಯನವರಲ್ಲಿ ಕೋರಿಕೊಂಡೆ. ಅವರೂ ಒಪ್ಪಿಕೊಂಡರಾದರೂ ಅವರದೇ ಆದ ಅನಿವಾರ್ಯತೆಗಳು, ಅನಾರೋಗ್ಯದಿಂದಾಗಿ ಪುಸ್ತಕವನ್ನು ನನಗೆ ಕಳುಹಿಸಿ ಕೊಡಲಾಗಲಿಲ್ಲ...  ಹೀಗಾಗಿ ಹುಂಬತನದಿಂದ ಅಂದಾಜಿನಲ್ಲಿ ಈ ಬರಹವನ್ನು ಬದಲಾಯಿಸುವ ಬದಲಿಗೆ ಸುಮ್ಮನಿರುವುದು ಲೇಸು ಅನಿಸಿತು. ಅಕಸ್ಮಾತ್ ಮುಂದೊಮ್ಮೆ ನನ್ನ ಕೈಗೆ ಆ ಸಂಕಲನ ಅಥವಾ ಈ ಎರಡು ಕಾದಂಬರಿಗಳು ಸಿಕ್ಕಿದ್ದೇ ಆದರೆ ಖಂಡಿತ ಈ ಲೇಖನವನ್ನು ತಿದ್ದುವ ಆಸೆ ಇದೆ ನನಗೆ. 
ಈ ಮೂಲಕ ಶ್ರೀರಂಗರ ಕಾದಂಬರಿಗಳ ಓದಿಗೆ ಕಾರಣರಾದ ಡಾ. ವಿಜಯಾ (ವಿಜಯಮ್ಮ) ಅವರಿಗೆ ನನ್ನ ಮನದಾಳದ ಕೃತಜ್ಞತೆಗಳು.)

Tuesday, November 8, 2016

ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಹೋದಂತೆ

ಇದು ಇಂದಿನ ಪ್ರಜಾವಾಣಿಯ ‘ಮೆಟ್ರೊ’ ಪುರವಣಿಯಲ್ಲಿನ, ಜನದನಿಯ ಕಿರುಚಿತ್ರದ ಬಗೆಗಿನ ಬರಹವಾದರೂ ನನ್ನ ಒಡಲ ಕುಡಿ ಅಮೋಲ್ ಪಾಟೀಲ್’ ಸಹ ಬರಹದಲ್ಲಿ ಒಡಮೂಡಿದ್ದು ಕಂಡು ಸಂತಸದ ಕಡಲು ಈ ಮಡಿಲು. ಹೀಗೆ ನಿನ್ನ ಕೆಲಸಗಳಿಂದಲೆ ಗುರುತಿಸುವಂತೆ ಎತ್ತರೆತ್ತರಕ್ಕೆ ಬೆಳೆ ಕೂಸೆ.



Friday, November 4, 2016

ಹೃಸ್ವಕತೆ - ಕನ್ನಡಪ್ರಭ

http://www.kannadaprabha.com/rajyotsava/articles/tiny-tales-in-kannada/262670.html#.VjnrS7vWsd8.facebook

ಹೃಸ್ವಕತೆ-ಕನಿಷ್ಟ ಸಾಲುಗಳಲ್ಲಿ ಗರಿಷ್ಟವಾದುದನ್ನು ಹೇಳುವ ಬಗೆ!

tiny tales
ಹೃಸ್ವಕತೆ

1) ಮಾರಾಟಕ್ಕಿದೆ: ಬಳಸಿಯೇ ಇಲ್ಲದ ಮಗುವಿನ ಪಾದರಕ್ಷೆ. 
– ಅರ್ನೆಸ್ಟ್ ಹೇಮಿಂಗ್ವೇ [ಅಮೇರಿಕಾದ ಖ್ಯಾತ ಕತೆಗಾರ, ಪತ್ರಕರ್ತ)
(For sale: baby shoes, never worn. – Ernest Hemingway) 
2)  ಡೈನಾಸರ್: ಅವನು ನಿದ್ದೆಯಿಂದೆದ್ದಾಗ ಆ ಡೈನಾಸರ್ ಇನ್ನೂ ಅಲ್ಲಿಯೇ ಇತ್ತು. 
- ಅಗಸ್ತೊ ಮಾಂಟರ್ರೊಸೊ [ಗ್ವಾಟಾಮಾಲೆನ್ ದೇಶದ ಖ್ಯಾತ ಸ್ಪ್ಯಾನಿಶ್ ಕತೆಗಾರ] 
(The Dinosaur: When he woke up, the dinosaur was still there. – Augusto Monterroso)
ಈ ಎರಡು ಜಗತ್ತಿನ ಅತಿ ಸಣ್ಣ ಕತೆಗಳನ್ನು ಎಸ್. ದಿವಾಕರ್ ಸರ್ (ಖ್ಯಾತ ವಿಮರ್ಶಕ, ಕತೆಗಾರ) ನಮಗೆಲ್ಲ ‘ಈ ಹೊತ್ತಿಗೆ’ಯ ಚರ್ಚೆಯವೊಂದರಲ್ಲಿ ಹೇಳುತ್ತಾ ಅವುಗಳು ಜಗತ್ತಿನಾದ್ಯಂತ ಚರ್ಚೆಯಾದ ಬಗೆಯನ್ನು ವಿವರಿಸುತ್ತಿದ್ದರೆ ಅದನ್ನು ಕೇಳುತ್ತಿದ್ದ ನನ್ನ ಮೈ ನವಿರೆದ್ದಿತ್ತು! ಅಲ್ಲಿದ್ದ ಉಳಿದವರ ಸ್ಥಿತಿಯೂ ನನಗಿಂತ ಭಿನ್ನವಾಗಿರಲಿಲ್ಲ. ಜಗತ್ತಿನಾದ್ಯಾಂತ ತುಂಬಾ ಪ್ರಸಿದ್ಧಿ ಹೊಂದಿದ್ದು ಡೈನಾಸರ್ ಕತೆಯಾದರೂ (ಈ ಒಂದು ಸಾಲಿನ ಕತೆಗೆ ಮುನ್ನೂರು ಪುಟದ ವಿಮರ್ಶೆ ಬರೆದಿದ್ದಾರಂತೆ ಒಬ್ಬರು! ಕನ್ನಡದಲ್ಲಿ ಎಸ್. ದಿವಾಕರ್ ಸರ್ ಸಹ ಈ ಕತೆಯ ಕುರಿತು ಪುಟಗಳಗಟ್ಟಲೆ ವಿಮರ್ಶೆ ಬರೆದಿದ್ದಾರೆ.) ಮಗುವಿನ ಶೂ ಕತೆ ಸಹ ಕಡಿಮೆ ತಾಕತ್ತಿನದೇನಲ್ಲ. 
ನಂತರ ‘ಈ ಹೊತ್ತಿಗೆ’ಯ ಕಥಾ ಕಮ್ಮಟದಲ್ಲೂ ಈ ಅತಿ ಸಣ್ಣ ಕತೆಗಳ ಪ್ರಸ್ತಾಪವಾಯಿತು. ನಾನಿನ್ನೂ ಕಮ್ಮಟದ ಗುಂಗಿನಲ್ಲಿದ್ದಾಗಲೇ ಮನೋಹರ್ ನಾಯಕ್ (ಮುಂಬೈನ ಧ್ವನಿಮುದ್ರಣ (Audio Recording) ಸಂಸ್ಥೆಯಾದ ಲಿಂಗೊ ಇಂಡಿಯಾ ಲಿಮಿಟೆಡ್ನೇ ಮಾಲಿಕರು) ಅವರು ಫೇಸ್ಬುಸಕ್ನರಲ್ಲಿರುವ Terribly Tiny Tale ಪುಟದಿಂದಾಯ್ದ ಕತೆಗಳನ್ನು ಕನ್ನಡದಲ್ಲಿ ಭಾವಾನುವಾದ ಮಾಡುವ ಚಟುವಟಿಕೆಯೊಂದನ್ನು ತಮ್ಮ ಸ್ನೇಹ ಬಳಗದಲ್ಲಿ ಶುರು ಮಾಡಿದರು. ಅದು ನನಗೆ ತುಂಬಾ ಆಸಕ್ತಿದಾಯಕವೆನಿಸಿ, ಅವರ ಸಾರಥ್ಯದಲ್ಲೇ ಫೇಸ್ ಬುಕ್ ನ ನನ್ನ ಮುಖಪುಟದ ಮೇಲೆ ಮುಂದುವರೆಸಿದೆ. ಇದರಲ್ಲಿ ಸ್ನೇಹಿತರ ಪಾಲ್ಗೊಳ್ಳುವಿಕೆಯ ಉತ್ಸಾಹ ಕಂಡು ಕನ್ನಡ ಭಾಷೆಯದೇ ಇಂಥಾ ಕತೆಗಳಾದರೆ ಎಷ್ಟು ಚೆನ್ನ ಎನ್ನುವುದು ನನ್ನ ಮನದಲ್ಲಿ ಹೊಳೆದು, ಅದು ಹೃಸ್ವಕತೆಯ ಹುಟ್ಟಿಗೆ ಕಾರಣವಾಯಿತು.
ನಮ್ಮ ಕನ್ನಡಕ್ಕೆ ಕನಿಷ್ಟ ಸಾಲುಗಳಲ್ಲಿ ಗರಿಷ್ಟವಾದುದನ್ನು ಹೇಳುವ ತಾಕತ್ತು ಹೇರಳವಾಗಿ ಇರುವುದರಿಂದ ಅಂಥ ಬಹಳಷ್ಟು ಅತಿ ಸಣ್ಣ ಕತೆಗಳನ್ನು ನಾವು ಕನ್ನಡಿಗರು ಕೊಡಬಲ್ಲೆವು ಅನಿಸಿತು. ಜೊತೆಗೆ ಹೊಸ ಬರಹಗಾರರು ಹೊಟ್ಟಿಕೊಳ್ಳಲು ಒಂದು ಅವಕಾಶವಿದು ಅಂತಲೂ ಅನಿಸಿತು. ಹೊಸ ವರ್ಷದ ಮೊದಲ ದಿನ ಇದನ್ನು ಕಾರ್ಯರೂಪಕ್ಕೆ ತರಬೇಕೆಂದು ನಿಶ್ಚಯಿಸಿದೆ. ಪುಟ್ಕತೆ ಅನ್ಬೇಕು ಅನ್ಕೊಂಡಿದ್ದೆ. ಹೃಸ್ವ ಪದ ಕಡಿಮೆ ಬಳಕೆಯಲ್ಲಿರುವುದರಿಂದ ಮತ್ತು ಅತೀ ಸಣ್ಣ ಅನ್ನುವ ಅರ್ಥವೂ ಇದೆಯಾದ್ದರಿಂದ ಹೃಸ್ವಕತೆ ಅಂದರೆ ಚೆನ್ನಾಗಿರುತ್ತೆ ಅಂದರು ಸ್ನೇಹಿತರಾದ ಮನೋಹರ್ ನಾಯಕ್. ಮನೋಹರ್ ಅವರೊಡನೆ ಪುಟ ವಿನ್ಯಾಸ ಕುರಿತು, ಪ್ರೊಫೈಲ್ ಫೋಟೊ ಮತ್ತದರಲ್ಲಿನ ಬರವಣಿಗೆ ಹೇಗಿರಬೇಕೆಂಬುದರ ಕುರಿತು, ಪುಟವನ್ನು ಸ್ನೇಹಿತರ್ಯಾರಾದರೂ ನನ್ನ ಜೊತೆಯಾಗಿ ನಿರ್ವಹಿಸಬಲ್ಲರಾ ಎನ್ನುವುದರ ಕುರಿತು ಸುಮಾರು ಹೊತ್ತು ಚರ್ಚಿಸಿ, ಕೊನೆಗೆ ಅಂಥವರು ಸಿಗದೇ, ನಾನೊಬ್ಬಳೇ ನಿರ್ವಹಿಸುವುದು ಎಂದಾಗಿ, ಪುಟದ ಪ್ರೊಫೈಲ್ ಮತ್ತು ಕವರ್ ಫೋಟೊಗಳನ್ನು ನನ್ನ ಮಗ ಅಮೋಲ್ ನಿಂದ ತಯಾರಿಸಿಕೊಂಡು (ಫೋಟೊಗಳ ರೀತಿಯಲ್ಲಿ ‘ಟೆರ್ರಿಬಲಿ ಟೈನಿ ಟೇಲ್’ನ ನಿರ್ವಾಹಕರು ಕತೆಗಳನ್ನು ಪ್ರಕಟಿಸುತ್ತಿದ್ದುದನ್ನು ಕಂಡು ಅದನ್ನೇ ಅನುಸರಿಸಿದೆ) ಇದೇ ವರ್ಷದ ಮೊದಲ ದಿನದಂದು ‘ಹೃಸ್ವಕತೆ’ ಪುಟವನ್ನು ಫೇಸ್ಬುಕ್ನಲ್ಲಿ ಪ್ರಾರಂಭಿಸಿಯೇಬಿಟ್ಟೆ.
ಹೀಗೆ, ೦೧ ಜನವರಿ ೨೦೧೫ರಂದು ‘ಹೃಸ್ವಕತೆ’ ಹುಟ್ಟಿಕೊಂಡಿತು. ೦೨.೦೧.೨೦೧೫ರಂದು ಮೊದಲ ಐದು ಕತೆಗಳು ಪ್ರಕಟಗೊಂಡವು. ನಂತರ ದಿನಕ್ಕೆರೆಡು ಕತೆಗಳು ಭಾನುವಾರದ ಹೊರತಾಗಿ ಪ್ರಕಟಗೊಂಡವು. ಈಗದು ನನ್ನ ಸಮಯದ ಅಭಾವದಿಂದಾಗಿ ಪ್ರತಿ ಗುರುವಾರಕ್ಕೊಮ್ಮೆ ಅಂತಾಗಿದೆ. ಉತ್ತಮವಾದವುಗಳನ್ನೇ ಆಯ್ದು ಪ್ರಕಟಿಸುವುದು ಎಂದು ನಿಶ್ಚಯಿಸಿರುವುದರಿಂದ ಕೆಲವೊಮ್ಮೆ ವಾರಕ್ಕೊಂದೇ ಕತೆ ಪ್ರಕಟಗೊಳ್ಳುವುದೂ ಇದೆ! ಅನೇಕ ಜನ ಸಾಹಿತ್ಯಾಸಕ್ತರು, ಕತೆಗಾರರು, ಹಾಗೂ ಕೋರಿಕೆಯ ಮೇರೆಗೆ ಕೆಲವು ಖ್ಯಾತ ಕತೆಗಾರರು ಇಲ್ಲಿ ಹೃಸ್ವಕತೆಗಳನ್ನು ಬರೆಯುವುದರ ಮೂಲಕ, ಓದಿ ತಮ್ಮ ಅಭಿಪ್ರಾಯಗಳನ್ನು , ಮೆಚ್ಚುಗೆಯನ್ನು ವ್ಯಕ್ತಪಡಿಸುವುದರ ಮೂಲಕ ಭಾಗವಹಿಸುತ್ತಾ ಹೃಸ್ವಕತೆ ಪುಟವನ್ನು ಮುನ್ನಡೆಸುತ್ತಿದ್ದಾರೆ. ಮುಂದುವರೆಸುವ ಭಾರವೂ ಅವರುಗಳ ಹೆಗಲ ಮೇಲಿಯೇ. ನಾನೇನಿದ್ದರೂ ಇಲ್ಲಿ ನಿಮಿತ್ತ ಮಾತ್ರ. 
ಅನೇಕ ವಾಹ್! ವಾಹ್! ಅನ್ನುವಂಥ ಕತೆಗಳು ಹೃಸ್ವಕತೆ ಪುಟದಲ್ಲಿ ಮೂಡಿದ್ದು ನನಗೊಂದು ಪುಟ್ಟ ಸಾರ್ಥಕತೆಯ ಭಾವವನ್ನು ಒದಗಿಸಿವೆ. ಇಲ್ಲಿಯವರೆಗೆ ಒಟ್ಟು 176 ಹೃಸ್ವಕತೆಗಳು ಪ್ರಕಟಗೊಂಡಿವೆ. ‘ಹೃಸ್ವಕತೆ’ ಪುಟಕ್ಕಾಗಿ ಕತೆಗಳನ್ನು ಬರೆಯುತ್ತಿರುವ ಎಲ್ಲ ಕತೆಗಾರರಿಗೂ ನಾನೀ ಹೊತ್ತಲ್ಲಿ ಕೃತಜ್ಞತೆಗಳನ್ನ ಹೇಳಲಿಚ್ಛಿಸುತ್ತೇನೆ. ನಡೆವ ದಾರಿ ಇನ್ನೂ ತುಂಬಾ ಉದ್ದಕಿದೆ. ನಮ್ಮ ಕನ್ನಡದ ಹೃಸ್ವಕತೆಗಳು ಜಗತ್ತಿನ ಅತ್ಯುತ್ತಮ ಅತಿ ಸಣ್ಣ ಕತೆಗಳ ಸಾಲಲ್ಲಿ ಸೇರಬೇಕೆಂಬುದು ನನ್ನಾಸೆ. ಅದು ನೆರವೇರುವುದೆಂಬ ಭರವಸೆಯೂ ನನಗಿದೆ. ಯಾಕೆಂದರೆ ಕನ್ನಡ ಭಾಷೆಯ ಸತ್ವ ಅಂಥದ್ದು.
ಇಲ್ಲಿ ಬರೀ ಕತೆಗಳ ಬಗ್ಗೆ ಮಾತ್ರವಲ್ಲ, ‘ಹೃಸ್ವಕತೆ’ ಎಂಬ ಶೀರ್ಷಿಕೆಯ ಬಗ್ಗೆಯೂ ಸಹ ಹೃಸ್ವ ಅಲ್ಲ ಅದು ಹ್ರಸ್ವ ಎಂದಾಗಬೇಕು, ನಿಘಂಟಿನಲ್ಲಿ ಹ್ರಸ್ವ ಎಂದಿದೆ ಎಂದು ಅನೇಕರು ಮುಕ್ತವಾಗಿ ಚರ್ಚಿಸಿದ್ದಾರೆ. ಹೌದು ನಿಘಂಟಿನಲ್ಲಿ ಹ್ರಸ್ವ ಎಂದಿದೆ ನಿಜ. ಆದರೆ ಮುಂಚೆ ಹೃಸ್ವ ಎಂದೇ ಬಳಕೆಯಲ್ಲಿತ್ತು ಈ ಪದ. ಜೊತೆಗೆ ಋ ಕಾರ ತನ್ನ ಅಸ್ತಿತ್ವವನ್ನು ಕಳೆದುಕೊಂಡು ನಿಧಾನವಾಗಿ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಅದನ್ನು ಚಿಕ್ಕಂದಿನಿಂದಲೂ ಬಳಸಿದ ವ್ಯಾಮೋಹ ಮತ್ತು ನಾನು ಕಲಿತಿದ್ದು (ಶಾಲೆಯಲ್ಲಿ ಕಲಿಸಿದ್ದು), ಅನೇಕ ಹಿರಿಯ ಖ್ಯಾತ ಸಾಹಿತಿಗಳೂ ಹೃಸ್ವ ಎಂದೇ ಬಳಸಿದ್ದು, ‘ಹೃಸ್ವ’ ಪದ ತಪ್ಪಲ್ಲವೆಂಬ ನಿರ್ಧಾರಕ್ಕೆ ಬರಲು ಕಾರಣವಾಗಿ ಹೃಸ್ವವನ್ನು ಹ್ರಸ್ವವನ್ನಾಗಿಸದೆ ಹಾಗೇ ಉಳಿಸಿಕೊಂಡು ಬಂದಿದ್ದೇನೆ.
ಹೃಸ್ವಕತೆ: ಸ್ನೇಹಿತರ ಕಿವಿಯಲ್ಲಿ ಮೆಲುದನಿಯಲ್ಲಿ ಗಹನವಾದುದನ್ನು ಚುಟುಕಾಗಿ ಹೇಳಿ ಮುಗಿಸುವಂತೆ, ಅದನಾಲಿಸಿದವರ ಕಣ್ಣಲ್ಲಿ ಮೂಡುವ ಬೆರಗಿನಂತೆ, ನೋವಿನಂತೆ, ನಲಿವಿನಂತೆ, ಅರ್ಥವಾಯಿತು ಎಂದು ತಲೆದೂಗಿದಂತೆ, ಕಣ್ಣು ಕಿರಿದಾಗಿಸಿ ವಿಚಾರ ಮಾಡುವಂತೆ, ಓದಿದವರು ಮರೆಯದಂತೆ ಕಾಡುವ, ಕನಿಷ್ಟ ಸಾಲುಗಳಲ್ಲಿ ಗರಿಷ್ಟವಾದುದನ್ನು ಹೇಳುವ ಬಗೆ! 
-ಜಯಲಕ್ಷ್ಮೀ ಪಾಟೀಲ್
ಫೇಸ್ ಬುಕ್ ನಲ್ಲಿ ಹೃಸ್ವ ಕತೆ : http://on.fb.me/1PlR020
Posted by: RK | Source: Online Desk

Tuesday, October 25, 2016

ತೋಂತನನ ಧಿರಿನ...



ಇದು ನಾನು ಬರೆಯುತ್ತಿರುವ ಕತೆಯ ಭಾಗ. ಕತೇನ ಮುಂದುವರೆಸೋದಾ? ಬೇಡ್ವಾ? ಹೇಳಿ.

ತೋಂತನನ ಧಿರಿನ...
------------------------

“ಐ ಲವ್ ಯೂ”

“ನಾನೂ”

“ನಾನೂ ಅಂದ್ರೆ ಏನು ನಾನೂ?? ನನಗರ್ಥವಾಗಲಿಲ್ಲ, ಹಾಗಂದ್ರೆ ಏನು ಹೇಳಿ?” ಹೀಗೆ ಕೇಳುವಾಗ ತುಂಟ ನಗೆಯೊಂದು ಅವನ ಮುಖದಲ್ಲಿ ಮೂಡಿರುವುದನ್ನು ಅವನ ದನಿಯಿಂದಲೇ ಗುರುತಿಸಬಲ್ಲಳು ಅವಳು. ಅದು ಅವಳನ್ನು ಇನ್ನೂ ನಾಚಿಕೊಳ್ಳುವಂತೆ ಮಾಡಿಬಿಡುತ್ತದೆ.

’ಏನಿಲ್ಲ” ಎಂದು ಬಿಡುತ್ತಾಳೆ ಪಟಕ್ಕಂತ.

“ರೀ ಬೇಗ, ಫೋನ್ ಬಿಲ್ ಹೆಚ್ಚಾಗುತ್ತೆ”

“ಊಂಹೂಂ ನನ್ ಕೈಲಾಗಲ್ಲ ಹೋಗ್ರಿ”

“ಕೈಲೆ ಅಲ್ಲ್ರೀ ಬಾಯಿಲೆ ನೀವು ಹೇಳಬೇಕಾಗಿದ್ದು, ಪ್ಲೀಸ್ ಪ್ಲೀಸ್ ಪ್ಲೀಸ್”

“ರೀ....”

“ಏನ್ರೀ..?”

“ರೀ....” ಸತಾಯಿಸಬೇಡಿ ದಮ್ಮಯ್ಯ ಅನ್ನುವ ಕೋರಿಕೆ ದನಿಯಲ್ಲಿ.

“ಹೇಳ್ರೀ ಬೇಗ”

“ಊಂಹೂಂ”

"ನಾನ್ ಹೇಳಲ್ವಾ? ನಿಮ್ ಥರಾ ಆಡ್ತೀನಾ? ಇವತ್ತಿಗೆ ಆರ್ ತಿಂಗಳಾಯ್ತು, ನಾನು ದಿನಾಲೂ ತಪ್ಪದೇ ಅಷ್ಟಷ್ಟು ಸಲ ಹೇಳ್ತೀನಿ, ನೀವು ಮಾತ್ರ... ಇವತ್ತು ನೀವು ಹೇಳಿಲ್ಲಾಂದ್ರೆ ಅಂದ್ರೆ ನಾನಿನ್ಮುಂದೆ ಮಾತೇ ಆಡಲ್ಲ ಹೋಗಿ. ನಿಜ್ಜ ಹೇಳ್ತಿದೀನಿ!"

“ ರೀ ಪ್ಲೀssಸ್...”

“ಸರಿ ಹಾಗಿದ್ರೆ ಹೇಳಿ ಮತ್ತೆ. ಬೇಗ”

“ಅದು... ಅದು... ಅ.. ಅ..ಅ...” ಅವಳು ಫೋನ್ ಹಿಡಿದ ಅಂಗೈ ಪೂರ್ತಿ ಬೆವರಿ, ಸಣ್ಣಗೆ ಕಂಪಿಸುತ್ತಿರುವ ಹೃದಯ, ಅದರುತ್ತಿರುವ ತುಟಿ, ಮೈಯ ಇಡೀ ರಕ್ತ ಮುಖಕ್ಕೇ ನುಗ್ಗಿತೇನೋ ಎಂಬಂತೆ ಬಿಸಿಯಾದ ಮುಖ, ಲಜ್ಜೆಯಿಂದ ಬಾಗಿದ ಕಣ್ಣುಗಳು...

“ಹೂಂ....”

“...........”

“ಮಗೂ, ಪ್ಲೀಸ್ ಒಂದೇ ಒಂದ್ಸಲ...ಅದೇನ್ ಅಷ್ಟು ಕಷ್ಟದ್ದಾ? ಸೋ ಸಿಂಪಲ್, ನಾನ್ ಹೇಳೊಲ್ವಾ?”

ಸಹನೆಗೆಡದ ಅವನು ಪುಸಲಾಯಿಸುತ್ತಲೇ ಇದ್ದ. ಅವಳು ಅ... ಅ... ಐ.... ತಡವರಿಸುತ್ತಲೇ ಇದ್ದಳು. ಕೊನೆಗೊಮ್ಮೆ ಅವಳ ಕಣಕಣದಲ್ಲೂ ಹರಿದಾಡುತ್ತಿದ್ದ ಭಾವ ತುಟಿ ಬಿರಿದು ಉಕ್ಕಿದ್ದೂ ಆಯ್ತು! ಆ ಕಡೆಯಿಂದ ಮುತ್ತಿನ ಸುರಿಮಳೆ. ಈ ಕಡೆ ಇವಳು ಸಂಭ್ರಮಕ್ಕೆ ನಡುಗುತ್ತಿರುವ ಕಾಲುಗಳನ್ನು ಗಟ್ಟಿ ನೆಲಕ್ಕೂರುತ್ತಾ ಗೋಡೆಗಾನಿಸಿ ನಿಧಾನಕ್ಕೆ ಕುಳಿತುಕೊಂಡಳು. ಕೆಲ ಕ್ಷಣಗಳ ನಂತರ ಆ ಕಡೆಯಿಂದ ಅವನು ಮೃದುವಾದ ದನಿಯಲ್ಲಿ,
“ಫೋನ್ ಇಡ್ಲಾ...?’
ಇವಳು ಹೇಳಿದಳೋ ಇಲ್ಲವೋ ಅನ್ನುವಷ್ಟು ಮೆಲುದನಿಯಲ್ಲಿ, “ಊಂಹೂಂ......” ಫೋನ್ ಡಿಸ್ಕನೆಕ್ಟ್ ಮಾಡದೆ, ಮಾತೂ ಆಡದೆ ಮೌನವಾಗಿದ್ದುಕೊಂಡೇ ಎಷ್ಟೋ ಹೊತ್ತಿನ ತನಕ ಇಬ್ಬರೂ ಜೊತೆಗಿದ್ದರು, ತಂತಾನೇ ನಿಸ್ತಂತು ನಿಸ್ತೇಜವಾಗುವ ತನಕ....

ಏನೀ ಮಹಾನಂದವೇ, ಓ ಭಾಮಿನಿ, ಏನೀ ಸಂಭ್ರಮದಂದವೇ, ಬಲು ಚಂದವೆ...

ತನ್ನನ್ನು ತಾನು ಪ್ರೀತಿಸುವುದಕ್ಕಿಂತಲೂ ಅವನನ್ನು ಪ್ರೀತಿಸುವ ಅವಳ ನಡುವಳಿಕೆಯಲ್ಲಿ, ಮಾತಿನ ಹಿನ್ನೆಲೆಯಲ್ಲಿ ಡಿಫಾಲ್ಟ್ ಎಂಬಂತೆ ಅವನ ಪ್ರತಿ ಹೊಮ್ಮುತ್ತಿದ್ದ ಪ್ರೀತಿ, ಮಾತಾಗಿ ಬರಲು ಮಾತ್ರ ಯಾವಾಗಲೂ ಲಜ್ಜೆಯಿಂದಾಗಿ ತಡವರಿಸುತ್ತಿತ್ತು. ಅದನ್ನವ ಚೆನ್ನಾಗಿ ಬಲ್ಲವನಾಗಿದ್ದರಿಂದಲೇ ಅವಳಿಂದ ಐ ಲವ್ ಯೂ ಹೇಳಿಸಿಕೊಳ್ಳೋದು ಅವನಿಗೆ ಮುದ. ಸತಾಯಿಸಿ ಸತಾಯಿಸಿ ಅವಳಿಂದ ಹೇಳಿಸಿಯೇ ಸೈ. ಕೆಲವೊಮ್ಮೆ ಹೇಳಲೂ ಆಗದೆ, ಹೇಳದಿರಲೂ ಆಗದೆ, ಅವನು ಐ ಲವ್ ಯೂ ಅಂದಾಗಲೆಲ್ಲ “ನಾನೂss...” ಅಂದು ಬಿಡುವಳು. ಮತ್ತೆ ಅವನ ತುಂಟತನ ಶುರು, “ನಾನೂ ಅಂದ್ರೆ ಏನು ನಾನೂ?? ನನಗರ್ಥವಾಗಲಿಲ್ಲ, ಹಾಗಂದ್ರೆ ಏನು ಹೇಳಿ?”

***

ಸಾಹಿತ್ಯ ಸಮಾರಂಭವೊಂದರಲ್ಲಿ ಅವರಿಬ್ಬರ ಪರಿಚಯವಾಗಿ ವರ್ಷದ ಮೇಲಾಗಿತ್ತು. ಯಾವುದಾದರೂ ಸಭೆ ಸಮಾರಂಭಗಳಲ್ಲಿ ಆಗಾಗ ಭೇಟಿಯಾದಾಗಲೆಲ್ಲ, ‘ಚೆನ್ನಾಗಿದೀರಾ?’ ‘ಚೆನ್ನಾಗಿದೀನಿ’. ‘ನೀವೂ” “ನಾನೂ’. ಎನ್ನುವುದರ ಜೊತೆಗೆ ಇನ್ನೊಂದೆರೆಡು ಮಾತುಗಳನ್ನು ಬಿಟ್ಟರೆ, ಹೆಚ್ಚು ಮಾತಿಲ್ಲದ್ದವರು ಅವರಿಬ್ಬರೂ. ಅದೊಂದು ದಿನ ಬಾಂದ್ರಾ ರೇಲ್ವೆ ಸ್ಟೇಷನ್ನಿನಲ್ಲಿ ಇವರಿಬ್ಬರ ಅಚಾನಕ್ ಭೇಟಿಯಾಗಿ, ಇಬ್ಬರೂ ಒಂದೇ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಗೊತ್ತಾಗಿ ಜೊತೆಗೂಡಿ ಸ್ಟೆಷನ್ನಿನ ಒಳಗೆ ಬರುವಷ್ಟರಲ್ಲಿ ಲೋಕಲ್ ಟ್ರೇನ್ ಬಂದು ನಿಂತಾಗಿತ್ತು. ಲೇಡೀಸ್ ಕಂಪಾರ್ಟ್ಮೆಂಟ್ ದೂರವಿದ್ದ ಕಾರಣ ತನ್ನ ಜೊತೆಗೇ ಬರಲು ಹೇಳಿದವನ ಮಾತನ್ನು ಒಪ್ಪಿದ ಅವಳು ಟ್ರೇನ್ ಹತ್ತಿದ್ದಳು. ಎಂದಿನಂತೆ ವಿಪರೀತ್ ರಶ್. ಜನರನ್ನು ತಳ್ಳಿಕೊಂಡು ಜಾಗ ಮಾಡಿಕೊಳ್ಳುತ್ತಾ, ಬಾಗಿಲಿಗೆ ತುಸು ದೂರವಾಗಿ ಬೆನ್ನಾಸರೆಗೆ ಜಾಗ ಸಿಕ್ಕಲ್ಲಿ ಬಂದು ನಿಂತವಳು ನುಗ್ಗುವ ಜನರ ಒತ್ತಡಕ್ಕೆ ಕದಲಲೂ ಆಗದೆ ನಿಲ್ಲಲೂ ಆಗದೆ ಒದ್ದಾಡುತ್ತಿರುವಷ್ಟರಲ್ಲಿ, ಅವಳನ್ನು ಮುಂದು ಮಾಡಿಕೊಂಡು ಏರಿದ್ದ ಅವನು ಅವಳ ಎದುರು ನಿಂತು, ಅವಳು ಆಸರೆಯಾಗಿ ನಿಂತ ಆ ಕಬ್ಬಿಣದ ಗೋಡೆಯ ಮೇಲೆ ತನ್ನೆರೆಡೂ ಕೈಗಳನ್ನೂರಿ ಅವಳಿಗೆ ಭದ್ರ ಕೋಟೆಯಾಗಿ ನಿಂತ. ಉಸಿರಾಡಲು ತುಸು ಗಾಳಿ ಸಿಕ್ಕಂತಾಗಿ ಅವಳು ಸಾವರಿಸಿಕೊಂಡು ತಲೆ ಎತ್ತಿ ನೋಡಿದರೆ ನಾಲ್ಕು ಬೆರಳಿನಂತರದಲ್ಲಿ ನಿಂತಿದ್ದ ಅವನು! ಥ್ಯಾಂಕ್ಸ್ ಹೇಳಲು ಬಾಯ್ದೆರದವಳನ್ನು ಸುಮ್ಮನಾಗಿಸಿ ಅರಿವಿಲ್ಲದೆಯೇ ಲಜ್ಜೆಯಿಂದ ನೆಲ ನೋಡುವಂತೆ ಮಾಡಿದ್ದು ಅವನ ಕಣ್ಣುಗಳು! ಆ ಒಂದು ಕ್ಷಣದಲ್ಲಿ ಅದೆಷ್ಟೆಲ್ಲ ಮಾತನಾಡಿದ್ದವು ಮಿತಿಭಾಷಿಯ ಕಣ್ಣುಗಳು! ಉಸಿರಾಡಲು ಸಿಕ್ಕ ತುಸು ಗಾಳಿಗೀಗ ಮಧುರ ಕಂಪೊಂದು ಬೆರೆತು ನಸುಕಂಪನ ಅವಳ ಒಡಲಲ್ಲಿ...

ಯಾವುದೀ ಹೊಸ ಸಂಚು, ಎದೆಯಂಚಿನಲಿ ಮಿಂಚಿ.... ಮನಸು ಕನಸುಗಳನ್ನು ಕಲಿತಿರುವುದು.. ಗಿರಿ ಕಮರಿಯಾಳದಲಿ ತೆವಳಿಟ್ಟ ಭಾವಗಳ, ಮುಗಿಲ ಮಂಚದಲ್ಲಿಟ್ಟು ತೂಗುತಿಹುದು...

- ಜಯಲಕ್ಷ್ಮೀ ಪಾಟೀಲ್

Sunday, October 16, 2016

ನೆಲ ಸೋಕದ ಕನಸು

ಆಸರೆ ಬಯಸುವ ಮನಸು
ಜೀಕುವುದು ಅನವರತ ಕನಸು
ಕನಸುಗಳನು ಕೊಲ್ಲುವ ಮೊನಚು
ಶರಗಳನ್ನು ಹೂಡುವನು ಕಾಲ
ಹೆದೆಯೇರಿಸಿ ಬಿಲ್ಲ ಝೇಂಕರಿಸುತ್ತಾ
ಹೂಂಕರಿಸುತ್ತಾ ಅಟ್ಟಹಾಸ
ಅನುಗೊಳ್ಳಬೇಕು ನನಗೆ ನಾನೆ ಎನ್ನುವ ಆಸರೆಗೆ
ಮಟ್ಟಹಾಕಬೇಕು ವಿಕಟ ಅಟ್ಟಹಾಸವ
ಕಾಲನನ್ನು ಕಾಲಲ್ಲಿ ಮೆಟ್ಟಿ ಕುಣಿಸಬೇಕು
ನೆಲ ಸೋಕದ ನನ್ನ ಹೆಜ್ಜೆಗಳ ತಾಳಕ್ಕೆ
ಗೆಜ್ಜೆಗಳ ಝೇಂಕಾರ ಮುಗಿಲು ಮುಟ್ಟಬೇಕು
ಕಾಲ ದಣಿದು ಬಸವಳಿದು ಕಾಲ್ಕೋಳವಾಗುವ
ಮೊದಲು ಸಾಗಬೇಕು ಕುಣಿತದ ಹೆಜ್ಜೆ
ದೂರ ದೂರಕ್ಕೆ ಎತ್ತರೆತ್ತರಕ್ಕೆ
ತೇಲಬೇಕು ಗಾಳಿಯಲ್ಲಿ ಸುಗಂಧವಾಗಿ
ಅದೋ ಅದೋ ಕನಸುಗಳು
ನನಸಾಗಿ ಘಮಗುಡುತ್ತಾ ಮುಗಿಲೇರಿ
ಮುತ್ತಿಕ್ಕಿದ ಮುದಕೆ ಗಗನ ದ್ರವಿಸಿ
ಹನಿಯುತಿದೆ ಭುವಿಯೊಡಲಲಿ
ಮತ್ತೆ ಅದೆಷ್ಟೋ ಕನಸುಗಳ ಮೊಳೆಕೆ
ಕನಸಿಗೂ ಕಾಲನಿಗೂ ಹೊಸ ಹುಟ್ಟು ಏಕಕಾಲದಲ್ಲಿ...

- ಜಯಲಕ್ಷ್ಮೀ ಪಾಟೀಲ್
(೧೫-೧೦-೨೦೧೬)

Wednesday, September 21, 2016

ಗೋಪಾಲ್ ವಾಜಪೇಯಿ ಕಾಕಾ...

ವಾಜಪೇಯಿ ಕಾಕಾ...
ನಾ ನಿಮ್ಮನ್ನ ಮದ್ಲೆ ಸರ್ತಿ ಭೆಟ್ಟಿ ಆಗಿದ್ದು ಯಾವಾಗ ಅಂತ ನೆನಪ ಆಗವಲ್ತು... :( ನಿಮ್ಮನ್ನ ಕಾಕಾ ಅಂತ ನಾನs ಮೊದಲ ಕರ್ದಾಕಿ. ಆಮ್ಯಾಲೆ ಎಲ್ಲಾರಿಗೂ ಇಲ್ಲಿ ನೀವು ಕಾಕಾ ಆದ್ರಿ. ಇನ್ನ ಕೆಲವು ಮಂದಿಗೆ ಮಾಮಾ ಆದ್ರಿ, ದೊಡ್ಡಪ್ಪ ಆದ್ರಿ, ಅಜ್ಜಾರಾದ್ರಿ, ಗೋ ವಾ ಸರ್ ಅಂತೂ ಸುರೂನಿಂದ ಇದ್ದ್ರಿ.

ಅವತ್ತ ನೆನಪೈತಿ ನಿಮಗ? ಸುನಿಲನ ಹುಟ್ಟಿದ ಹಬ್ಬಾ ಅಂತ ಅಂವಾ ನಮ್ಮೆಲ್ಲಾರ್ನೂ ಕರ್ದಿದ್ದ. ಮರದಿನಾನs ನಮ್ಮನ್ಯಾಗ ‘ಸಂಗೀತ ಸಂಜಿ’ ಇತ್ತು. ಬರ್ರಿ ಕಾಕಾ ಮನಿಗೆ ಅಂದೆ ನಾ. "ಒಬ್ಬಾಂವಗ ಮನಿ ಹುಡುಕ್ಕೊಂಡು ಬರೂದು ಆಗುದಿಲ್ಲ ಜಯಕ್ಕಾ, ಯಾರರ ಜೋಡ ಆದ್ರ ಬರ್ತೀನಿ" ಅಂದ್ರಿ. ನಿಮ್ ಬಾಜೂಕ ನವೀನ್ ಸಾಗರ್ ಕುಂತಿದ್ದ್ರು. ಅವ್ರಿಗೆ ಕೇಳ್ಕೊಂಡೆ. ನವೀನ್ ಹೂಂ ಅಂದೋರು ಅದೇನಾತೋ ಬರ್ಲಿಲ್ಲ, ಆದ್ರ ನೀವು ಬಂದ್ರಿ ಮಗನ್ನ ಕರ್ಕೊಂಡು. ಎಷ್ಟು ಖುಷಿ ಆತಂತೀರಿ ಅವತ್ತ! ಬಂದ್ರಿ, ಭಾರಿ ಖುಷೀಲೆ ಹಾಡಾ ಕೇಳಿದ್ರಿ. ರಮೇಶ್ ಗುರುರಾಜ್ ಸರ್ ರಂಗಗೀತೆ ಹಾಡಿದಾಗಂತೂ ನಿಮ್ಮಾರಿ ನೋಡುವಂಗಿತ್ತು! ಕೂಸಿಗೆ ಜಾತ್ರ್ಯಾಗ ಕಳ್ಕೊಂಡ ಅವ್ವ ಸಿಕ್ಕಷ್ಟು ಖುಷಿ ಇತ್ತು ನಿಮ್ಮ ಮಾರಿ ಮ್ಯಾಲೆ. ಕಣ್ಣಿಗೆ ಕಟ್ಟಿದಂಗೈತಿ ಅವತ್ತಿನ ನಿಮ್ಮ ಖುಷಿ. ಈಗ ಹಿಂಗ ನಾ ಮಾರಿ ಇಳಬಿಟಗೊಂಡು ಕುಂಡ್ರುವಂಗ ನೀವು ಮಾಡಿದ್ದು ನಿಮಗರ ಬರೊಬ್ಬರಿ ಅನಸ್ತೈತಿ?...

ನಿಮ್ಮ ‘ನಂದ ಭೂಪತಿ’ ಪುಸ್ತಕ ಹೊಳ್ಳಿ ಮತ್ತೊಮ್ಮೆ ಬಿಡುಗಡೆ ಆತಲ್ಲ ಅವತ್ತ, ಅದs ಸುಧಾ ಚಿದಾನಂದ ಗೌಡ ಮತ್ತ ಅವ್ರ ಮನಿಯವ್ರುದೂ ಪುಸ್ತಕ್‍ಗೋಳೂ ಬಿಡುಗಡೆ ಆದ್ವೂ, ಅವತ್ತ ನಾ ಮಂಗ್ಯಾನಂಥಾಕಿ ಭರ್ತಿ ಸಭಾದಾಗ, ಕುಂವಿ ಅವ್ರು ಹಿಂಗಂದ್ರು ಅಂತ ಯಾರೋ ಅಂದ ಮಾತಿಗೆ ಸಿಟ್ಟಾಗಿ, ಹಂಗೆಂಗಂದ್ರು ಅವ್ರು? ಅನಬಾರ್ದಿತ್ತು, ಹಂಗ ಹಿಂಗ ಅಂತ ಮೈಕ್ ಮುಂದ ನಿಂತು ಒದರ್ಯಾಡಿದೆ. ಹಂಗ ಮಾತಾಡ್ತಾ ಮಾತಾಡ್ತಾ ನಿಮ್ ಕಡೆ ನೋಡ್ದೆ. ನೀವು ಸಾಕ್ ಬಿಡಬೆ ಇನ್ನ ಅಂತ ಸೊನ್ನಿ ಮಾಡಿ ನನ್ನ ಗಪ್ಪ್ ಮಾಡಿದ್ದಲ್ದ, ಅಲ್ಲಿ ನಾ ಹಂಗ ವಿರೋಧಿಸಿ ಮಾತಾಡಿದ್ದಕ್ಕ ಸಿಟ್ಟಾದ ಒಂದಿಬ್ಬರನ್ನ ನನ್ನ ಪರ ನಿಂತು ಸುಮ್ಮ ಮಾಡಿದ್ರಿ. ಆಮ್ಯಾಕ ನಿಮಗ ನನ್ನಿಂದ ನಾಕ್ ಮಂದ್ಯಾಗ ಖಜೀಲ್ಯಾತು ಅನಿಸಿ, ಸಭಾ ಮುಗದ ಮ್ಯಾಲೆ, "ಕಾಕಾ, ನಾ ತಡಕೊಳ್ಳಾಕಾಗದ ಹೆಚ್ಚಿಗ್ ಮಾತಾಡ್ದೆ. ನನ್ನಿಂದ ನೀವು.."
"ಏನಾತ್ ತೊಗೊ ಜಯಕ್ಕಾ. ಆಕ್ಕಿರ್ತಾವು ಹಿಂಗ. ಅದನ್ನ ತಲಿಯೊಳಗ ಇಟಕೊಂಡು ಕುಂಡರ್ಬ್ಯಾಡ್ರಿ. ಹೋಗ್ಲಿ ಬಿಡ್ರಿ" ಅಂತ ಉಲ್ಟಾ ನನ್ನನ್ನs ಸಮಾಧಾನ ಮಾಡಿ ಸರಾಸರಾ ಅಲ್ಲಿಂದ ನಡದುಹೋದ್ರಿ. ಮತ್ತ ಬೇಕಾದಷ್ಟ ಸಲ ಸಿಕ್ಕ್ರಿ, ನಕ್ಕೋತ ಮಾತಾಡಿಸಿದ್ರಿ. ಆದ್ರ ಈಗ ಹಿಂಗ್ಯಾಕ ಹೊಡಮಳ್ಳಿ ಬರಾಕ ದಾರಿಲ್ಲದ ಊರಿಗೆ ನಡದ್ರಿ...?

ಅವತ್ತ ಮದ್ಯಾನ ಅನಸ್ತೈತಿ, ಫೋನ್ ಮಾಡಿದ್ರಿ. "ಜಯಕ್ಕಾ, ನನ್ನ ‘ಸಂತ್ಯಾಗ ನಿಂತಾನ ಕಬೀರ’ ನಾಟ್ಕಾ ರೀಡಿಂಗ್ ಮಾಡಿದ್ರ ಹೆಂಗ?" ಅಂದ್ರಿ. ನಾ ಗಬಗ್ನ ಒಪಗೊಂಡೆ. ಇಬ್ರೂ ಸೇರೇ ಒಂದಿಷ್ಟು ಮಂದಿ ಉತ್ತರ ಕರ್ನಾಟಕದ ಕಲಾವಿದರನ್ನ ಕೇಳಿದ್ವ್ಯಾದ್ರೂ ನೀವು ಕೇಳಿದಾಗ ಒಪಗೊಂಡು ಬಂದೋರ ಹೆಚ್ಚು. ನಮ್ಮನ್ಯಾಗs ರೀಡಿಂಗ್ ಆತು. ಮಂಜುಳಾ ಬಬಲಾದಿ, ಶ್ರೀಪತಿ ಮಂಜನಬೈಲು, ಧನಂಜಯ್ ಕುಲಕರ್ಣಿ, ಪ್ರಮೋದ್ ಶಿಗ್ಗಾಂವ್, ದಿಲಾವರ್, ರಾಜು ಕುಲಕರ್ಣಿ, ನೀವು, ನಾನು, ಮತ್ತ್ಯಾರಿದ್ದ್ರು...? ಮರತಿನ್ರಿ ಕಾಕಾ, ನೆನಪಾಗವಲ್ತು.. ರಾಜು ಕುಲಕರ್ಣಿ ಅವರಂತೂ ಹೊಸ್ಪೇಟಿಯಿಂದ ಬಂದಿದ್ದ್ರು. ನಾವೆಲ್ಲಾರು ನಾಟ್ಕಾ ವಾಚನಾ ಮಾಡಿದ್ವಿ, ಒಂದಿಷ್ಟು ಮಂದಿ ಹಚಗೊಂಡೋರು ಬಂದು ಕೇಳಿ ಭಲೆ ಅಂದ್ರು. ಮತ್ತೊಂದು ಖುಷಿ ನನ್ನ ಉಡ್ಯಾಗ ಹಾಕಿದ್ರಿ ನೀವು ಅವತ್ತ. ಇವತ್ತ್ಯಾಕ ಹಿಂಗ ಮಾಡಿದ್ರಿ...?

ಮಗನ ಮದವಿ ಮಾಡಿ, ನಮ್ಮನ್ನೆಲ್ಲಾ ಮನಿಗೆ ಕರ್ಶಿ ಊಟಾ ಹಾಕಿಶಿದ್ರಿ. ಫೋನ್ ಮಾಡೀದಾಗೆಲ್ಲಾ ನಕ್ಕೋತ ಮಾತಾಡಿದ್ದ್ರಿ, ಒಮ್ಮೆ ಫೋನ್ ಮಾಡಿದ್ದಾಗ ನಿಮಗ ಆರಾಮ್ ತಪ್ಪಿತ್ತು. ಸುಸ್ತ್ ಆಗಿದ್ದ್ರೂ ಬ್ಯಾಸರಾ ಮಾಡ್ಕೊಂಡಾಳು ಅಂತ ಭಿಡೇಕ್ ಬಿದ್ದು ನೀವು ದಣದ ದನ್ಯಾಗ ಮಾತಾಡೂದು ಕೇಳಿ ನಾನs ‘ರೆಸ್ಟ್ ಮಾಡ್ರಿ ಕಾಕಾ ನಾ ಮತ್ತ ಮಾತಾಡ್ತೀನಿ.’ ಅಂತ ಫೋನ್ ಇಟ್ಟಾಕಿ ಮತ್ತ ನಿಮಗ ಫೋನ್ ಮಾಡೂದು ಆಗಲಿಲ್ಲ...

ಧನಂಜಯ್ ಹೇಳಿದ್ರು ಅವತ್ತ, ನೀವು ‘ಬಚ್ಚಾಸಾನಿ’ ನಾಟ್ಕಾ ಬರ್ದು, ಧನಂಜಯ್ ನಿರ್ದೇಶನ ಮಾಡಿ, ನಾನು ಮತ್ತ ಹನುಮಕ್ಕ ಇಬ್ರೂ ಒಂದs ಪಾತ್ರಾನ ಬ್ಯಾರೆ ಬ್ಯಾರೆ ಶೋ ಮಾಡೂದು ಅಂತ. ಅವತ್ತ ಖುಷೀಲೆ ಕುಣಕೋತ ಹೂಂ ಅಂದಿದ್ದೆ. ಯಾಕೊ ತಡಾ ಆಗಾಕತ್ತೈತಲ್ಲಾ ಅಂತ ಅನಿಸಿ ನಿಮ್ಮನ್ನ ಕೇಳಿದ್ರ, "ಧಾರವಾಡದ ಮಂದಿ ಬಗ್ಗೆ ಒಂದಿಷ್ಟು ಬರ್ಯಾಕತ್ತೀನಿ. ಅದನ್ನಿಷ್ಟು ಮುಗಿಶಿಬಿಟ್ಟ್ನೆಪಾ ಅಂದ್ರ ನೆಕ್ಸ್ಟ್ ‘ಬಚ್ಚಾ ಸಾನಿ’ನs. ಮಾಡೂನಂತ ಮಾಡೂನಂತ." ಅಂತಂದ್ರಿ. ಹಂಗಂದೋರು ಹಿಂಗ ಎದ್ದ ಹ್ವಾದ್ರ ಏನ್ ಮಾಡೂನ್ ಹೇಳ್ರಿ ನಾವು...? :(

ಬದುಕು ಭಾಳ ದಣಿಶೇತ್ರಿ ಕಾಕಾ ನಿಮ್ಮನ್ನ, ಹೊಡತದ ಮ್ಯಾಲೆ ಹೊಡತಾ ಕೊಟ್ಟೂ ಸೋತಿದ್ದು ಅದs ಈಗ! ನೀವು ಗೆದ್ದ್ರಿ ಕಾಕಾ, ನೀವು ಗೆದ್ದ್ರಿ...


(ಜೂನ್ ೧, ೧೯೫೧- ಸೆಪ್ಟೆಂಬರ್ ೨೦, ೨೦೧೬)

Monday, September 12, 2016

ನೀರಡಿಸಿದೆ ನೀರು



ನೀರಡಿಸಿದೆ ನೀರು, ಭಯಗೊಂಡಿದೆ ಭುವಿಯು (೨)

ಇಲ್ಲದೆ ಹೋದರೆ ಜೀವಜಲ

ಬದುಕುವೆಯಾ ನೀ ಮರುಳ ಮರುಳ


ಜುಳುಜುಳು ನಾದವ ಕಾಪಿಡು ನೀ

ಹರಿಯುವ ತೊರೆಯನು ಕಾಪಿಡು ನೀ

ಜಿನುಗುವ ಸೆಲೆಯ ಕಾಪಿಡು ನೀ

ಹನಿಹನಿ ಪ್ರತಿಹನಿ ಕಾಪಿಡು ನೀ

ಸೊರಗಿದೆ ಕಡಲು ಒಣಗಿದೆ ಮುಗಿಲು (೨)

ಜ್ವಲಿಸುತ ಅಳುತಿದೆ ಇಳೆಯಾ ಒಡಲು

ನೀರಡಿಸಿದೆ ನೀರು ಭಯಗೊಂಡಿದೆ ಭುವಿಯು (೨)


ಉಸಿರಿಗೆ ಹಸಿರಿಗೆ ನೀರು ನೆಲೆ

ಅರಿಯದೆ ಹೋದೆವು ಅದರ ಬೆಲೆ

ಜೀವದ ಸೆಲೆಯ ಉಳಿಸೋಣ

ಬದುಕಿನ ಬಿಂದಿಗೆ ಭರಿಸೋಣ

ಮುಂದಿನ ಪೀಳಿಗೆ ಕಾಣದು ನಾಳೆಯ (೨)

ಉಳಿಸದೆ ಹೋದರೆ ಶರಧಿಯ ಮರುಳ

ನೀರಡಿಸಿದೆ ನೀರು, ಭಯಗೊಂಡಿದೆ ಭುವಿಯು (೨)


ಹಿಂದಿ ಮೂಲ: ಮುನ್ನಾ ಧೀಮನ್
ಅನುವಾದ: ಜಯಲಕ್ಷ್ಮೀ ಪಾಟೀಲ್ (15 ಜುಲೈ 2012)



JAL NAA JAAYE JAL

JAL NAA JAAYE JAL (2)

DHARAA NAA KAL HO MAARUTHAL

SAMBHAL JAA RE AB PAAGAL PAAGAL

JAL NAA JAAYE JAL

JAL NAA JAAYE JAL (2)


ANTRA 1

SAAGAR SAAGAR PEHRA DE

GAAGAR GAAGAR PEHRA DE

BOOND BOOND PAR PEHRA DE

BAADAL BAADAL PEHRA DE

NADI HAI PYAASI

GHADAA HAI PYAASA (2)

MAR NA JAAYE KAL AREY PAAGAL

JAL NAA JAAYE JAL

JAL NAA JAAYE JAL (2)




ANTRA 2

SAANSON KA AUR BOONDON KA

DONON KA BAL EK SAA

DONON JEEVAN BAANTEIN

DONON KA PHAL EK SAA

BOONDON KO BHI

SAANSON JAISI (2)

MAAN KE CHAL , AREY SAMAJH LE PAAGAL

JAL NAA JAAYE JAL

JAL NAA JAAYE JAL (2)

- Munna Dhiman